


ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಕೃಷಿ ಪದವೀಧರರು ಪ್ರಾರಂಭಿಸಿದ ನಂದಿ ಕೂಗು ಅಭಿಯಾನದ ಅಡಿಯಲ್ಲಿ 2026ರ ಬಸವ ಜಯಂತಿ ಅಂಗವಾಗಿ ಬಸವಕಲ್ಯಾಣದ ಸುತ್ತಲಿನ 11 ಗ್ರಾಮಗಳ ಜೋಡೆತ್ತಿನ ಕೃಷಿಕರ ಪಾದಪೂಜೆ ಕೈಗೊಂಡ ನಂತರ ಬಸವಕಲ್ಯಾಣದ ಪರುಷ ಕಟ್ಟೆಯಿಂದ ಕೂಡಲ ಸಂಗಮದ ವರೆಗೆ 13 ದಿನಗಳ ಕಾಲ ಪಾದಯಾತ್ರೆ ಕೈಗೊಂಡ ಅನುಭವದ ಆಧಾರದ ಮೇಲೆ ಈ ವಿಷಯವನ್ನು ಪ್ರಸ್ತಾಪಿಸಲಾಗುತ್ತಿದೆ.
ವಿಶ್ವದ ರೈತರ ಸಮಸ್ಯೆ: ನಂದಿ ಕೃಷಿಕರು ತಮ್ಮ ಶ್ರಮದಿಂದ ವಿಶ್ವಕ್ಕೆ ನೀಡುವ ಕೊಡುಗೆಯನ್ನು ನಿರ್ಲಕ್ಷಿಸಿ ಜಗತ್ತಿನ ಅನೇಕ ದೇಶಗಳು ಯಾಂತ್ರಿಕ ಕೃಷಿಗೆ ಪೂರಕ ಕಾನೂನು ಹಾಗೂ ಯೋಜನೆಗಳನ್ನು ಜಾರಿಗೆ ತಂದು ನಂದಿ ಸಂಪತ್ತು ಕಾಸಾಯಿಖಾನೆಯ ಪಾಲಾಗುವಂತೆ ಮಾಡುತ್ತಿವೆ.
ಇದರ ದುಷ್ಪರಿಣಾಮದಿಂದ ತಿನ್ನುವ ಅನ್ನ ಹಾಗೂ ಕುಡಿಯುವ ನೀರು ವಿಷವಾಗುತ್ತಿವೆ. ಈಗಾಗಲೇ ಕರ್ನಾಟಕ ರಾಜ್ಯದ 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲದ ಸ್ಥಿತಿಗೆ ತಲುಪಿವೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ರಾಜ್ಯದ 60 ಪ್ರತಿಶತ ಮಣ್ಣು ಅಸಹಜ ಸ್ಥಿತಿಗೆ ತಲುಪಿರುವುದನ್ನು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ತಿಳಿಸಿದ್ದಾರೆ. ಜೋಡೆತ್ತಿನ ಕೃಷಿಕರ ಸಂಖ್ಯೆ ಕಡಿಮೆಯಾದಂತೆ ಎಲ್ಲ ಗ್ರಾಮಗಳಲ್ಲಿ ರೋಗಗಳು ಹೆಚ್ಚಾಗಿ ಔಷಧಿಗಳು ಇಲ್ಲದಿರುವ ಮನೆಗಳನ್ನು ಹುಡುಕುವುದು ಕಷ್ಟವಾಗುತ್ತಿದೆ. ಭಾರತ ದೇಶದಲ್ಲಿ ಪ್ರತಿ ದಿನ ಅಂದಾಜು 2500 ಟ್ರಾಕ್ಟರ್ ಗಳು ಮಾರಾಟವಾಗುತ್ತಿವೆ. ಅಂದರೆ, ಪ್ರತಿ ದಿನ ಅಂದಾಜು 25000 ಲೀಟರ್ ನಷ್ಟು ಡೀಸೆಲ್ ಬೇಡಿಕೆ ಹೆಚ್ಚಾಗುತ್ತಾ ಸಾಗುತ್ತಿದೆ. ಭೂಮಿಯಲ್ಲಿ ತಾತ್ಕಾಲಿಕವಾಗಿ ಲಭ್ಯವಿರುವ ತೈಲ ಕೊರತೆಯಾಗಿ ಕೃಷಿ ಕಾಯಕ ಸ್ಥಗಿತವಾಗಿ ಸಮಾಜ ಜಟಿಲವಾದ ಸಮಸ್ಯೆ ಎದುರಿಸುವ ದಿನಗಳು ಹತ್ತಿರವಾಗುತ್ತಿವೆ. ಶಿವಲಿಂಗ ಹಾಗೂ ಇಷ್ಟಲಿಂಗ ಪೂಜಾ ಸಂಪ್ರದಾಯಗಳು ನಂದಿ ಕೃಷಿ ಸಂಸ್ಕೃತಿ ಉಳಿಸಿ ಬೆಳೆಸುವುದರ ಜೊತೆಗೆ ಕೌಟುಂಬಿಕ ಹಾಗೂ ಆಧ್ಯಾತ್ಮಿಕ ಜ್ಞಾನ ನೀಡುವುದಕ್ಕಾಗಿ ಜನ್ಮ ತಾಳಿವೆ ಎಂಬುದು ಇತಿಹಾಸದಿಂದ ತಿಳಿಯುತ್ತಿದೆ. ಇದೇ ಕಾರಣಕ್ಕಾಗಿ ಎಲ್ಲ ಮಠ-ಮಂದಿರಗಳಲ್ಲಿ ಹಾಗೂ ಅನೇಕ ಜನರ ಮನೆಯ ಜಗುಲಿಯ ಮೇಲೆ ನಂದಿ ಮೂರ್ತಿಗಳು ಇರುವುದನ್ನು ಕಾಣುತ್ತೇವೆ. ಎಲ್ಲ ನಂದಿ ಮೂರ್ತಿಗಳು ಜೋಡೆತ್ತಿನ ಕೃಷಿಕರ ಭಾವೈಕ್ಯತೆಯ ಸಂಕೇತವಾಗಿವೆ. ಆದರೆ, ಇಂದು ಶಿವಲಿಂಗ ಹಾಗೂ ಇಷ್ಟಲಿಂಗ ಪೂಜೆಗೆ ಬೇಕಾದ ಶುದ್ಧ ನೀರು ಕೂಡ ದೊರೆಯದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕಳೆದ 9 ಶತಮಾನಗಳಿಂದ ಅನೇಕ ಪರಕೀಯರ ದಾಳಿಗಳಾದರೂ ಕೂಡ ನಂದಿ ಕೃಷಿ ನಾಶವಾಗದಂತೆ ಹಿಂದಿನ ಪೂಜ್ಯರು ಉಳಿಸಿ ಬೆಳೆಸಿಕೊಂಡು ಬಂದಿರುವುದು ಇಂದು ವಿನಾಶದ ಅಂಚಿಗೆ ಬಂದು ತಲುಪಿದೆ.
ನಂದಿ ಮತ ಜಾಗೃತಿ ಪರಿಹಾರ: ನಂದಿ ಕೃಷಿ ಸಂಸ್ಕೃತಿಯ ಪ್ರತೀಕವಾದ ಶಿವಾಲಯಗಳು ಪರಕೀಯರಿಂದ ಧ್ವಂಸವಾದಾಗ ಜನರು ಚದುರಿಹೋದರೂ ಸಹ ಇಷ್ಟಲಿಂಗದ ಮೂಲಕ ಒಂದಾಗಿ ನಂದಿ ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂಬ ಉದ್ದೇಶದಿಂದ ಬಸವಣ್ಣನವರು ಇಷ್ಟಲಿಂಗ ಪೂಜಾ ಸಂಪ್ರದಾಯ ಪರಿಚಯಿಸಿದರು ಎಂಬುದು ಅಂದು ಹಾಗೂ ಇಂದಿನ ಪರುಷ ಕಟ್ಟೆಯ ವಾತಾವರಣ ಅವಲೋಕನೆಯಿಂದ ಸ್ಪಷ್ಟವಾಗಿ ತಿಳಿಯುತ್ತದೆ. ಬಸವಣ್ಣನವರ ಕಾಲದಲ್ಲಿ ಪರುಷ ಕಟ್ಟೆಯು ಜನರು ಬೇಡಿದ್ದನ್ನು ನೀಡುವ ಸ್ಥಳವಾಗಿರುವುದಕ್ಕೆ ಮೂಲ ಕಾರಣ ಅಂದು ಅಭಿವೃದ್ದಿ ಹೊಂದಿದ್ದ ಶ್ರೇಷ್ಠ ನಂದಿ ಕೃಷಿ ಸಂಸ್ಕೃತಿಯಾಗಿದೆ ಎಂಬುದು ಇತಿಹಾಸದಿಂದ ತಿಳಿಯುತ್ತದೆ. ಮುಂದಿನ ದಿನಗಳಲ್ಲಿ ಎಲ್ಲ ದೇಶಗಳಲ್ಲಿ ತೈಲ ಕೊರತೆಯಾಗುವುದು ನಿಶ್ಚಿತ. ಆ ಸಂದರ್ಭದಲ್ಲಿ ಟ್ರಾಕ್ಟರ್ ಕೃಷಿ ಸ್ಥಗಿತವಾಗಿ ಕೇವಲ ನಂದಿ ಕೃಷಿಕರ ಕಾಯಕ ಮಾತ್ರ ಉಳಿಯುವುದು. ಹಾಗಾಗಿ,ಇಂದು ಯಾರು ನಂದಿ ಕೃಷಿಕರ ಮಹತ್ವದ ಕುರಿತು ವೈಜ್ಞಾನಿಕವಾಗಿ ಚಿಂತನೆ ಮಾಡಿ ಹೆಜ್ಜೆ ಇಡುವರೋ ಅವರಿಗೆ ಮಾತ್ರ ಮುಂದೆ ಒಳ್ಳೆಯ ಭವಿಷ್ಯವಿದೆ. ವಾಸ್ತವಿಕ ಸತ್ಯವನ್ನು ಅರಿತು ಹೆಜ್ಜೆ ಇಡದ ಇಂದಿನ ಆಧ್ಯಾತ್ಮಿಕ ಹಾಗೂ ರಾಜಕೀಯ ನಾಯಕರನ್ನು ಮುಂದೆ ಸಮಾಜ ಖಂಡಿತ ಕ್ಷಮಿಸಲು ಸಾಧ್ಯವಿಲ್ಲ ಎಂಬುದು ತಿಳಿಯುತ್ತಿದೆ.
ನಂದಿ ಮತ ಜಾಗೃತಿ ನಿರ್ಧಾರ
ನಂದಿ ಕೃಷಿ ಪುನಶ್ಚೇತನಕ್ಕೆ ಪೂರಕ ಕಾನೂನು ಹಾಗೂ ಯೋಜನೆ ಜಾರಿಗೆ ತರಲು ಪ್ರಯತ್ನಿಸುವ ನಾಯಕರಿಗೆ ಪಕ್ಷಾತೀತವಾಗಿ ನಂಬಿದ ದೇವರ ಸಾಕ್ಷಿಯಾಗಿ ಮತ ನೀಡಿದರೆ ಮಾತ್ರ ಮುಂದೆ ಒಳ್ಳೆಯ ಭವಿಷ್ಯವಿದೆ ಎಂಬುದರ ಕುರಿತು ಭಕ್ತರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಎಲ್ಲ ಮಠಗಳ ಮೂಲಕ ಹಮ್ಮಿಕೊಳ್ಳುವ ನಿರ್ಧಾರವನ್ನು ಎಲ್ಲ ಪೂಜ್ಯರು ಒಂದುಗೂಡಿ ತೆಗೆದುಕೊಳ್ಳುವುದು.
ಸರ್ಕಾರದ ಮುಂದಿಡಬೇಕಾದ ಬೇಡಿಕೆಗಳು:
1.1 ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ರೂ. 11000 ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತಂದು ರೈತರು ಎತ್ತುಗಳನ್ನು ಮಾರಾಟ ಮಾಡದೆ ತಮ್ಮ ಮನೆಯಲ್ಲಿ ಉಳಿಸಿಕೊಳ್ಳುವಂತೆ ಮಾಡಬೇಕು.
1.2 ರಾಜ್ಯ ಸರ್ಕಾರಗಳು ರಾಜ್ಯದ 10 ಪ್ರತಿಶತ ಬಜೆಟ್ ನಂದಿ ಕೃಷಿ ಪುನಶ್ಚೇತನಕ್ಕಾಗಿ ಮೀಸಲಿಟ್ಟು ನಂದಿ ವಿದ್ಯುತ್, ನಂದಿ ಗ್ಯಾಸ್, ನಂದಿ ಅಡುಗೆ ಎಣ್ಣೆ, ನಂದಿ ಆಹಾರ, ನಂದಿ ಗೊಬ್ಬರ ಹಾಗೂ ನಂದಿ ಆರೋಗ್ಯ ವರ್ಧಕಗಳ ಉತ್ಪಾದನೆಗೆ ಉತ್ತೇಜನ ನೀಡುವ ಕಾನೂನು ಜಾರಿಗೆ ತಂದು ಮುಂದಿನ 10 ವರ್ಷಗಳಲ್ಲಿ 10 ಪಟ್ಟು ನಂದಿ ಸಂಪತ್ತು ಹೆಚ್ಚಾಗುವಂತೆ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: missionsavesoil.com
………………………………….
ಬಸವರಾಜ ಎನ್. ಬಿರಾದಾರ
ನಂದಿ ಕೂಗು ಅಭಿಯಾನ ಹಾಗೂ ನಂದಿ ಸೇನೆ ಸಂಘಟನೆ
