



















ಸಿಂಧಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವೈಭವಯುತ ಗುರುವಂದನಾ ಸಮಾರಂಭ
ನಗರದ ಚೊಕ್ಕನಹಳ್ಳಿ ಥಣಿಸಂದ್ರ ಮುಖ್ಯ ರಸ್ತೆಯಲ್ಲಿರುವ ಸಿಂಧಿ ಪದವಿಪೂರ್ವ ಕಾಲೇಜಿನಲ್ಲಿ ನವೆಂಬರ್ 24ರಂದು ಗುರುವಂದನಾ ಸಮಾರಂಭ ಯಶಸ್ವಿಯಾಗಿ ನಡೆಯಿತು. ನಗರದ ಪ್ರತಿಷ್ಠಿತ ಪ್ರೌಢಶಾಲೆಗಳ 80ಕ್ಕೂ ಹೆಚ್ಚು ಪ್ರಾಂಶುಪಾಲರು ಮತ್ತು ಹಿರಿಯ ಶಿಕ್ಷಕರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಂಧಿ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರಕಾಶ್ ಎಫ್. ಮಾಧ್ವಾನಿ ಅವರು,
ಗುರು ಪೂರ್ಣಿಮೆಯ ದಿನ ಗುರು ವಂದನಾ ಸಮಾರಂಭವನ್ನು ಆಚರಿಸುತ್ತಿರುವುದು ಬಹಳ ಅರ್ಥಪೂರ್ಣವಾಗಿದೆ. ಈ ಸಂದರ್ಭದಲ್ಲಿ ಗುರುಗಳನ್ನು ಗೌರವಿಸುವುದು ನಮ್ಮ ಧರ್ಮವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. “ಕನ್ನಡ ನಮ್ಮ ಜನ್ಮಭೂಮಿ, ಕನ್ನಡ ನಮ್ಮ ಕರ್ಮಭೂಮಿ. ಕಾವೇರಿ ನದಿಯ ನೀರು ಕುಡಿದು ಈ ನೆಲದ ಋಣ ತೀರಿಸುವುದು ನಮ್ಮ ಕರ್ತವ್ಯ. ಆದ್ದರಿಂದ ಸಿಂಧಿ ವಿದ್ಯಾ ಸಂಸ್ಥೆ, ಸಿಂಧಿ ಆಸ್ಪತ್ರೆ ಸೇರಿದಂತೆ ಇತರ ಸಂಘ-ಸಂಸ್ಥೆಗಳ ಮೂಲಕ ಸಮಾಜ ಸೇವೆ ಮಾಡುವುದು ನಮ್ಮ ಉದ್ದೇಶ” ಎಂದು ತಿಳಿಸಿದರು. ಪೋಷಕರು ಮತ್ತು ಶಿಕ್ಷಕರು ಸೇರಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದರು. ಇಂದಿನ ಮಕ್ಕಳನ್ನು ಶಾಂತ ಮನಸ್ಸಿನಿಂದ ಬೆಳೆಸಬೇಕು; ಅವರ ಪ್ರಯತ್ನಗಳನ್ನು ಹೊಗಳುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ನಂದ ಎನ್. ಅವರು ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿ ಮಾತನಾಡುತ್ತಾ, “ಗುರುವಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರ ಕೊಡುಗೆ ಅಪಾರ. ಆದ್ದರಿಂದ ಅಂತಹ ಗುರುಗಳ ಜ್ಞಾನ ಮತ್ತು ಸೇವೆಯನ್ನು ಗುರುತಿಸಿ ಗೌರವ ಸಲ್ಲಿಸುವುದು ಅಗತ್ಯ” ಎಂದರು. ಮಕ್ಕಳಲ್ಲಿ ಆತ್ಮವಿಶ್ವಾಸ, ಧೈರ್ಯ ಹಾಗೂ ಉತ್ತಮ ಮೌಲ್ಯಗಳನ್ನು ಬಿತ್ತುವ ಮೂಲಕ ಶಿಕ್ಷಕರು ಉತ್ತಮ ಸಮಾಜ ನಿರ್ಮಾಣದ ಮಹತ್ವದ ಕೆಲಸದಲ್ಲಿ ತೊಡಗಿದ್ದಾರೆ ಎಂದು ಅವರು ಶ್ಲಾಘಿಸಿದರು. 10ನೇ ಕನ್ನಡ ಭಾಷಾ ವಿಷಯದಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಸಿಂಧಿ ಪದವಿಪೂರ್ವ ಕಾಲೇಜಿನಲ್ಲಿ ಪ್ರವೇಶ ಪಡೆದರೆ ಅವರಿಗೆ ವಿಶೇಷ ಸ್ಕಾಲರ್ಶಿಪ್ ನೀಡಲಾಗುವುದು ಎಂದು ಸಿಂಧಿ ಸೇವಾ ಸಮಿತಿಯ ಪರವಾಗಿ ಪ್ರಾಂಶುಪಾಲರು ಘೋಷಿಸಿದರು.
ಡಾ. ನಂದ ಎನ್. ಅವರ ನೇತೃತ್ವದಲ್ಲಿ ಆಗಮಿಸಿದ ಶಿಕ್ಷಕರೊಂದಿಗೆ ಶೈಕ್ಷಣಿಕ ಸಂವಾದ ಏರ್ಪಡಿಸಲಾಗಿತ್ತು. ಸಮಾರಂಭದ ವೇಳೆ ಶಾಲಾ ಪ್ರಾಂಶುಪಾಲರು ಮತ್ತು ಹಿರಿಯ ಶಿಕ್ಷಕರು ತಮ್ಮ ಅಭಿಪ್ರಾಯ ಹಂಚಿಕೊಂಡು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭಕ್ಕೆ ಆಗಮಿಸಿದ ಎಲ್ಲಾ ಪ್ರಾಂಶುಪಾಲರು ಮತ್ತು ಹಿರಿಯ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಸಿಂಧಿ ಪದವಿಪೂರ್ವ ಕಾಲೇಜಿನ ಅಧ್ಯಕ್ಷರಾದ ಶ್ರೀ ಅಶೋಕ್ ಪಿ ನಾರಂಗ್ ಅವರು, ಕಾರ್ಯದರ್ಶಿಗಳಾದ ಶ್ರೀ ರಾಜೇಶ್ ಎಂ ಬಜಾಜ್ ಅವರು ಹಾಗೂ ಜಂಟಿ ಕಾರ್ಯದರ್ಶಿ ಗಳಾದ ಶ್ರೀಮತಿ ಪೂಜಾ ಠಕ್ಕರ್ ಅವರು ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ಪದ್ಮಪ್ರಿಯ ಅವರು ವಂದನಾರ್ಪಣೆ ಸಲ್ಲಿಸಿದರು.ಗಣಕ ವಿಭಾಗದ ಮುಖ್ಯಸ್ಥೆ ಲಾವಣ್ಯ ಅವರು ಹಾಗೂ ವಾಣಿಜ್ಯ ವಿಭಾಗದ
ಮುಖ್ಯಸ್ಥೆ ಸಿಬಿ ಅವರು ಕಾರ್ಯಕ್ರಮ ನಿರೂಪಿಸಿದರು. ಸಮಾರಂಭವು ಯಶಸ್ವಿಯಾಗಿ ಸಂಪನ್ನಗೊಂಡಿತು.
