






ಸಂಪೂರ್ಣ ನಿಷೇಧಕ್ಕೆ ರೈತ ಮುಖಂಡರ ಆಗ್ರಹ :
ಯಲಹಂಕ : ಯಲಹಂಕ ಕ್ಷೇತ್ರದ ದೊಡ್ಡಬಳ್ಳಾಪುರ ಮುಖ್ಯರಸ್ತೆಯಲ್ಲಿರುವ ಮಾರಸಂದ್ರ ಗ್ರಾಮದಲ್ಲಿ ನಿಷೇಧಿತ ಪಿಓಪಿ ಗಣೇಶ ವಿಗ್ರಹಗಳ ತಯಾರಿಕೆ ಮತ್ತು ಮಾರಾಟ ಹೆಗ್ಗಿಲ್ಲದೆ ನಡೆಯುತ್ತಿದ್ದು, ಸೂಕ್ತ ಕಾನೂನು ಕ್ರಮ ಜರುಗಿಸಬೇಕಿದ್ದ ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ರಾಷ್ಟ್ರೀಯ ರೈತಪರ ಸಂಘಟನೆಯ ರಾಜ್ಯಾಧ್ಯಕ್ಷ ಲಿಂಗನಹಳ್ಳಿ ಬಸವರಾಜು ಅಸಮಧಾನ ವ್ಯಕ್ತಪಡಿಸಿದರು.
ಈ ಕುರಿತು ಕಾಕೋಳು ಗ್ರಾಮದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ‘ಮಾರಸಂದ್ರ ಗ್ರಾಮದಲ್ಲಿ ಹಿಂದಿನಿಂದಲೂ ಪಿಓಪಿ ಗಣೇಶ ವಿಗ್ರಹ ತಯಾರಿಕೆ ಮತ್ತು ಮಾರಾಟ ಜಾಲ ಹೆಗ್ಗಿಲ್ಲದೆ ನಡೆಯುತ್ತಿದ್ದು, ಕಳೆದ ವರ್ಷ ಇದನ್ನು ನಿಷೇಧ ಮಾಡುವಂತೆ ಕೋರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೆವು, ಆದರೂ ಯಾವುದೇ ಪ್ರಯೋಜನ ವಾಗಲಿಲ್ಲ. ಈ ಬಾರಿಯೂ ಪಿಓಪಿ ಗಣೇಶ ವಿಗ್ರಹ ತಯಾರಿಕೆ ಮತ್ತು ಮಾರಾಟ ನಿಷೇಧಿಸುವಂತೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದು, ಮಾನ್ಯ ಜಿಲ್ಲಾಧಿಕಾರಿಗಳು ಯಲಹಂಕ ತಹಸಿಲ್ದಾರ್ ಮತ್ತು ಪಿಡಿಒ ಅವರಿಗೆ ಸೂಕ್ತ ಕ್ರಮ ಜರುಗಿಸುವಂತೆ ಆದೇಶ ಸಹ ನೀಡಿದ್ದಾರೆ, ಆದರೂ ಸಹ ಯಾವ ಅಧಿಕಾರಿಯೂ ಮಾರಸಂದ್ರ ಗ್ರಾಮಕ್ಕೆ ಭೇಟಿ ನೀಡಿ ಪಿಓಪಿ ಗಣೇಶ ವಿಗ್ರಹ ತಯಾರಿಕೆ ಮತ್ತು ಮಾರಾಟವನ್ನು ನಿಲ್ಲಿಸುವ ಕನಿಷ್ಠ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದರು.
