ರಾಜಿನಾಮೆಗೆ ಪಿವಿಸಿ(ಸ್ವಾಭಿಮಾನ) ಒತ್ತಾಯ :

ಯಲಹಂಕ : ಲೋಕಸಭೆಯ ಚಳಿಗಾಲದ ಅಧಿವೇಶನ ದಲ್ಲಿ ಸಂವಿಧಾನ ಶಿಲ್ಪಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಕೂಡಲೇ ರಾಜಿನಾಮೆ ನೀಡಬೇಕು, ನೀಡದಿದ್ದರೆ ಅವರನ್ನು ರಾಷ್ಟ್ರಪತಿಗಳು ಸಚಿವ ಸಂಪುಟದಿಂದ ಉಚ್ಛಾಟಿಸಬೇಕು ಎಂದು ಒತ್ತಾಯಿಸಿ ಪ್ರಜಾ ವಿಮೋಚನಾ ಚಳವಳಿ (ಸ್ವಾಭಿಮಾನ) ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಯಲಹಂಕ ಮಿನಿ ವಿಧಾನ ಸೌಧದ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ಮುನಿಆಂಜಿನಪ್ಪ ಮಾತನಾಡಿ ‘ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತುಳಿತಕ್ಕೊಳ ಗಾದ ದೇಶದ ನೂರಾರು ಕೋಟಿ ಜನರ ಪಾಲಿನ ಆರಾಧ್ಯ ದೈವವಾಗಿದ್ದಾರೆ. ಸಮಾನತೆಯ ತತ್ವದ ಅಡಿಯಲ್ಲಿ ಅವರು ದೇಶಕ್ಕೆ ಸಮರ್ಪಿಸಿರುವ ಸಂವಿಧಾನದ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ರುವ ಜವಾಬ್ದಾರಿಯುತ ಗೃಹ ಸಚಿವರಾಗಿರುವ ಅಮಿತ್ ಶಾ ತಮ್ಮ ಜವಾಬ್ದಾರಿಯನ್ನು ಮರೆತು ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಹೆಸರೇಳುವುದು ಶೋಕಿಯಾಗಿ ಬಿಟ್ಟಿದೆ, ಅದರ ಬದಲಿಗೆ ಅಷ್ಟೇ ಬಾರಿ ದೇವರ ಹೆಸರೇಳಿದ್ದಿದ್ದರೆ ಅವರಿಗೆ ಏಳು ಜನ್ಮಗಳಿಗಾಗುವಷ್ಟು ಸ್ವರ್ಗ ಪ್ರಾಪ್ತಿ ಯಾಗುತ್ತಿತ್ತು ಎಂದು ಅವಹೇಳನಕಾರಿಯಾಗಿ ಮಾತನಾಡಿರುವುದು ಅಕ್ಷಮ್ಯ, ಜಾತಿಯ ವಿಶವರ್ತುಲ ದಲ್ಲಿ ಬಳಲುತ್ತಿರುವ, ಅವಮಾನ, ದೌರ್ಜನ್ಯ ಎದುರಿಸುತ್ತಾ ತುಳಿತಕ್ಕೊಳಗಾಗಿರುವ ದೇಶದ ಬಹುಕೋಟಿ ನಿಮ್ನ ವರ್ಗದ ಜನತೆಗೆ ಸಮಾನತೆಯ ಕೊಡುಗೆ ನೀಡಿರುವ ಅಂಬೇಡ್ಕರ್ ಅವರು ನಮಗೆ ದೇವರ ಸಮಾನವೇ ಸರಿ, ಅಂಥವರ ಬಗ್ಗೆ ಅವಹೇಳನ ಕಾರಿ ರೀತಿಯಲ್ಲಿ ಮಾತನಾಡುವ ನೈತಿಕತೆ ಅಮಿತ್ ಶಾ ಅವರಿಗೆ ಇಲ್ಲ. ಅಮಿತ್ ಶಾ ಕೂಡಲೇ ಅವರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಇಲ್ಲದಿದ್ದರೆ ಘನತೆವೆತ್ತ ರಾಷ್ಟ್ರಪತಿಗಳು ಅವರನ್ನು ಸಚಿವ ಸಂಪುಟದಿಂದ ಉಚ್ಛಾಟಿಸಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕಾಗಮಿಸಿದ ಯಲಹಂಕ ತಾಲ್ಲೂಕು ತಹಶಿಲ್ದಾರ್ ಶ್ರೇಯಸ್ ಅವರು, ಅಮಿತ್ ಶಾ ಅವರ ರಾಜಿನಾಮೆಗೆ ಒತ್ತಾಯಿಸಿ ಪ್ರಜಾ ವಿಮೋಚನಾ ಚಳವಳಿಯ ಕಾರ್ಯಕರ್ತರು ರಾಷ್ಟ್ರಪತಿಗಳಿಗೆ ಬರೆದಿದ್ದ ಪತ್ರವನ್ನು ಸ್ವೀಕರಿಸಿ, ರಾಷ್ಟ್ರಪತಿಗಳಿಗೆ ರವಾನಿಸಿ, ಅಗತ್ಯ ಕ್ರಮಕ್ಕೆ ಒತ್ತಾಯಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಪಿವಿಸಿ (ಸ್ವಾಭಿಮಾನ)ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಅಯೂಬ್ ಖಾನ್, ಯಲಹಂಕ ತಾಲ್ಲೂಕು ಶಾಖೆ ಅಧ್ಯಕ್ಷ ಬೆಳ್ಳಹಳ್ಳಿ ಕಾಂತರಾಜು, ಪ್ರಧಾನ ಕಾರ್ಯದರ್ಶಿ ಎಚ್.ಎನ್. ಕಾರ್ತೀಕ್, ಮಹಿಳಾ ವಿಮೋಚನಾ ಚಳವಳಿ ಯಲಹಂಕ ತಾಲ್ಲೂಕು ಶಾಖೆ ಅಧ್ಯಕ್ಷೆ ಮುನಿಲಕ್ಷ್ಮಮ್ಮ, ಬ್ಯಾಟರಾಯನಪುರ ಕ್ಷೇತ್ರಾಧ್ಯಕ್ಷ ವಸೀಂ ಬೇಗ್, ಪಿವಿಸಿ ಮುಖಂಡ ರಾದ ಮೆಹಬೂಬ್ ಪಾಷಾ, ಅಭಿಲಾಶ್ ಕುಮಾರ್, ಅಸ್ಲಾಂ, ಬೆಳ್ಳಳ್ಳಿ ವೆಂಕಟೇಶ್, ಶೇಕ್ ಬಾಬ್ ಜಾನ್, ಜಕ್ಕೂರು ಲಕ್ಷ್ಮಮ್ಮ ಸೇರಿದಂತೆ ನೂರಾರು ಕಾರ್ಯಕರ್ತರಿದ್ದರು.

Leave a Reply

Your email address will not be published. Required fields are marked *