

ಸಿಂಧಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ.
ಯಲಹಂಕ ಸುದ್ದಿ. ದಿನಾಂಕ 26 6:25 ರಂದು ನಡೆದ ನಗರದ ಥಣಿಸಂದ್ರ ಮುಖ್ಯ ರಸ್ತೆಯಲ್ಲಿರುವ ಸಿಂಧಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವು ಜೂನ್ ತಿಂಗಳ 26ರಂದು ಕೆಂಪಾಪುರದ ಸಿಂಧಿ ಪದವಿ ಕಾಲೇಜಿನ ಆಡಿಟೋರಿಯಂ ನಲ್ಲಿ ಅದ್ದೂರಿಯಾಗಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕಾಂಚನ ಅವರು ವಹಿಸಿದ್ದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ನೀವು ನಿಮ್ಮ ಸಹಪಾಠಿಗಳನ್ನು, ಉಪನ್ಯಾಸಕರನ್ನು ಹಾಗೂ ಸಿಂಧಿ ಪದವಿಪೂರ್ವ ಕಾಲೇಜಿನ ಗೌರವವನ್ನು ಪ್ರತಿನಿಧಿಸುತ್ತೀರಿ; ಹಾಗಾಗಿ ನಿಮಗೆ ಜವಾಬ್ದಾರಿ ಇರಬೇಕು, ನೀವು ಕಾಲೇಜಿಗೆ ಮಾದರಿಯಾಗಿ ಇರಬೇಕೆಂದು ಕರೆ ನೀಡಿದರು.
ಪ್ರಾರ್ಥನೆಯೊಂದಿಗೆ ಆರಂಭವಾದ ಸಮಾರಂಭವು ವಿದ್ಯಾರ್ಥಿ ನಾಯಕರ ಪದಗ್ರಹಣ, ಸಂಘದ ಪ್ರತಿಜ್ಞಾವಿಧಿ ಸ್ವೀಕಾರ, ಪ್ರಾಂಶುಪಾಲರ ಹಿತನುಡಿ, ವಿದ್ಯಾರ್ಥಿ ಸಂಘದ ಅಧ್ಯಕ್ಷರ ಕಿರು ಭಾಷಣದೊಂದಿಗೆ ಮುಕ್ತಾಯಗೊಂಡಿತು. ಸಿಂಧಿ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಎಲ್ಲ ಸದಸ್ಯರು ವಿದ್ಯಾರ್ಥಿಸಂಘವು ಯಶಸ್ವಿಯಾಗಿ ಕಾರ್ಯನಿರ್ವಹಿಸಲೆಂದು ಶುಭವನ್ನು ಹಾರೈಸಿದರು.
ನಂತರ ನಡೆದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಹಲವು ಬಗೆಯ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ಮನರಂಜಿಸಲಾಯಿತು. ಕಾಲೇಜಿನ ಉಪನ್ಯಾಸಕ ವರ್ಗ ನೃತ್ಯ ಮಾಡುವ ಮೂಲಕ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದ್ದು ವಿಶೇಷವಾಗಿತ್ತು.
ಜೂನ್ ತಿಂಗಳ 20ರಂದು ವಿದ್ಯಾರ್ಥಿ ಸಂಘದ ಚುನಾವಣೆಯನ್ನು ನಡೆಸಲಾಯಿತು. ವಿದ್ಯಾರ್ಥಿ ಸಂಘಕ್ಕೆ ಸ್ಪರ್ಧಿಸುವ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸುವುದರೊಂದಿಗೆ ಆರಂಭವಾದ ಈ ಚುನಾವಣಾ ಪ್ರಕ್ರಿಯೆಯು ಚುನಾವಣಾ ಆಕಾಂಕ್ಷಿ ವಿದ್ಯಾರ್ಥಿಗಳ ಪ್ರಚಾರದೊಂದಿಗೆ ಮುಂದುವರೆದು ವಿದ್ಯಾರ್ಥಿಗಳು ತಮ್ಮ ನಾಯಕರನ್ನು ಗೂಗಲ್ ಫಾರ್ಮ್ ನಲ್ಲಿ ಮತಗಳನ್ನು ಚಲಾಯಿಸುವುದರ ಮೂಲಕ ಸಂಪನ್ನಗೊಂಡಿತು. ಈ ವಿದ್ಯಾರ್ಥಿ ಸಂಘಕ್ಕೆ ಇಬ್ಬರು ಅಧ್ಯಕ್ಷರು ಹಾಗೆಯೇ ಒಂದೊಂದು ಉಪಾಧ್ಯಕ್ಷ, ಸಾಮಾನ್ಯ ಕಾರ್ಯದರ್ಶಿ ಸಾಂಸ್ಕೃತಿಕ ಕಾರ್ಯದರ್ಶಿ ಕ್ರೀಡಾ ಕಾರ್ಯದರ್ಶಿ ಪದಾಧಿಕಾರಿಗಳನ್ನು ನಿಗದಿಗೊಳಿಸಲಾಗಿತ್ತು. ಹಾಗೆಯೇ ವಿವಿಧ ವಿಷಯಕ್ಕೆ ಸಂಬಂಧಿಸಿದಂತೆ ಕ್ಲಬ್ ಗಳನ್ನು ಸಂಘಟಿಸಿ ಅವುಗಳಿಗೆ ಒಬ್ಬೊಬ್ಬ ವಿದ್ಯಾರ್ಥಿ ಮುಖ್ಯಸ್ಥನನ್ನು ಆಯ್ಕೆ ಮಾಡಲಾಯಿತು. ಜೊತೆಗೆ ತರಗತಿ ಪ್ರತಿನಿಧಿಗಳು ಮತ್ತು ಕ್ರೀಡಾ ಪ್ರತಿನಿಧಿಗಳನ್ನು ಸಹ ಆಯ್ಕೆ ಮಾಡಲಾಯಿತು. ವಿದ್ಯಾರ್ಥಿಯಲ್ಲಿ ದೆಸೆಯಲ್ಲಿಯೇ ಮಕ್ಕಳಲ್ಲಿ ನಾಯಕತ್ವ ಗುಣ, ಸಹಕಾರ ಗುಣ, ಸೇವಾ ಮನೋಭಾವ ಬೆಳೆಸುವ ಉದ್ದೇಶ ಹೊಂದಿರುವ ಈ ವಿದ್ಯಾರ್ಥಿ ಸಂಘವು ಇಡೀ ಶೈಕ್ಷಣಿಕ ವರ್ಷದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಕಾಲೇಜಿನ ಪ್ರಗತಿಗೆ ಸಹಕರಿಸಲಿದೆ.