
ಬಂಗಾರಪೇಟೆ :ನಾಡಿನ ಸರ್ವತೋಮುಖ ಪ್ರಗತಿ ಹಾಗೂ ನೊಂದವರ ಧ್ವನಿಯಾಗಿ ನ್ಯಾಯಪರ ಹೋರಾಟಗಳನ್ನು ನಡೆಸಲು ಭೀಮ್ ಪ್ರಜಾ ಸಂಘ ಬದ್ಧವಾಗಿದೆ ಎಂದು ರಾಜ್ಯಾಧ್ಯಕ್ಷ ವೈಟ್ ಫೀಲ್ಡ್ ಮುರುಗೇಶ್ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭೀಮ್ ಪ್ರಜಾ ಸಂಘ ಜಿಲ್ಲಾ ಶಾಖೆ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಘಟಕ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಭೀಮ್ ಪ್ರಜಾ ಸಂಘ ಮಹಿಳೆಯರನ್ನು ಸಬಲರನ್ನಾಗಿಸುವ ಉದ್ದೇಶದಿಂದ ಮತ್ತು ಅವರ ಹಕ್ಕುಗಳ ರಕ್ಷಣೆ ಮಾಡುವ ಗುರಿ ಹೊಂದಿದ್ದು ಮಹೀಳಾ ಘಟಕ ಸ್ಥಾಪಿಸಲಾಗಿದೆ ಇದಕ್ಕೆ ಪೂರಕವಾಗಿ ಬಂಗಾರಪೇಟೆ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ಮಂಜುಳರವರನ್ನು ನೇಮಕ ಮಾಡಲಾಗಿದೆ ಎಂದರು.
ವರ್ಗಕ್ಕೆ ಸೀಮಿತಲ್ಲ:
ಭೀಮ್ ಪ್ರಜಾ ಸಂಘ ಒಂದು ವರ್ಗಕ್ಕೆ ಅಥವಾ ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ, ರಾಜಕೀಯೇತರವಾಗಿ ಎಲ್ಲಾ ಜಾತಿ, ಧರ್ಮ, ವರ್ಗ, ಸಮುದಾಯಗಳ ಸಂಕಷ್ಟಕ್ಕೆ ಸ್ಪಂದಿಸುವ ಮತ್ತು ನಾಡು ನುಡಿ ಜಲ ರಕ್ಷಣೆಯ ಗುರಿಯನ್ನು ಹೊಂದಿದೆ. ಹಾಗೂ ನ್ಯಾಯ ಬದ್ಧ ಹೋರಾಟಗಳ ಮೂಲಕ ನಾಡನ್ನು ರಕ್ಷಿಸುವುದರ ಜೊತೆಗೆ ಬಡವ, ದಲಿತ, ಶ್ರಮಿಕ, ರೈತರ ಬೆಂಬಲಕ್ಕೆ ನಿಂತು ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಮ್ಮ ಸಂಘ ಕಾರ್ಯೋನ್ಮುಖ ವಾಗಿದೆ, ನಮ್ಮ ಸಂಘ ಸ್ಥಾಪನೆಯಾದಗಿನಿಂದ ಹಲವು ಹೋರಾಟಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೋಯ್ದು ಯಶಸ್ಸನ್ನು ಸಾಧಿಸಿ ಪ್ರಗತಿಯ ಹಾದಿಯಲ್ಲಿ ಮುನ್ನುಗುತ್ತಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಅಂಬೇಡ್ಕರ್ ಕ್ಯಾಂಟಿನ್ ಸ್ಥಾಪನೆಯ ಗುರಿ:
ಹಸಿವು ಮುಕ್ತ ಸಮಾಜ ನಿರ್ಮಾಣಕ್ಕಾಗಿ ಭೀಮ್ ಪ್ರಜಾ ಸಂಘ ಇಡೀ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ವೈಟ್ ಫೀಲ್ಡ್ ಬಳಿಯಲ್ಲಿ ಅಂಬೇಡ್ಕರ್ ಕ್ಯಾಂಟೀನನ್ನು ಸ್ಥಾಪಿಸಲಾಗಿದೆ ಇದರ ಮುಂದುವರೆದ ಭಾಗವಾಗಿ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಕ್ಯಾಂಟೀನ್ ಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದೇವೆ ಎಂದರು.
