ಅಮಿತ್ ಶಾ ರಾಜಿನಾಮೆಗೆ ಆಗ್ರಹಿಸಿ ಸೋಮವಾರ ಸಾಮೂಹಿಕ ಪ್ರತಿಭಟನೆ :

ಯಲಹಂಕ : ಭಾರತ ರತ್ನ, ಸಂವಿಧಾನ ಶಿಲ್ಪಿ, ಭಾರತ ಭಾಗ್ಯವಿಧಾತ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸಂಸತ್ತಿನಲ್ಲಿ ಅವಹೇಳನದ ಮಾತಿನಿಂದ ಅವಮಾನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ, ಕರ್ನಾಟಕ ಇವರ ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೋಮವಾರ ಬೃಹತ್ ಸಾಮೂಹಿಕ ಪ್ರತಿಭಟನೆ ಹಮ್ಮಿಕೊಂಡಿದ್ದು, ಮಹತ್ವದ ಈ ಪ್ರತಿಭಟನೆಯಲ್ಲಿ ಸಂವಿಧಾನದ ಬಗ್ಗೆ ಗೌರವ ಭಾವನೆ ಹೊಂದಿರುವ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟಿರುವ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ಪ್ರಜಾ ವಿಮೋಚನಾ ಚಳವಳಿ (ಸ್ವಾಭಿಮಾನ)ಯ ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ ಕರೆ ನೀಡಿದರು.

ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಶನಿವಾರ ಮಾಧ್ಯಮ ಸಂವಾದ ನಡರಸಿದ ಮುನಿಆಂಜಿನಪ್ಪ ಅವರು ‘ಅಮಿತ್ ಶಾ ಹೇಳಿಕೆ ಖಂಡನಾರ್ಹ, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಹೇಳುವುದು ಫ್ಯಾಶನ್ ಆಗಿದೆ, ಇದರ ಬದಲಿಗೆ ಇಷ್ಟೇ ಬಾರಿ ದೇವರ ಜಪ ಮಾಡಿದ್ದರೆ, ಏಳು ಜನ್ಮಕ್ಕಾಗುವಷ್ಟು ಸ್ವರ್ಗ ಪ್ರಾಪ್ತಯಾಗುತ್ತದೆ ಎಂಬ ಶಾ ಹೇಳಿಕೆಯನ್ನು ನಾವು ಖಂಡಿಸುತ್ತೇವೆ.

ಶಾ ಹೇಳುವ ದೇವರು ಇದ್ದಿದ್ದೇ ಆದರೆ ಈ ದೇಶದಲ್ಲಿ ಶೋಷಣೆ, ಅಸಮಾನತೆ, ಅಸ್ಪೃಶ್ಯತೆ, ಅಪಮಾನದಂತಹ ಅಮಾನವೀಯ ವೈರುಧ್ಯಗಳು ಏಕೆ ಇರುತ್ತಿದ್ದವು. ಅಮಿತ್ ಶಾ ಅವರಿಗೆ ಮುಕ್ಕೋಟಿ ದೇವರುಗಳು ಇರಬಹುದು, ಆದರೆ ಶೋಷಿತ ಸಮುದಾಯಗಳ ಪಾಲಿಗೆ ಅಂಬೇಡ್ಕರ್ ಅವರೇ ದೇವರು, ಭರವಸೆಯ ಬೆಳಕು ನಮ್ಮ ಉಸಿರು ಇರುವವರೆಗೂ ನಾವು ಅಂಬೇಡ್ಕರ್ ಅವರ ಜಪ ಮಾಡುತ್ತೇವೆ. ಅಂಬೇಡ್ಕರ್ ಅವರ ತತ್ವಾದರ್ಶಗಳಲ್ಲಿ ಅಪಾರವಾದ ನಂಬಿಕೆ ಇಟ್ಟು ಬದುಕುತ್ತಿರುವ ದೇಶದ ನೂರಾರು ಕೋಟಿ ಜನರ ಭಾವನೆಗಳಿಗೆ ಅಮಿತ್ ಶಾ ಧಕ್ಕೆ ಉಂಟು ಮಾಡಿದ್ದಾರೆ. ಅಮಿತ್ ಶಾ ಅವರನ್ನು ಕೂಡಲೇ ಸಂಪುಟದಿಂದ ಉಚ್ಛಾಟನೆ ಮಾಡಬೇಕು, ಮಾನ್ಯ ರಾಷ್ಟ್ರಪತಿಗಳು ಅಮಿತ್ ಶಾ ಅವರನ್ನು ಸಂಸತ್ ಸ್ಥಾನದಿಂದ ವಜಾ ಗೊಳಿಸಿ ಮನೆಗೆ ಕಳಿಸಬೇಕು, ಇಲ್ಲದಿದ್ದರೆ ಉಗ್ರಸ್ವರೂಪದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಪಿವಿಸಿ ಸ್ವಾಭಿಮನದ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಅಯೂಬ್ ಖಾನ್,ಬೆಂಗಳೂರು ನಗರ‌‌ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಭಿಲಾಶ್ ಕುಮಾರ್, ಮುಖಂಡ ಚನ್ನಮರಿಯಪ್ಪ ಮಹಿಳಾ ವಿಮೋಚನಾ ಚಳವಳಿಯ ಲಕ್ಷ್ಮಮ್ಮ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *