

















ಯಲಹಂಕದಲ್ಲಿ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ :
ಯಲಹಂಕ : ನಾಡಪ್ರಭು ಕೆಂಪೇಗೌಡರ ಆದರ್ಶಗಳು, ಮೌಲ್ಯಗಳು ಮತ್ತು ಸೇವಾ ಮನೋಭಾವನೆಯನ್ನು ಪ್ರತಿಯೊಬ್ಬರೂ ಅಳವಡಿಸಿ ಕೊಳ್ಳಬೇಕು ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಕರೆ ನೀಡಿದರು.
ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಪ್ರಯುಕ್ತ ಯಲಹಂಕ ಕ್ಷೇತ್ರ ಬಿಜೆಪಿ ಹಾಗೂ ವಿವಿಧ ಸಮುದಾಯಗಳ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ ಬೆಂಗಳೂರು ನಗರ ನಿರ್ಮಾಣದಲ್ಲಿ ನಾಡಪ್ರಭು ಕೆಂಪೇಗೌಡರು ತೋರಿರುವ ದೂರದೃಷ್ಟಿ, ಸಮಾನತೆ ಎಂದೆಂದಿಗೂ ಆದರ್ಶಪ್ರಾಯ ವಾದದ್ದು. ಬೆಂಗಳೂರು ನಗರದಲ್ಲಿ ಅವರು ಕಟ್ಟಿರುವ ಕೆರೆಗಳು, ವಿವಿಧ ಕುಲಕಸುಬುಗಳ ಜನರಿಗಾಗಿ ನಿರ್ಮಿಸಿದ್ದ ಪೇಟೆಗಳು ಇಂದಿಗೂ ಸಹ ಜ್ವಲಂತವಾಗಿ ನಮ್ಮ ಕಣ್ಮುಂದೆ ಇವೆ. ಬೆಂಗಳೂರು ನಗರದಲ್ಲಿ ನೀರಿನ ಸಮಸ್ಯೆ ತಲೆ ದೋರಬಾರದು ಎಂಬ ನಿಟ್ಟಿನಲ್ಲಿ ಕೆರೆಗಳ ನಿರ್ಮಾಣಕ್ಕೆ ಅವರು ತೋರಿರುವ ಕಾಳಜಿ ನಿಜಕ್ಕೂ ಎಲ್ಲಾ ಕಾಲಕ್ಕೂ ಆದರ್ಶ ಪ್ರಾಯವಾಗಿದೆ, ಬೆಂಗಳೂರು ನಗರಕ್ಕೆ ಹಸಿರು ಪರಿಸರ ನೀಡಿದ ಕೆಂಪೇಗೌಡರು ಒಬ್ಬ ಆದರ್ಶವಾದಿ ಪರಿಸರ ಪ್ರೇಮಿಯಾಗಿದ್ದರು. ಕೆಂಪೇಗೌಡರ ದೂರ ದೃಷ್ಟಿಯಿಂದ ನಿರ್ಮಾಣಗೊಂಡ ಬೆಂಗಳೂರು ಇಂದು, ಮುಂದೆ, ಎಂದೆಂದಿಗೂ ದೇಶದ ಮತ್ತು ವಿಶ್ವದ ಗಮನ ಸೆಳೆಯುವ ಅದ್ವಿತೀಯ ನಗರವಾಗಿ ಕಂಗೊಳಿಸುವು ದರಲ್ಲಿ ಸಂದೇಹವಿಲ್ಲ, ಈ ದಿಸೆಯಲ್ಲಿ ಇಂದಿನ ಪೀಳಿಗೆ ಕೆಂಪೇಗೌಡರ ಆದರ್ಶಗಳನ್ನು ಮೈಗೂಡಿಸಿ ಕೊಂಡು ಮುನ್ನಡೆಯಬೇಕಿದೆ ಎಂದರು.
ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಪ್ರಯುಕ್ತ ಬೆಳಿಗ್ಗೆ 6:00ಗೆ ವೀರ ಸಾವರ್ಕರ್ ಮೇಲು ಸೇತುವೆಯ ಬಳಿಯಿಂದ ನಾಲ್ಕು ಕಿಲೋಮೀಟರ್ ಗಳ ವಾಕಥಾನ್, ಬೆಳಿಗ್ಗೆ 8.30 ಕ್ಕೆ ಯಲಹಂಕ ಹಳೇ ನಗರದಲ್ಲಿ ರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ, ಬಳಿಕ ವಿವಿಧ ಜಾನಪದ ಕಲಾತಂಡ ಗಳ ಕಲಾ ಪ್ರದರ್ಶನದ ನಡುವೆ ಯಲಹಂಕದ ರಾಜಭೀದಿಗಳಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರದ ಬೃಹತ್ ಮೆರವಣಿಗೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯ ಈ ಕಾರ್ಯಕ್ರಮದಲ್ಲಿ ಸಹಸ್ರಾರು ಬಿಜೆಪಿಯ ಕಾರ್ಯಕರ್ತರು, ಮುಖಂಡರು ಸೇರದಂತೆ ವಿವಿಧ ಸಮುದಾಯಗಳ ನಾಗರಿಕರು ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಿದರು.
