



ಯಲಹಂಕ : ಯಲಹಂಕ ಕ್ಷೇತ್ರದ ‘ಸಾದೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ’ದ ವತಿಯಿಂದ ಬುಧವಾರ ಆಯೋಜಿಸಿದ್ದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಎಸ್.ಕೆ. ಅವರ ಅಧ್ಯಕ್ಷತೆ ಮತ್ತು ಬೆಂ.ಸಹಕಾರ ಹಾಲು ಒಕ್ಕೂಟದ ನಿರ್ದೇಶಕ ಸತೀಶ್ ಕಡತನಮಲೆ ಅವರ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ನಿರ್ದೇಶಕರಾದ ಸತೀಶ್ ಕಡತನಮಲೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ವೇಳೆ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಳ, ಉತ್ತಮ ಗುಣಮಟ್ಟದ ಹಾಲು ಶೆಖರಣೆ, ಸಹಕಾರ ಸಂಘದಲ್ಲಿ ಲೆಕ್ಕ ಪುಸ್ತಕಗಳ ತಪಾಸಣೆ ಹಾಗೂ ರಾಸುಗಳ ತಳಿ ಅಭಿವೃದ್ಧಿ, ಸದಸ್ಯರುಗಳಿಗೆ ಬಮೂಲ್ ನಿಂದ ಸಿಗುವ ಅನುದಾನ ಮತ್ತು ಸೌಲಭ್ಯಗಳ ಬಗ್ಗೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯಕಾರಿ ಮಂಡಳಿ ನಿರ್ದೇಶಕರುಗಳು ಮತ್ತು ಮುಖ್ಯ ಕಾರ್ಯ ನಿರ್ವಾಹರು ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರುಗಳ ಜೊತೆ ಸಮಾಲೋಚನೆ ನಡೆಸಿದರು. ಸಂಘದ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಸಭೆ ಸಮಾರಂಭಗಳಿದ್ದಲ್ಲಿ ನಂದಿನಿ ಉತ್ಪನ್ನಗಳನ್ನು ಮಾತ್ರ ಬಳಸುವಂತೆ ಗ್ರಾಹಕರಿಗೆ ತಿಳಿಸುವ ಮೂಲಕ ನಂದಿನಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಸೃಷ್ಟಿಸಲು ಅಗತ್ಯ ಸಹಕಾರ ನೀಡುವ ನಿರ್ಧಾರ ತೆಗೆದುಕೊಳ್ಳಲಾಯಿತು.
ಸಾಮಾನ್ಯ ಸಭೆಯಲ್ಲಿ ಸಾದೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷೆ ಸುಜಾತ, ಮಾಜಿ ಅಧ್ಯಕ್ಷ ಎಸ್.ಪಿ.ಪ್ರಭಾಕರ್, ನಿರ್ದೇಶಕರಾದ ಎಸ್.ಪಿ.ಅಪ್ಪಯ್ಯ, ಎಸ್.ಎಚ್.ಅಪ್ಪಣ್ಣಗೌಡ, ರವಿಕುಮಾರ್, ಗೋಪಾಲಗೌಡ, ನಾರಾಯಣಸ್ವಾಮಿ, ಆಂಜಿನಪ್ಪ, ಹನುಮಂತಯ್ಯ, ಅನ್ನಪೂರ್ಣಮ್ಮ ಸೇರಿದಂತೆ ಶಿಬಿರ ಕಚೇರಿಯ ಅಧಿಕಾರಿಗಳು, ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರಿದ್ದರು.
