‘ವಿಶ್ವವಾಣಿ’ ಫೌಂಡೇಶನ್ ವತಿಯಿಂದ 120 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ :

ಯಲಹಂಕ : ‘ವಿಶ್ವವಾಣಿ ಫೌಂಡೇಶನ್’ ವತಿಯಿಂದ ರಾಜಾನುಕುಂಟೆ ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ರಾಜಾನುಕುಂಟೆ ಸರ್ಕಾರಿ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಸ್. ಆರ್.ವಿಶ್ವನಾಥ್ ಅವರು ಹೊಲಿಗೆ ತರಬೇತಿ ಪಡೆದ 120 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ, ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿದರು.

ನಂತರ ಮಾತನಾಡಿದ ಅವರು ‘ಜನ್ಮದಿನದ ಕಾರ್ಯಕ್ರಮದಂದು ಹೊಲಿಗೆ ತರಬೇತಿ ಪಡೆದ 500 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸುವ ಯೋಜನೆಯಿತ್ತು, ಆದರೆ ಅಂದು ಸಾಂಕೇತಿಕವಾಗಿ ಹೊಲಿಗೆ ಯಂತ್ರ ವಿತರಿಸಲಾಯಿತು. ಈ ದಿಸೆಯಲ್ಲಿ ಇಂದು ರಾಜಾನುಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಹೊಲಿಗೆ ತರಬೇತಿ ಪಡೆದ 120 ಮಹಿಳೆಯರಿಗ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಿದ್ದೇವೆ, ಜೊತೆಗೆ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ಸಹ ವಿತರಿಸಿದ್ದೇವೆ. ಮಹಿಳೆಯರು, ಮಕ್ಕಳು, ವಿಕಲ ಚೇತನರು ಮುಂತಾದ ದುರ್ಬಲ ಆರ್ಥಿಕ ವರ್ಗದವರಿಗೆ ಸೇವೆ, ಸವಲತ್ತು, ನೆರವು ನೀಡುವ ಮೂಲಕ ಅವರನ್ನು ಸಬಲರನ್ನಾಗಿ ಮಾಡಬೇಕೆಂಬ ಘನ ಉದ್ದೇಶಕ್ಕಾಗಿ ವಿಶ್ವವಾಣಿ ಫೌಂಡೇಶನ್ ಸ್ಥಾಪಿಸಲಾಗಿದ್ದು, ಕಳೆದ ಹಲವು ವರ್ಷಗಳಿಂದ ಅತ್ಯಂತ ಶ್ರದ್ಧೆಯಿಂದ ಸೇವಾ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.

ಕಾರ್ಯಕ್ರಮ ಉದ್ದೇಶಿಸಿ ಆರ್ ಎಸ್ ಎಸ್ ಎನ್ ಬ್ಯಾಂಕ್ ಅಧ್ಯಕ್ಷೆ, ವಿಶ್ವವಾಣಿ ಫೌಂಡೇಶನ್ ನ ನಿರ್ದೇಶಕರಾದ ಡಾ.ವಾಣಿಶ್ರೀ ವಿಶ್ವನಾಥ್ ಅವರು ಮಾತನಾಡಿ ‘ವಿಶ್ವವಾಣಿ ಫೌಂಡೇಶನ್ ಶೈಕ್ಷಣಿಕ ಉನ್ನತಿಗಾಗಿ ಶ್ರಮಿಸುತ್ತಿದ್ದು, ಯಲಹಂಕ ಕ್ಷೇತ್ರದ ಶಾಲಾ ಕಾಲೇಜುಗಳಿಗೆ ಸ್ಮಾರ್ಟ್ ಬೋರ್ಡ್ ವಿತರಣೆ, ಮಕ್ಕಳಿಗೆ ನೋಟ್ ಪುಸ್ತಕ, ಕಂಪ್ಯೂಟರ್ ಮುಂತಾದ ಶೈಕ್ಷಣಿಕ ಅಗತ್ಯತೆಗಳನ್ನು ಕಳೆದ ಹಲವು ವರ್ಷಗಳಿಂದ ಪೂರೈಸುತ್ತಿದೆ, ಮುಂದೆಯೂ ಸಹ ಫೌಂಡೇಶನ್ ಶೈಕ್ಷಣಿಕ ಉತ್ತೇಜನಕ್ಕೆ ಶ್ರಮಿಸಲಿದೆ ಎಂದರು.

ಇದೇ ಸಂದರ್ಭದಲ್ಲಿ ಬಿಇಓ ಶೈಲಾ, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಶ್ವನಾಥಪುರ ಮಂಜುನಾಥ್, ರಾಜಾನುಕುಂಟೆ ಗ್ರಾ.ಪಂ.ಅಧ್ಯಕ್ಷೆ ಸುಜಾತಮ್ಮ, ಮಾಜಿ ಅಧ್ಯಕ್ಷರಾದ ಎಸ್.ಜಿ.ನರಸಿಂಹಮೂರ್ತಿ(ಎಸ್.ಟಿ.ಡಿ.ಮೂರ್ತಿ), ಭವಾನಿ, ಎಸ್.ಡಿ.ಎಂ.ಸಿ.ಅಧ್ಯಕ್ಷ ರಾಜೇಂದ್ರ ಕುಮಾರ್, ಗ್ರಾ.ಪಂ. ಸದಸ್ಯರಾದ ಆರ್.ಡಿ.ರಾಜಣ್ಣ, ವೆಂಕಟೇಶ್, ಚಿಕ್ಕಣ್ಣ, ಪಿಡಿಓ ನಾಗರಾಜ್ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *