





ಅಂಬೇಡ್ಕರ್ ಅವರ ತತ್ವಾದರ್ಶ ಮೈಗೂಡಿಸಿಕೊಳ್ಳಿ ಬದುಕು ಹಸನಾಗಿಸಿಕೊಳ್ಳಿ : ಜಕ್ಕೂರು ರವಿಕುಮಾರ್
ಬ್ಯಾಟರಾಯನಪುರ : ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಬದುಕನ್ನು ಹಸನಾಗಿಸಿಕೊಳ್ಳಿ ಎಂದು ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಜಕ್ಕೂರು ರವಿಕುಮಾರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಬ್ಯಾಟರಾಯನಪುರ ಕ್ಷೇತ್ರದ ಜಕ್ಕೂರಿನ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಹಾನ್ ಮಾನವತಾವಾದಿ, ಅಸಮಾನತೆ ವಿರುದ್ಧ ಗಟ್ಟಿ ಧ್ವನಿಯೆತ್ತಿದ ಶ್ರೇಷ್ಠ ಆದರ್ಶ ಪುರುಷ. ನ್ಯಾಯ ಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಸಮಾಜ ಸುಧಾರಕರಾಗಿ ಸಮಾಜಕ್ಕೆ ಅವರು ನೀಡಿರುವ ಕೊಡುಗಗಳು ಅಪಾರ. ಅಂಬೇಡ್ಕರ್ ಅವರು ಮಹಿಳೆಯರ ಮತ್ತು ಶೋಷಿತ ವರ್ಗಗಳ ಹಕ್ಕಿಗಾಗಿ ಹೋರಾಡಿದ ಮಹಾನ್ ವ್ಯಕ್ತಿ. ಅಂಬೇಡ್ಕರ್ ಅವರ ಚಿಂತನೆಗಳು, ತತ್ವಾದರ್ಶಗಳು ನಮಗೆಲ್ಲರಿಗೂ ಸ್ಫೂರ್ತಿಯ ಸೆಲೆಯಿದ್ದಂತೆ.
ಸಂವಿಧಾನಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುಣ್ಯಸ್ಮರಣೆಯ ಈ ದಿನವನ್ನು ‘ಮಹಾಪರಿನಿರ್ವಾಣ ದಿನ’ವನ್ನಾಗಿ ಆಚರಿಸಲಾಗುತ್ತದೆ. ವಾಸ್ತವಿಕವಾಗಿ ಅವರ ಸ್ಮರಣೆ ಕೇವಲ ಡಿ.6ಕ್ಕೆ ಮಾತ್ರ ಸೀಮಿತವಾಗದೆ ಪ್ರತಿದಿನದ ಸ್ಮರಣೆಯಾಗಬೇಕು. ಜಗತ್ತಿಗೆ ಅವರು ನೀಡಿರುವ ಕೊಡುಗೆಗಳು, ತತ್ವಾದರ್ಶಗಳ ಮೂಲಕ ಅವರು ಎಲ್ಲರ ಮನದಲ್ಲಿ ಶಾಶ್ವತವಾಗಿ ನೆಲಸಿದ್ದಾರೆ. ಯುವಜನತೆ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ತಮ್ಮ ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದರು.
ಮಹಾಪರಿನಿರ್ವಾಣ ದಿನಾಚರಣೆಯ ಪ್ರಯುಕ್ತ ಜಕ್ಕೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಸುಮಾರು 200ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಜಕ್ಕೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಆನಂದಮೂರ್ತಿ, ಉಪನ್ಯಾಸಕ ರಾದ ಚಂದ್ರಶೇಖರ್, ಕೇಶವಮೂರ್ತಿ, ವೇಲು, ಬ್ಯಾಟರಾಯನಪುರ ಕ್ಷೇತ್ರದ ಗ್ಯಾರೆಂಟಿ ಯೋಜನೆಗಳ ಆಧ್ಯಕ್ಷ ಸಂಪಿಗೆಹಳ್ಳಿ ಶಿವಕುಮಾರ್, ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ನಾಗರಾಜಪ್ಪ, ಪದಾಧಿಕಾರಿಗಳಾದ ವಿನೋದ್ ಕುಮಾರ್ ವ್ಯಾಸ, ವೆಂಕಟೇಶ್, ಪ್ರಮೋದ್, ಇ.ಕೃಷ್ಣಪ್ಪ, ಆಂಜಿನಪ್ಪ, ಚಿಕ್ಕಕುಳ್ಳಪ್ಪ, ಸೊಸೈಟಿಯ ಸಿಇಒ ರಾಕೇಶ್, ವ್ಯವಸ್ಥಾಪಕಿ ಯಶೋಧ, ಸಮಾಜ ಸೇವಕರಾದ ಸುಮಿತ್ರ, ಆಸ್ಮಾ ಮುಬಿನಾ, ವೀಣಾ ಎಂ.ವಿ., ಲಲಿತಮ್ಮ, ಚಂದ್ರಪ್ಪ ಸೇರಿದಂತೆ ಇನ್ನಿತರರಿದ್ದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿ
Public power
R Hanumanthu
Kogilu layout
Yelahanka
9845085793
Public power