








ನೆಲಮಂಗಲ : ಟೆಲಿಕಾಂ ಎಂಪ್ಲಾಯಿಸ್ ಅಂಡ್ ಅದರ್ಸ್ ಹೌಸಿಂಗ್ ವೆಲ್ಫೇರ್ ಟ್ರಸ್ಟ್ ವತಿಯಿಂದ ನೆಲಮಂಗಲದ ಸರ್ಕಾರಿ ಶಾಲೆಯ 300ಕ್ಕೂ ಹೆಚ್ಚು ಮಕ್ಕಳಿಗೆ ಟ್ರಸ್ಟ್ ನ ಅಧ್ಯಕ್ಷ ಎನ್.ನರಸಿಂಹಮೂರ್ತಿ ಬುಧವಾರ ವಿತರಿಸಿದರು.
ನಂತರ ಮಾತನಾಡಿದ ಅವರು ‘ಸರ್ಕಾರಿ ಶಾಲೆಯ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲೆಂಬ ಆಶಯದಿಂದ ಸಂಸ್ಥೆಯ ಉಳಿತಾಯದ ಹಣದಲ್ಲಿ ಇಂದು ಸಮವಸ್ತ್ರ ವಿತರಿಸಲಾಗಿದೆ. ಕಳೆದ ಹಲವಾರು ವರ್ಷಗಳಿಂದ ನಮ್ಮ ಟ್ರಸ್ಟ್ ವತಿಯಿಂದ ಸಮವಸ್ತ್ರ, ನೋಟ್ ಪುಸ್ತಕ, ಲೇಖನ ಪರಿಕರಗಳು ಮತ್ತು ಶೂ ಮುಂತಾದ ಸಲಕರಣೆಗಳನ್ನು ವಿತರಿಸುತ್ತಾ ಬರಲಾಗಿದೆ. ನಾನೂ ಸಹ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದವನಾಗಿದ್ದು, ಸರ್ಕಾರಿ ಶಾಲಾ ಮಕ್ಕಳ ಸ್ಥಿತಿಗತಿಯ ಬಗ್ಗೆ ಅರಿತುಕೊಂಡಿದ್ದೇನೆ. ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಹೆಚ್ಚಾಗಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಾರೆ. ಸರ್ಕಾರಿ ಶಾಲಾ ಮಕ್ಕಳು ಯಾವುದೇ ಕೀಳಿರಿಮೆ ಭಾವನೆ ಬೆಳೆಸಿಕೊಳ್ಳದೆ, ಇತರ ಶಾಲೆಯ ಮಕ್ಕಳಂತೆ ವ್ಯಾಸಂಗ ಮಾಡಬೇಕು. ಪ್ರಸಕ್ತ ದಿನಗಳಲ್ಲಿ ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆಯೇನಿಲ್ಲ ಎನ್ನುವಂತಿವೆ. ಮಕ್ಕಳು ಉತ್ತಮ ರೀತಿಯಲ್ಲಿ ವ್ಯಾಸಂಗ ಮಾಡಿ, ತಾನೋದಿದ ಶಾಲೆ, ತಮ್ಮ ಪೋಷಕರು ಮತ್ತು ಕಲಿಸಿದ ಶಿಕ್ಷಕರಿಗೆ ಕೀರ್ತಿ ತರುವಂತಾಗಬೇಕು,ಉತ್ತಮ ಸಮಾಜ ನಿರ್ಮಾಣದ ಕಾರ್ಯಕ್ಕೆ ಸಹಕರಿಸಬೇಕು ಎಂದು ಸಲಹೆ ನೀಡಿದರು.
ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ, ಹಿರಿಯ ಪತ್ರಕರ್ತ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ ‘ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರ್ಕಾರಿ ಶಾಲಾ ಮಕ್ಕಳು ಅತ್ಯಂತ ಕ್ರಿಯಾಶೀಲರಾಗಿ ಕಲಿಯುವ ಮೂಲಕ ಉನ್ನತ ಸ್ಥಾನಕ್ಕೇರುವುದರ ಜೊತೆಗೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ನಾರಾಯಣಗೌಡ ಮಾತನಾಡಿ ‘ಸರ್ಕಾರಿ ಶಾಲಾ ಮಕ್ಕಳ ವಿದ್ಯಾಬ್ಯಾಸಕ್ಕೆ ನೆರವಿನ ಹಸ್ತ ಚಾಚುವ ಮೂಲಕ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿರುವ ಟೆಲಿಕಾಂ ಎಂಪ್ಲಾಯಿಸ್ ಅಂಡ್ ಅದರ್ಸ್ ಹೌಸಿಂಗ್ ವೆಲ್ಫೇರ್ ಟ್ರಸ್ಟ್ ನ ಕಾರ್ಯ ಶ್ಲಾಘನೀಯವಾದುದು, ಟ್ರಸ್ಟ್ ಅಧ್ಯಕ್ಷ ಎನ್.ನರಸಿಂಹ ಮೂರ್ತಿ ಯವರ ಮಾನವೀಯ ಕಾರ್ಯಕ್ಕೆ ಅಭಿನಂದನೆಗಳು ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಟೆಲಿಕಾಂ ಎಂಪ್ಲಾಯಿಸ್ ಅಂಡ್ ಅದರ್ಸ್ ಹೌಸಿಂಗ್ ವೆಲ್ಫೇರ್ ಟ್ರಸ್ಟ್ ನ ಉಪಾಧ್ಯಕ್ಷೆ ಎಂ.ಮಲ್ಲಿಕಾ, ನಿರ್ದೇಶಕರಾದ ಸತ್ಯಮೂರ್ತಿ, ನಾಗರತ್ನ, ಜಯಮ್ಮ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಶಿಕ್ಷಕರು, ಮಕ್ಕಳ ಪೋಷಕರು ಹಾಗೂ ವಿದ್ಯಾರ್ಥಿಗಳಿದ್ದರು.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ
ಆರ್ ಹನುಮಂತ 98450 85 793
90 352 822 96
73 49 33 79 89
