ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು || ಪಲ್ಲವಿ ||

ಗೋವಿನ ಹಾಡು
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು || ಪಲ್ಲವಿ ||
ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲು ಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||
ಹಾಲಾದೆ ಕರೆದರೆ ಮೊಸರಾದೆ ಹೆತ್ತರೆ
ಮೇಲ್ಗೆನೆಯ ಕಡೆದರೆ ಬೆಣ್ಣೆಯಾದೆ
ಮೇಲಾದ ತುಪ್ಪವೂ ನಾನಾದೆ ಕಾಸಿದರೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||
ಹಾದಿ ಬೀದಿಯಲ್ಲಿ ಕಸದ ಹುಲ್ಲನು ಮೈದು
ಬಂದು ಮನೆಗೆ ನಾನು ಅಮೃತವನೀವೆ
ಅದನುಂಡು ನನಗೆರಡು ಬಗೆವ ಮಾನವ ನೀನು
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||
ಹಾಯೆ ಹರಿಗೋಲಾದೆ ರಾಯ ಬೇರಿಗೆಯಾದೆ
ರಾಯರ ಕಾಲಿಗೆ ಮುಳ್ಳೊತ್ತುವಾದೆ
ಆಯವರಿತು ಹೊಡೆಯೆ ಮಧುರ ಗಾನಕ್ಕಾದೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||
ದೇಹ ಶುದ್ಧಿಗೆ ನಾನು ಪಂಚ ಗವ್ಯವನೀವೆ
ವಾಹನಕ್ಕೆ ಆಗುವನು ಎನ್ನ ಮಗನು
ಊಹೆಗಸದಳವಹುದು ನನ್ನ ಉಪಕಾರಗಳು
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||
ಉಳುವೆ ನಾ ಭೂಮಿಯನು ಹೊರುವೆ ನಾ ಹೇರನ್ನು
ತುಳಿದು ಕಡ್ಡಿಯ ಕಾಳ ವಿಂಗಡಿಸುವೆ
ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು
||
ಮೇಲಿನ ಗೀತೆಗೆ ಸಂಬಂಧಿಸಿದ ವಿಚಾರ
ಶ್ರೀರಂಗಪಟ್ಟಣದ S.G.ನರಸಿಂಹಾಚಾರ್ಯರು ರಚಿಸಿದ ಗೀತೆ
ಗೋವಿನ ಹಾಡು
ಸ್ವಗತದ ರೀತಿಯಲ್ಲಿ ಮನುಷ್ಯನನು ಉದ್ದೇಶಿಸಿ ಗೋವು ಹೇಳುವಂತೆ ರಚಸಿದ್ದಾರೆ , ರವಿ ಕಾಣದ್ದು ಕವಿ ಕಂಡ. ವಾಸ್ತವವಾದ ಭಾವನಾತ್ಮಕ ವಿಷಯವನ್ನು ವಿಚಾರಮಾಡುವಂತೆ
ಮಾಡಿದ್ದಾರೆ.
ಮನುಷ್ಯ ತನ್ನನ್ನು ತಾನು ಓರೆಗಿಟ್ಟುಕೊಂಡು ಒಪ್ಪವಾಗಿ ಬದುಕಲು ಎಚ್ಚರಿಸುವಂತಿದೆ.
ನೆನಪಾಗುತ್ತಿದೆ ಎಂದೋ ಕೇಳಿದ ವಿಚಾರ, ಒಮ್ಮೆ ಗೋವನ್ನು ವಧಿಸಲು ತಯಾರು ಮಾಡಿದ್ದಾಗ ಗೋವು ಕಟುಕನನ್ನು ನೋಡಿ ನಕ್ಕಿತು, ಕಟುಕ ಏಕೆ ನಗುವೆ, ಈ ಸಾವಿನ ಸಮಯದಲ್ಲಿ !!? ಎಂದು ಆಶ್ಚರ್ಯದಿಂದ ಕೇಳಿದ್ದಕ್ಕೆ,
ಗೋವಿನ ಉತ್ತರ ಹೀಗಿತ್ತಂತೆ ;
ನನ್ನಂತಃ ನಿಸ್ವಾರ್ಥಿಗೇ ಈ ರೀತಿಯ ಸಾವು ಬಂದರೆ , ಮಾನವೀಯತೆಯನ್ನು ಮರೆತು ಸ್ವಾರ್ಥಕ್ಕಾಗಿಯೇ,ನಿರುಪಕಾರಿಯಾಗಿ ಬದುಕುತ್ತಿರುವ ನಿನಗೆ ಇನ್ನೆಂತಹ ನರಳಾಟದ ಸಾವು ಕಾದಿದೆಯೋ ??!! ಎಂದು ಚಿಕಿತದ ನಗು ಬಂತು ಅಷ್ಟೇ.
