



ಯಲಹಂಕ : ಆಧುನಿಕತೆಯ ಭರದಲ್ಲಿ ಎಲ್ಲೆಡೆ ಹೊಸ ಬಡಾವಣೆಗಳು, ಬೃಹತ್ ಕಟ್ಟಡಗಳು ತಲೆಯೆತ್ತುತ್ತಿರುವ ಪರಿಣಾಮ, ಪರಿಸರ ನಾಶವಾಗಿ ಉಸಿರುಗಟ್ಟುವಂತಹ ವಾತಾವರಣ ದಲ್ಲಿ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಟ ಅರುಣ್ ಸಾಗರ್ ವಿಷಾದ ವ್ಯಕ್ತಪಡಿಸಿದರು.
ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ, ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಕೇಂದ್ರ ಹಾಗೂ ತೋಟಗಾರಿಕೆ ಮಹಾವಿದ್ಯಾಲಯ ಸಹಯೋಗ ದೊಂದಿಗೆ ನಗರದ ಜಿಕೆವಿಕೆ ಆವರಣದಲ್ಲಿರುವ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆ ಮತ್ತು ಸಸ್ಯಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ಪರಿಸರ ವನ್ನು ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗ ಬೇಕು, ಹಳೆಯ ಸಾಂಪ್ರದಾಯಿಕ ಜೀವನ ಪದ್ದತಿಯ ಜೊತೆಗೆ ನಾವೆಲ್ಲರೂ ಸಾಗಬೇಕಾ ಗಿದೆ. “ಪರಿಸರದ ಜೊತೆಗೆ ನಮ್ಮ ಬದುಕು, ನಮ್ಮ ಬದುಕಿನಿಂದ ಪರಿಸರವಲ್ಲ” ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದರು.
ತೋಟಗಾರಿಕಾ ವಿಜ್ಞಾನಗಳ ವಿ.ವಿ.(ಬಾಗಲಕೋಟೆ)ಯ ಸಂಶೋಧನಾ ನಿರ್ದೇಶಕ ಡಾ.ಎಚ್.ಸಿ. ಮಹೇಶ್ವರಪ್ಪ ಮಾತನಾಡಿ ‘ಪ್ರವಾಹ, ಭೂಕುಸಿತ, ಹವಾಮಾನ ವೈಪರೀತ್ಯಗಳಂತಹ ಎಷ್ಟೇ ದುರಂತಗಳು ಸಂಭವಿಸಿದರೂ ಸಹ ನಾವು ಎಚ್ಚೆತ್ತಿಕೊಳ್ಳದೆ ಇರುವುದು ವಿಷಾದಕರ ಸಂಗತಿ, ಅಭಿವೃದ್ಧಿಯ ನಾಗಾಲೋಟದಲ್ಲಿ ನಾವು ಪರಿಸರಕ್ಕೆ ವಿರುದ್ಧವಾಗಿ ಹೋರಾಡುತ್ತಿದ್ದೇವೆ. ಪರಿಸರ ಮತ್ತು ತೋಟಗಾರಿಕಾ ಬೆಳೆಗಳು ನಾಶವಾಗುತ್ತಾ ಹೋದರೆ ಮುಂದಿನ ಪೀಳಿಗೆಯ ಜನರು ಈ ಭೂಮಿಯ ಮೇಲೆ ವಾಸಿಸುವುದು ಕಷ್ಟಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಪರಿಸರವನ್ನು ಕಾಪಾಡಬೇಕಾದುದು ಕೃಷಿ ಮತ್ತು ತೋಟಗಾರಿಕಾ ವಿ.ವಿ.ಗಳ ಆಧ್ಯ ಕರ್ತವ್ಯವಾಗಿದೆ ಎಂದರು.
ತೋಟಗಾರಿಕಾ ಮಹಾವಿದ್ಯಾ ಲಯದ ಡೀನ್ ಡಾ.ಜಿ.ಎಸ್.ಕೆ. ಸ್ವಾಮಿ ಮಾತನಾಡಿ ‘ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ರೈತರಿಗೆ ತೋಟಗಾರಿಕಾ ವಿ.ವಿ.ಯ ನರ್ಸರಿಗಳಿಂದ ಉತ್ತಮ ತಳಿಯ ಸಸಿಗಳು ಮತ್ತು ಬೀಜಗಳನ್ನು ತಲುಪಿಸುವ ಮೂಲ ಉದ್ದೇಶದಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ ಮಹೇಶ್ ಬಿ.ಶಿರೂರ, ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರದ ನಿರ್ದೇಶಕ ಡಾ.ಆರ್.ಕೆ.ಮೇಸ್ತ, ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಕೇಂದ್ರದ ವಿಸ್ತರಣಾ ನಿರ್ದೇಶಕ ಡಾ.ಎಸ್.ಎಲ್. ಜಗದೀಶ್ ಸೇರಿದಂತೆ ಇನ್ನಿತರರಿದ್ದರು.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ
9845085793
9035282296
7349337989