ನಿಷೇಧಿತ ಪಿಓಪಿ ಗಣೇಶ ವಿಗ್ರಹಗಳನ್ನು ಸುತ್ತಮುತ್ತಲು ಗ್ರಾಮಗಳ ಕೆರೆ, ಕುಂಟೆ, ಬಾವಿ ಮುಂತಾದ ನೈಸರ್ಗಿಕ ಜಲಮೂಲ ಗಳಲ್ಲಿ ವಿಸರ್ಜನೆ ಮಾಡುವುದರಿಂದ ಅದರಲ್ಲಿರುವ ರಾಸಾಯನಿಕ ಗಳು ಕೆರೆ, ಕುಂಟೆಗಳ ನೀರನ್ನು ಸೇರಿ ಪ್ರಾಣಿ-ಪಕ್ಷಿಗಳಿಗೆ ಹಾನಿ ಉಂಟು ಮಾಡುವುದರ ಜೊತೆಗೆ ಅಂತರ್ಜಲ ಕಲುಷಿತಗೊಳ್ಳುವ ಭೀತಿ ಇದೆ. ಈ ದುಷ್ಪರಿಣಾಮ ವನ್ನು ತಡೆಗಟ್ಟಲು ಅಧಿಕಾರಿ ಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕಿದೆ, ಹಲವು ಬಾರಿ ಈ ಕುರಿತು ಅಧಿಕಾರಿಗಳಿಗೆ ಸೂಚಿಸಲಾಗಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಮಾರಾಟ ಮಳಿಗೆಯ ಮುಂದಿನ ಬಾಗಿಲು ಮುಚ್ಚಿ ಹಿಂದಿನ ಬಾಗಿಲಿನಲ್ಲಿ ಹೆಗ್ಗಿಲ್ಲದೆ ಪಿಓಪಿ ಗಣೇಶ ವಿಗ್ರಹ ಮಾರಾಟ ಮಾಡುತ್ತಿದ್ದಾರೆ. ಶನಿವಾರ ಸಂಜೆ ಮಾರಸಂದ್ರ ಗ್ರಾಮಕ್ಕೆ ಸುಮಾರು 20 ಸಾವಿರ ಪಿಓಪಿ ಗಣೇಶ ವಿಗ್ರಹಗಳನ್ನು ನೂರಾರು ಲಾರಿಗಳಲ್ಲಿ ಹೊತ್ತು ತಂದು ಮಾರಾಟ ಮಾಡುವ ದೊಡ್ಡದೊಂದು ಜಾಲವೇ ನಡೆಯುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಯಲಹಂಕ ತಹಸೀಲ್ದಾರರು, ಗ್ರಾ.ಪಂ. ಪಿಡಿಓ, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು ಎಂಬುದಷ್ಟೇ ನಮ್ಮ ಒತ್ತಾಯವಾಗಿದೆ. ಮಣ್ಣಿನ ಗಣೇಶ ವಿಗ್ರಹಗಳ ತಯಾರಿಕೆಗಾಗಲಿ ಮಾರಾಟಕ್ಕಾಗಲಿ ನಮ್ಮ ಯಾವ ನಿರ್ಬಂಧವೂ ಇಲ್ಲ, ಪರಿಸರದ ಮೇಲೆ ದುಷ್ಪರಿಣಾಮ ಉಂಟು ಮಾಡುವ ಪಿಓಪಿ ಗಣೇಶ ವಿಗ್ರಹ ತಯಾರಿಕೆ ಮತ್ತು ಮಾರಾಟ ಎರಡನ್ನು ಸಹ ನಿಷೇಧಿಸಬೇಕು, ಪಿಒಪಿ ಗಣೇಶ ವಿಗ್ರಹ ಮಾರಾಟ ಮಾಡುವವರು ಮತ್ತು ಕೊಳ್ಳುವವರು ಹೀಗೆ ಇಬ್ಬರ ಮೇಲೂ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಪಿಓಪಿ ಗಣೇಶ ವಿಗ್ರಹ ತಯಾರಿಕೆ ಮತ್ತು ಮಾರಾಟ ಜಾಲಕ್ಕೆ ಕಡಿವಾಣ ಹಾಕಬೇಕು ಎಂದು ಈ ಮೂಲಕ ಮನವಿ ಮಾಡುತ್ತಿದ್ದೇವೆ. ನಮ್ಮ ಮನವಿಯನ್ನು ಉಪೇಕ್ಷೆ ಮಾಡಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅರಕೆರೆ ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ನರಸಿಂಹಯ್ಯ, ರೈತ ಮುಖಂಡರಾದ ಕೆ.ಸಿ. ಶಾಂತವೀರೇಶ್,ಕಾಕೋಳು ರಾಜಣ್ಣ, ಬಾಬು, ಸೀತಕೆಂಪನಹಳ್ಳಿ ರವಿ, ಹನಿಯೂರು ರಾಮಮೂರ್ತಿ, ಮನೋಜ್ ಕುಮಾರ್, ಸಾಗರ್, ಸೇರಿದಂತೆ ಇನ್ನಿತರರಿದ್ದರು.
