


ಮಾತೃಭಾಷೆಯಲ್ಲಿನ ಕಲಿಕೆ ಶೈಕ್ಷಣಿಕ ಫಲಿತಾಂಶವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ : ಪ್ರೊ.ಮಾಮಿದಾಳ ಜಗದೀಶ್
ರೇವಾ ವಿ.ವಿ. 9ನೇ ಘಟಿಕೋತ್ಸವದಲ್ಲಿ 4537 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ :
ಯಲಹಂಕ : ಭಾರತ ಭಾಷಾ ವೈವಿಧ್ಯತೆಯ ದೇಶವಾಗಿದ್ದು, ಆಯಾ ವ್ಯಕ್ತಿಯ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದರಿಂದ ಶೈಕ್ಷಣಿಕ ಫಲಿತಾಂಶ ಗಮನಾರ್ಹವಾಗಿ ಹೆಚ್ಚುತ್ತದೆ ಎಂದು ಯುಜಿಸಿ ಅಧ್ಯಕ್ಷ ಪ್ರೊ.ಮಾಮಿದಾಳ ಜಗದೀಶ್ ಅಭಿಪ್ರಾಯಪಟ್ಟರು.
ನಗರದ ರೇವಾ ವಿಶ್ವವಿದ್ಯಾಲಯ ದಲ್ಲಿ ಶುಕ್ರವಾರ ಆಯೋಜಿಸಿದ್ದ 9ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಮಾತನಾಡಿದ ಅವರು ‘ಆರ್ಟಿಕಲ್ 358 ರಲ್ಲಿ ಮಾತೃಭಾಷೆಯಲ್ಲಿನ ಕಲಿಕೆಯ ಮಹತ್ವ ಕುರಿತು ತಿಳಿಸಲಾಗಿದ್ದು, ಮಾತೃಭಾಷೆಯಲ್ಲಿನ ಕಲಿಕೆ ಶೈಕ್ಷಣಿಕ ಫಲಿತಾಂಶವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂಬುದನ್ನು ಸಂಶೋಧನೆಗಳು ಸಹ ದೃಢಪಡಿಸಿವೆ ಎಂದರು.
2024ರಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ನೋಬೆಲ್ ಪ್ರಶಸ್ತಿ ಪಡೆದಿರುವ ಹಲವು ತಜ್ಞರು ಸಂಸ್ಥೆಗಳು ಹೇಗೆ ರೂಪುಗೊಳ್ಳುತ್ತವೆ ಮತ್ತು ದೇಶದ ಪ್ರಗತಿಯಲ್ಲಿ ಅವು ವಹಿಸುವ ಪಾತ್ರವನ್ನು ಕುರಿತು ತಿಳಿಸಿದ್ದಾರೆ. ಭಾರತೀಯ ಪ್ರಜೆಗಳಾದ ನಾವು, ನಮ್ಮ ಸಂವಿಧಾನ, ಇಲ್ಲಿನ ಸಂಸದೀಯ ವ್ಯವಸ್ಥೆ, ಪ್ರಜಾಪ್ರಭುತ್ವದ ಚುನಾವಣಾ ಪ್ರಕ್ರಿಯೆಗಳು, ನ್ಯಾಯಾಂಗ ಮತ್ತು ಮಾಧ್ಯಮಗಳಂಥ ದೃಢವಾದ ಸಂಸ್ಥೆಗಳ ಬಗ್ಗೆ ನಾವು ಹೆಮ್ಮೆ ಪಡಬಹುದು, ಈ ಎಲ್ಲವೂ ನಮ್ಮ ಸಂವಿಧಾನದ ಮೌಲ್ಯಗಳಲ್ಲೇ ಇವೆ. ರಾಷ್ಟ್ರೀಯ ಶಿಕ್ಷಣ ನೀತಿಯು ನಮ್ಮ ಸಂವಿಧಾನದ ಸಮಾನತೆ, ಒಳಗೊಳ್ಳುವಿಕೆಯ ಬದ್ಧತೆಯನ್ನು ವಿವರಿಸುತ್ತದೆ. ಆಸಕ್ತ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಸಂಪರ್ಕ ಒದಗಿಸುತ್ತದೆ ಎಂದರು.
ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ರೇವಾ ವಿ.ವಿ. ಕುಲಪತಿ ಡಾ.ಪಿ.ಶ್ಯಾಮರಾಜು ಮಾತನಾಡಿ ‘ರೇವಾ ವಿಶ್ವವಿದ್ಯಾಲಯದ ಸುಸ್ಥಿರ ಪ್ರಗತಿ ಮತ್ತು ವೇಗವಾದ ಬೆಳವಣಿಗೆಯ ಹಿಂದೆ ವಿದ್ಯಾರ್ಥಿಗಳು ಮತ್ತು ಪೋಷಕರ ಪ್ರೇರಕ ಶಕ್ತಿ ಮತ್ತು ಗಟ್ಟಿಯಾದ ಬೆಂಬಲವಿದೆ. ವಿದ್ಯಾರ್ಥಿಗಳಿಗೆ ಪದವಿಗಳಿಗಿಂತ ಹೆಚ್ಚಾಗಿ ಬೇಕಾಗಿರುವುದು ಶಿಕ್ಷಣವನ್ನು ಮೀರಿದ ಕಲಿಕೆ. ರೇವಾ ವಿ.ವಿ.ಒಂದು ಶಿಕ್ಷಣ ಸಂಸ್ಥೆಯಾಗಿ ಸಮಾಜಕ್ಕೆ ಹಿಂದಿರುಗಿಸಬೇಕಾದ ಬಹುದೊಡ್ಡ ಜವಾಬ್ದಾರಿಯನ್ನು ಹೊಂದಿದೆ. ರೇವಾ ವಿ.ವಿ.ಯಲ್ಲಿನ ಅಧ್ಯಾಪಕರು ವಿದ್ಯಾರ್ಥಿಗಳಲ್ಲಿ ಬದಲಾವಣೆಯನ್ನು ಪ್ರೇರೇಪಿಸುವ ಮತ್ತು ಪೋಷಿಸುವ ಶಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದು, ಅತ್ಯಂತ ಸಮರ್ಪಣಾ ಮನೋಭಾವ ಮತ್ತು ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ, ಈ ಬಗ್ಗೆ ರೇವಾ ವಿ.ವಿ.ಹೆಮ್ಮೆ ಪಡುತ್ತದೆ ಎಂದು ಶ್ಲಾಘಿಸಿದರು.
ಘಟಿಕೋತ್ಸವದಲ್ಲಿ ರೇವಾ ವಿ.ವಿ.ಯ ಸಹ ಕುಲಪತಿ ಉಮೇಶ್ ಎಸ್.ರಾಜು ಸೇರಿದಂತೆ ಎಂಜಿನಿಯರಿಂಗ್, ವಾಸ್ತುಶಿಲ್ಪ, ವಾಣಿಜ್ಯ, ತಂತ್ರಜ್ಞಾನ, ವಿನ್ಯಾಸ, ಕಾನೂನು, ನಿರ್ವಹಣೆ, ಮಾನವಿಕ ಕಲೆಗಳು, ಪ್ರದರ್ಶನ ಕಲೆಗಳು, ಇಂಡಿಕ್ ಅಧ್ಯಯನ, ಸಮಾಜ ವಿಜ್ಞಾನ, ಅಲೈಡ್ ಹೆಲ್ತ್ ಸೈನ್ಸ್, ಅನ್ವಯಿಕ ವಿಜ್ಞಾನ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರಿದ್ದರು.
ಪಿ.ಎಚ್.ಡಿ.ಸೇರಿ 4537 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರಧಾನ :
ರೇವಾ ವಿಶ್ವ ವಿದ್ಯಾಲಯದಲ್ಲಿ ಶುಕ್ರವಾರ ನಡೆದ 9ನೇ ಘಟಿಕೋತ್ಸವದಲ್ಲಿ 3311 ಪದವಿ ವಿದ್ಯಾರ್ಥಿಗಳು, 1156 ಸ್ನಾತಕೋತ್ತರ ಪದವೀಧರರು, 70 ಪಿ.ಎಚ್.ಡಿ., 66 ಪ್ರತಿಭಾವಂತ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿಗೆ ಚಿನ್ನದ ಪದಕಗಳ ವಿತರಣೆ ಸೇರಿದಂತೆ ಒಟ್ಟು 4537 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರಧಾನ ಮಾಡಲಾಯಿತು.