






ಬಮೂಲ್, ನಂದಿನಿ ಸಂಸ್ಥೆಗಳು ರೈತರ ಸಂಸ್ಥೆಗಳು : ಸತೀಶ್ ಕಡತನಮಲೆ
ಕಡತನಮಲೆ, ಹನಿಯೂರು ಹಾ.ಉ. ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ
ಯಲಹಂಕ : ಬಮೂಲ್ ಸಂಸ್ಥೆಯಾಗಲಿ ಅಥವಾ ನಂದಿನಿ ಸಂಸ್ಥೆಯಿರಲಿ ಇವು ನಮ್ಮ ಸಂಸ್ಥೆ ಎನ್ನುವುದಕ್ಕಿಂತ ರೈತರ ಸಂಸ್ಥೆಗಳು ಎನ್ನುವುದೇ ಸೂಕ್ತ ಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟದ ನಿರ್ದೇಶಕ ಸತೀಶ್ ಕಡತನಮಲೆ ಅಭಿಪ್ರಾಯಪಟ್ಟರು.
ಯಲಹಂಕ ಕ್ಷೇತ್ರದ ಕಡತನಮಲೆ ಮತ್ತು ಹನಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ಹಾಲು ಉತ್ಪಾದಕ ರೈತರು ಪರಿಶ್ರಮಪಟ್ಟು ಸಾಕಿರುವ ಹಸುಗಳ ಹಾಲನ್ನು ಸಂಗ್ರಹಿಸಿ, ಸಮರ್ಪಕ ರೀತಿಯಲ್ಲಿ ಮಾರಾಟ ಮತ್ತು ನಿರ್ವಹಣೆ ಮಾಡುವ ಮೂಲಕ ಗಳಿಸಿದ ಹಣದಿಂದ ಬಮೂಲ್ ಮತ್ತು ನಂದಿನಿ ಸಂಸ್ಥೆಗಳು ಈ ಮಟ್ಟದ ದೊಡ್ಡ ಸಂಸ್ಥೆಗಳಾಗಿ ಬೆಳೆದಿವೆ. ರೈತರು ಹಾಲನ್ನೇ ಉತ್ಪಾದಿಸದಿಧ್ದರೆ ಈ ಸಂಸ್ಥೆಗಳ ಬೆಳವಣಿಗೆ ಅಸಾಧ್ಯ, ಈ ದಿಸೆಯಲ್ಲಿ ಹಾಲು ಉತ್ಪಾದಕರ ಕೊಡುಗೆಯನ್ನು ಸ್ಮರಿಸಬೇಕಿದೆ ಎಂದರು.
ನಗರೀಕರಣದ ಪ್ರಭಾವಕ್ಕೊಳಗಾಗಿ ಕೃಷಿ ಭೂಮಿ ಕ್ಷೀಣವಾಗುತ್ತಿರುವ ಇಂದಿನ ದಿನಗಳಲ್ಲಿ ಬೆಂಗಳೂರು ನಗರ ಪ್ರದೇಶದಲ್ಲಿ ಹಸು ಸಾಕಾಣಿಕೆ ಅತ್ಯಂತ ಸವಾಲಿನ ಕೆಲಸವಾಗಿದ್ದು, ಅವುಗಳಿಗೆ ಮೇವು ಒದಗಿಸುವುದು, ಪೋಷಣೆ ಮಾಡುವುದು ಹೇಳುವಷ್ಟು ಸುಲಭದ ಕೆಲಸವಲ್ಲ, ಇಂತಹ ವಿಷಮ ಪರಿಸ್ಥಿತಿಯಲ್ಲಿಯೂ ಹಸುಗಳನ್ನು ಸಾಕಿ, ಪೋಷಣೆ ಮಾಡುತ್ತಿರುವ ಹೈನು ಉತ್ಪಾದಕ ರೈತರ ಪರಿಶ್ರಮ ಪ್ರಶಂಸಾರ್ಹ ವಾದುದು ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಹಕಾರ ಸಂಘದ ವತಿಯಿಂದ ನಿರ್ದೇಶಕ ಸತೀಶ್ ಕಡತನಮಲೆ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಳ, ಉತ್ತಮ ಗುಣಮಟ್ಟದ ಹಾಲಿನ ಶೆಖರಣೆ, ಸಂಘಗಳಲ್ಲಿ ಲೆಕ್ಕ ಪುಸ್ತಕಗಳ ಸಮರ್ಪಕ ನಿರ್ವಹಣೆ, ರಾಸುಗಳ ತಳಿ ಅಭಿವೃದ್ಧಿ, ಸದಸ್ಯರುಗಳಿಗೆ ಬಮೂಲ್ ನಿಂದ ಸಿಗುವ ಅನುದಾನದ ಮತ್ತು ಸೌಲಭ್ಯಗಳ ಸದ್ಬಳಕೆ ಕುರಿತು ಸಹಕಾರ ಸಂಘದ ಅಧ್ಯಕ್ಷರು,ಕಾರ್ಯಕಾರಿ ಮಂಡಳಿ ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹರು ಮತ್ತು ಸಹಕಾರ ಸಂಘದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ, ಸಂಘದ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಸಭೆ, ಸಮಾರಂಭಗಳು ಇದ್ದಲ್ಲಿ ನಂದಿನಿ ಉತ್ಪನ್ನಗಳನ್ನು ಮಾತ್ರ ಬಳಸುವಂತೆ ಮಾಡಲು ಅಗತ್ಯ ಜಾಗೃತಿ ಮೂಡಿಸುವ ಕುರಿತು ಚರ್ಚಿಸಲಾಯಿತು.
ಸಾಮಾನ್ಯ ಸಭೆಯಲ್ಲಿ ಬೆಂ.ಉತ್ರರ ಶಿಬಿರ ಕಚೇರಿಯ ಅಧಿಕಾರಿಗಳು, ಸಹಕಾರ ಸಂಘದ ಕಾರ್ಯಕಾರಿ ಮಂಡಳಿ ನಿರ್ದೇಶಕರು, ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