ರಾಜ್ಯ ಉಪಾಧ್ಯಕ್ಷ ಕೆಸರನಹಳ್ಳಿ ಯಲ್ಲಪ್ಪ ಮಾತನಾಡಿ,ಭೀಮ್ ಪ್ರಜಾ ಸಂಘಟನೆ ಕೆಲವು ಮೂರು ತಿಂಗಳಿನಿಂದ ಪ್ರಾರಂಭವಾಗಿದೆ. ಹಂತ ಹಂತವಾಗಿ ಎಲ್ಲಾ ಕಡೆ ಸಂಘಟನೆಯನ್ನು ಬೆಳೆಸಿಕೊಂಡು ಬರುತ್ತಿದ್ದೇವೆ.ಅದರ ಭಾಗವಾಗಿ ಇಂದು ಬಂಗಾರಪೇಟೆ ತಾಲೂಕಿನಲ್ಲಿ ಮಹಿಳಾ ಸಂಘಟನೆಯನ್ನು ಸಹ ಪ್ರಾರಂಭ ಮಾಡುತ್ತಿದ್ದೇವೆ. ಹೊಸದಾಗಿ ಆಯ್ಕೆಗೊಂಡಿರುವ ಮಹಿಳಾ ತಾಲೂಕು ಅಧ್ಯಕ್ಷರು ಉತ್ತಮ ರೀತಿ ಕಾರ್ಯನಿರ್ವಹಿಸಿಕೊಂಡು ಸಂಘಟನೆಯನ್ನು ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.
ಅದೇ ರೀತಿ ನಮ್ಮ ರಾಜ್ಯ ಅಧ್ಯಕ್ಷ ವೈಟ್ ಫೀಲ್ಡ್ ಮುರುಗೇಶ್ ರವರು ಹಸಿದವರಿಗೆ ಅನ್ನವನ್ನು ನೀಡಲು ಅಂಬೇಡ್ಕರ್ ರವರ ಕ್ಯಾಂಟೀನನ್ನು ಪ್ರಾರಂಭ ಮಾಡಿದ್ದಾರೆ.ನಮ್ಮ ತಾಲೂಕಿನಲ್ಲೂ ಸಹ ನಮ್ಮ ಶಾಸಕರು ಅಂಬೇಡ್ಕರ್ ಕ್ಯಾಂಟೀನನ್ನು ಪ್ರಾರಂಭ ಮಾಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಮುನಿರಾಜು ಮಾತನಾಡಿ ಭೀಮ್ ಪ್ರಜಾ ಸಂಘದ ಆಂಧ್ರ ತಮಿಳುನಾಡು ತೆಲಂಗಾಣಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು ರಾಜ್ಯದ 27 ಜಿಲ್ಲೆಗಳಲ್ಲಿ ನ್ಯಾಯಪರ ಹೋರಾಟಗಳನ್ನು ಮಾಡುತ್ತಾ ಬಂದಿದೆ ಹಾಗೂ ಕೋಲಾರದಲ್ಲಿ ಶಾಖೆ ಪ್ರಾರಂಭವಾಗಿದ್ದು ಮುಂದಿನ ದಿನಗಳಲ್ಲಿ ನೊಂದವರ ಪರವಾಗಿ ನಿಲ್ಲುತ್ತೇವೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಮನೋಜ್, ಮಹಿಳಾ ಘಟಕ ಅಧ್ಯಕ್ಷೆ ಮಂಜುಳ, ಮುಖಂಡರಾದ ರಂಗನಾಥ್ , ನಾಗರಾಜ್, ರಮೇಶ್ ಎ, ವರದಾಪುರ ಯಲ್ಲಪ್ಪ ಇತರರು ಇದ್ದರು.