ವಿಚಾರ ಮಾಡುವ ವಿಷಯವಲ್ಲವೇ ಇದು ?.
ಮುಂದುವರೆದು ಮಾತು, ನಲವತ್ತು ವರ್ಷಗಳ ಹಿಂದಿನ ನೆನಪು ಮೂಲ ಯಲಹಂಕದ ನಮ್ಮ ಮನೆಯ ಹತ್ತಿರ ಸಂಜೆಯ ಹೊತ್ತಿಗೆ ನೂರಾರು ಗಿಳಿಗಳು ಬಂದು ಕೂತಿರುತ್ತಿದ್ದವು, ಇನ್ನು ಗುಬ್ಬಿಗಳಂತೂ ಮನೆಯ ಒಳಗೂ ಹೊರಗೂ ಸಡಗರದಿಂದ ಹಾರಾಡುತ್ತಿದ್ದವು, ಮನೆಯವರು ಅಕ್ಕಿ ಆರಿಸುವಾಗ ಪಕ್ಕಕ್ಕೆ ಹಾಕುತ್ತಿದ್ದ ನೆಲ್ಲನ್ನು ಕುಕ್ಕಿ ತಿನ್ನುತ್ತಿದ್ದವು. ಮನೆಯ ಜಂತೆ ಹಾಗೂ ಕೆಲವು ಮರೆಯ ಜಾಗಗಳಲ್ಲಿ ಗೂಡು ಕಟ್ಟಿ ಸಂಸಾರ ಮಾಡುತ್ತಿದ್ದವು ,ಅವುಗಳ ಚಲನ ವಲನ ವೀಕ್ಷಿಸುವುದೇ ನಮಗೆ ಸಂಭ್ರಮವಾಗಿರುತ್ತಿತ್ತು , ಇಂದು ಅಪರೂಪಕ್ಕೂ ಕಾಣದಾಗಿದೆ.
ಆಗಾಗ ನಮ್ಮ ಬಳಿ ಬಂದು ಖುಷಿ ಕೊಡುತ್ತಿದ್ದ ಮಿಂಚು ಹುಳುಗಳು, ದುಂಬಿಗಳು, ಚಿಟ್ಟೆಗಳೂ ಸಹ ದುರ್ಲಭ ವಾದುದು ನೆನೆದರೆ ಆಧುನಿಕತೆಯ ಹೆಸರಿನಲ್ಲಿ ನಮ್ಮ ಸ್ವಾರ್ಥ ಸಾಧನೆಗಾಗಿ
ನಮ್ಮ ಜೀವನ ಪದ್ಧತಿಯೇ ಇವುಗಳ ಅವನತಿಗೆ ಕಾರಣವಾಯಿತೆಂಬ ಪಾಪ ಪ್ರಜ್ಞೆ ಕಾಡುವುದು.
ಆದರೂ ಒಂದು ಸಮಾಧಾನದ ಸಂಗತಿ ಏನೆಂದರೆ ನಮ್ಮ ಪರಿಸರದಲ್ಲಿ ಸಮುದಾಯದ ಮೇಲೆ ಅವಲಂಭಿಸಿರುವ ಪ್ರಾಣಿಗಳನ್ನು ಸಂರಕ್ಷಿಸಬೇಕು ಹಾಗೂ ಮನುಕುಲದ ಕರ್ತವ್ಯವೆಂಬ ಭಾವನೆಯು ಸಮಾಜದಲ್ಲಿ ಮೂಡುತ್ತಿದೆ, ಜಾಗೃತವಾಗುತ್ತಿದೆ.
ಉಳಿವಿಗೆ ಬೇಕಿರುವುದು ಒಂದು ಸ್ವಲ್ಪ ಆಹಾರ, ನೀರು, ಸಹಾಯ ಹಸ್ತ. ಪ್ರೀತಿ ,ದಯೆ ತೋರುವ ವಿಶಾಲ ಹೃದಯ ನಮ್ಮೆಲ್ಲರದಾಗಿರಲಿ. 🤝🙏.