







Yelahanka
ಬ್ಯಾಟರಾಯನಪುರ : ಬೆಂಗಳೂರು ಕೃಷಿ ವಿ.ವಿ., ಕರ್ನಾಟಕ ಸರ್ಕಾರದ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿಕ ಸಮಾಜ ಮತ್ತು ಕರ್ನಾಟಕ ಹಾಲು ಮಹಾಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 14ರಿಂದ ಜಿಕೆವಿಕೆ ಆವರಣದಲ್ಲಿ ನಾಲ್ಕು ದಿನಗಳ ಕೃಷಿಮೇಳ-2024ನ್ನು ಆಯೋಜಿಸಲಾಗಿದೆ ಎಂದು ಬೆಂಗಳೂರು ಕೃಷಿ ವಿ.ವಿ.ಕುಲಪತಿಡಾ.ಎಸ್.ವಿ.ಸುರೇಶ್ ತಿಳಿಸಿದರು.
ಮಂಗಳವಾರ ನಗರದ ಜಿಕೆವಿಕೆ ಆವರಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ನವೆಂಬರ್ 14ರ ಗುರುವಾರ ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರು ಕೃಷಿಮೇಳ-2024ನ್ನು ಉದ್ಘಾಟಿಸಲಿದ್ದು, ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಚೆಲುವರಾಯಸ್ವಾಮಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದು, ವಿಶೇಷ ಅಥಿತಿಗಳಾಗಿ ಬೆಂಗಳೂರು ಕೃಷಿ ವಿ.ವಿ.ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಶರತ್ ಬಚ್ಚೇಗೌಡ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಸರ್ಕಾರದ ಕೃಷಿ ಇಲಾಖೆಯ ಕಾರ್ಯದರ್ಶಿ ಅನ್ಬುಕಯಮಾರ್ ವಿ., ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಭಾರತೀಯ ಕೃಷಿ ಅನುಸಂಧಾನ ಪರಿಷತ್ ನ ಉಪ ಮಹಾನಿರ್ದೇಶಕ ಡಾ.ರಾಘವೇಂದ್ರ ಭಟ್, ಬೆಂಗಳೂರು ಕೃಷಿ ವಿ.ವಿ.ಉಪ ಕುಲಸಚಿವರು, ಸದಸ್ಯ ಕಾರ್ಯದರ್ಶಿ ಡಾ.ಕೆ.ಸಿ.ನಾರಾಯಣಸ್ವಾಮಿ ಭಾಗವಹಿಸಲಿದ್ದಾರೆ.
‘ಹವಾಮಾನ ಚತುರ ಡಿಜಿಟಲ್ ಕೃಷಿ’ ಎಂಬ ಘೋಷ ವಾಕ್ಯದೊಂದಿಗೆ ಈ ಬಾರಿಯ ಕೃಷಿಮೇಳವನ್ನು ಆಯೋಜಿಸಲಾಗಿದ್ದು, ಬೆಂಗಳೂರು ಕೃಷಿ ವಿ.ವಿ.ಯಿಂದ ಅಭಿವೃದ್ಧಿ ಪಡಿಸಿರುವ ನೂತನ ತಳಿಗಳಾದ ಮುಸುಕಿನ ಜೋಳ ಸಂಕರಣ ತಳಿ ಎಂ.ಎ.ಎಚ್.15-84, ಅಲಸಂದೆ ತಳಿ ಕೆ.ಬಿ.ಸಿ.-12, ಸೂರ್ಯಕಾಂತಿ ಸಂಕರಣ ತಳಿ ಕೆ.ಬಿ.ಎಸ್.ಎಚ್-90, ಬಾಜ್ರಾ ನೇಪಿಯರ್ ಸಂಕರಣ ತಳಿ ಪಿ.ಬಿ.ಎನ್.-342 ಎಂಬ ನಾಲ್ಕು ಹೊಸ ತಳಿಗಳನ್ನು ಬಿಡುಗಡೆ ಮಾಡಲಾಗುವುದು.
ಕೃಷಿಮೇಳದಲ್ಲಿ ಬೆಂ.ಕೃಷಿ ವಿ.ವಿ. ಮಳಿಗೆಗಳು, ಕೃಷಿ ಸಂಬಂಧಿ ವಿ.ವಿ.ಗಳು ಮತ್ತು ಸಂಸ್ಥೆಗಳ ಮಳಿಗೆಗಳು, ಅಭಿವೃದ್ಧಿ ಇಲಾಖೆಗಳ ಮಳಿಗೆಗಳು, ಕೃಷಿ ಪರಿಕರಗಳ ಮಳಿಗೆಗಳು, ಕೃಷಿ ಇಂಜಿನಿಯರಿಂಗ್ ಮತ್ತು ಪಶುಸಂಗೋಪನೆ ಮಳಿಗೆಗಳು ಸೇರಿದಂತೆ 700ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳಲ್ಲಿ ನೂತನ ಕೃಷಿ ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಗುವುದು.
ರೈತರ ಕೃಷಿ ಸಮಸ್ಯೆಗಳಿಗೆ ತಜ್ಞರಿಂದ ವೈಜ್ಞಾನಿಕ ಸಲಹೆ, ತಜ್ಞ ವಿಜ್ಞಾನಿಗಳ ತಂಡದಿಂದ ಕೃಷಿ ಸಂಬಂಧಿತ ಪ್ರಶ್ನೆಗಳಿಗೆ ನೇರ ಪರಿಹಾರ, ಪ್ರಾತ್ಯಕ್ಷಿಕಾ ತಾಕುಗಳು, ಮಳಿಗೆಗಳು ಮತ್ತು ಕೃಷಿ ಮೇಳವನ್ನು ಸಾಮಾಜಿಕ ಜಾಲತಾಣಗಳ ಮೂಲಕ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಕೃಷಿಮೇಳದಲ್ಲಿ ಖುಷ್ಕಿ ಬೇಸಾಯಕ್ಕೆ ಸೂಕ್ತ ಬೆಳೆ ಪದ್ದತಿಗಳು, ನೂತನವಾಗಿ ಬಿಡುಗಡೆಯಾದ ವಿವಿಧ ಬೆಳೆ ತಳಿಗಳ ಪ್ರಾತ್ಯಕ್ಷಿಕೆ, ತೋಟಗಾರಿಕೆ ಬೆಳೆಗಳ ನಿಖರ ಕೃಷಿ ಪ್ರಾತ್ಯಕ್ಷಿಕೆ, ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ, ಸಿರಿಧಾನ್ಯಗಳ ಮಹತ್ವ, ಔಷದೀಯ ಮತ್ತು ಸುಗಂಧ ದ್ರವ್ಯಗಳ ಸಸ್ಯಗಳು, ಜಲಾನಯನ ನಿರ್ವಹಣೆ, ಸಾವಯವ ಕೃಷಿ ಪದ್ದತಿಗಳು, ಸಮಗ್ರ ಪೋಷಕಾಂಶಗಳು ಮತ್ತು ಪೀಡೆ ನಿರ್ವಹಣೆ, ಮಣ್ಣು ಪರೀಕ್ಷೆಗನುಗುಣವಾಗಿ ಬೆಳೆ ಸ್ಪಂದನೆ ಪ್ರಾತ್ಯಕ್ಷಿಕೆ, ಹನಿ ಮತ್ತು ತುಂತುರು ನೀರಾವರಿ ಪದ್ದತಿಗಳು, ಮಳೆ ಮತ್ತು ಮೇಲ್ಛಾವಣಿ ನೀರಿನ ಕೊಯ್ಲು, ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಕೊಯ್ಲೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಬಿತ್ತನೆ ಬೀಜಗಳ ಪರೀಕ್ಷೆ ಮತ್ತು ಶೇಖರಣೆ, ಪಶುಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ, ಮೀನು ಸಾಕಾಣೆ, ಮಾರುಕಟ್ಟೆ ನೈಪುಣ್ಯತೆ ಮಾಹಿತಿ,ಹವಾಮಾನ ಚತುರ ಕೃಷಿ, ಕೃಷಿಯಲ್ಲಿ ನೂತನ ಮಾಹಿತಿ ತಂತ್ರಜ್ಞಾನ, ಜೈವಿಕ ಮತ್ತು ನವೀಕರಿಸಬಹುದಾದ ಇಂಧನ, ರೈತರಿಂದ ರೈತರಿಗಾಗಿ ಚರ್ಚಾಗೋಷ್ಠಿ, ಕೃಷಿ ಪರಿಕರಗಳ, ಪ್ರಕಟಣೆಗಳ ಮಾರಾಟ ವ್ಯವಸ್ಥೆ ಕಲ್ಪಿಸಲಾಗಿದೆ. ಕೃಷಿ ಮೇಳದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪ್ರಗತಿಪರ ರೈತರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
ಕೃಷಿ ಮೇಳ ವೀಕ್ಷಿಸಲು ಬರುವ ರೈತರು ಮತ್ತು ಸಾರ್ವಜನಿಕರಿಗೆ ಜಿಕೆವಿಕೆಯ ಮಹಾದ್ವಾರದಿಂದ ಕೃಷಿ ಮೇಳದ ಸಭಾಂಗಣಕ್ಕೆ ತಲುಪಲು ಉಚಿತ ಸಾರಿಗೆ ವ್ಯವಸ್ಥೆ, ಪ್ರತ್ಯೇಕ ವಾಹನ ನಿಲುಗಡೆ ವ್ಯವಸ್ಥೆ, ಉಚಿತ ಪ್ರವೇಶ, ರಿಯಾಯಿತಿ ದರದಲ್ಲಿ ಮುದ್ದೆ ಊಟದ ವ್ಯವಸ್ಥೆ ಸೇರಿದಂತೆ ಹಲವು ವಿಶೇಷ ಸವಲತ್ತುಗಳನ್ನು ಕಲ್ಪಿಸಲಾಗಿದೆ ಎಂದು ಕೃಷಿಮೇಳ ಕುರಿತು ಮಾಹಿತಿ ನೀಡಿದರು.