












ಬ್ರಹ್ಮಕುಮಾರಿ ಯಲಹಂಕ ಉಪನಗರ ಸೇವಾ ಕೇಂದ್ರದ ವತಿಯಿಂದ ಬೃಹತ್ ರಕ್ತದಾನ ಶಿಬಿರ :
ದಾದಿ ಪ್ರಕಾಶ್ ಮಣಿ ಜೀ ಅವರ ಸ್ಮರಣೆಗಾಗಿ ಆಯೋಜನೆ :
ಯಲಹಂಕ : ‘ವಿಶ್ವ ಬ್ರಾತೃತ್ವ ದಿನ’ದ ಪ್ರಯುಕ್ತ ಹಿರಿಯ ಬ್ರಹ್ಮಕುಮಾರಿ ಆಗಿದ್ದ ದಾದಿ ಪ್ರಕಾಶ್ ಮಣಿ ಜೀ ಅವರ 18ನೇ ವರ್ಷದ ಸ್ಮರಣೆಗಾಗಿ ಬ್ರಹ್ಮಕುಮಾರಿ ಯಲಹಂಕ ಉಪನಗರ ಸೇವಾ ಕೇಂದ್ರ ಮತ್ತು ಲಯನ್ಸ್ ಕ್ಲಬ್ ಸಹಯೋಗ ದೊಂದಿಗೆ ಭಾನುವಾರ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಅಸಂಖ್ಯಾತ ನಾಗರೀಕರು, ಬ್ರಹ್ಮಕುಮಾರಿ ಆಧ್ಯಾತ್ಮಿಕ ಸೇವಾ ಕೇಂದ್ರದ ಸೇವಾಕರ್ತರು ರಕ್ತದಾನ ಮಾಡಿದರು.
ರಕ್ತದಾನ ಶಿಬಿರ ಉದ್ದೇಶಿಸಿ ಬ್ರಹ್ಮಕುಮಾರಿ ಯಲಹಂಕ ಉಪನಗರ ಸೇವಾ ಕೇಂದ್ರದ ಸಂಚಾಲಕಿ ಬಿ.ಕೆ.ವಿಜಯಲಕ್ಷ್ಮಿ ಅವರು ಮಾತನಾಡಿ ‘ಬ್ರಹ್ಮಕುಮಾರಿ ಆಧ್ಯಾತ್ಮಿಕ ಸೇವಾ ಕೇಂದ್ರದ ವತಿಯಿಂದ ವಿಶ್ವದಾದ್ಯಂತದ ಇರುವ ಎಲ್ಲಾ ಸೇವಾ ಕೇಂದ್ರಗಳಲ್ಲೂ ಸಾಮಾಜಿಕ ಕ್ಷೇತ್ರದ ಕಾರ್ಯವಾಗಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು, ಆ.22ರಿಂದ 25ರವರೆಗೆ ಈ ರಕ್ತದಾನ ಶಿಬಿರ ನಡೆಯಲಿದೆ. 1 ಲಕ್ಷ ಯುನಿಟ್ ಗಳಷ್ಟು ರಕ್ತ ಸಂಗ್ರಹದ ಗುರಿ ಹೊಂದಲಾಗಿದ್ದು, ಸಂಗ್ರಹಿತ ರಕ್ತವನ್ನು ಸಮಾಜದಲ್ಲಿ ರಕ್ತದ ಅಗತ್ಯ ಇರುವವರಿಗೆ ಸಮರ್ಪಿಸಲಾಗುವುದು. ಈ ಘನ ಕಾರ್ತಕ್ಕೆ ಲಯನ್ಸ್ ಕ್ಲಬ್ ಸಂಸ್ಥೆ ನಮ್ಮೊಂದಿಗೆ ಸಹಯೋಗ ವಹಿಸಿರುವುದರ ಜೊತೆಗೆ ಬ್ರಹ್ಮಕುಮಾರಿ ಆಧ್ಯಾತ್ಮಿಕ ಸೇವಾ ಸಂಸ್ಥೆಯೊಂದಿಗೆ ಇಂತಹ ಸೇವಾ ಕಾರ್ಯಗಳಲ್ಲಿ ಸಹಯೋಗ ವಹಿಸುವ ಭರವಸೆ ನೀಡಿರುವುದು ಸಂತೋಷ ಉಂಟು ಮಾಡಿದೆ. ರಕ್ತದಾನ ಶಿಬಿರದಲ್ಲಿ ಯಲಹಂಕ ಉಪನಗರದ ಅಸಂಖ್ಯಾತ ನಾಗರೀಕರು ಮತ್ತು ಬ್ರಹ್ಮಕುಮಾರಿ ಸೇವಾ ಕೇಂದ್ರದ ಸೇವಾಕರ್ತರು ಸ್ವಯಂ ಪ್ರೇರಣೆಯಿಂದ ಆಗಮಿಸಿ ರಕ್ತದಾನ ಮಾಡಿರುವುದು ಸಾರ್ಥಕತೆಯ ಭಾವನೆ ಮೂಡುವಂತೆ ಮಾಡಿದೆ. ನಮ್ಮ ಸೇವಾ ಕೇಂದ್ರದ ವತಿಯಿಂದ ಸುಮಾರು 200 ಯುನಿಟ್ ಗಳಷ್ಟು ರಕ್ತ ಸಂಗ್ರಹವಾಗುವ ನಿರೀಕ್ಷೆಯಿದೆ ಎಂದರು.
ಇದೇ ಸಂದರ್ಭದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಡಿಜಿಎಂ ಲಕ್ಷ್ಮೀಕಾಂತ್ ರಾವ್, ರೇಡಿಯಲ್ ಡಯೋಗ್ನೋಸ್ಟಿಕ್ ಸೆಂಟರ್ ನ ಸಂಸ್ಥಾಪಕ ರಾಮಕೃಷ್ಣ, ಯಲಹಂಕ ಲಯನ್ಸ್ ಕ್ಲಬ್ ನ ನಿರ್ದೇಶಕಿ ರೇಖಾ, ಬೆಸ್ಕಾಂ ಯಲಹಂಕದ ಮುಖ್ಯ ವ್ಯವಸ್ಥಾಪಕ ವಿನೋದ್ ಕುಮಾರ್, ಮಾರುತಿ ನಗರ ಬ್ರಹ್ಮಕುಮಾರಿ ಸೇವಾ ಕೇಂದ್ರದ ಸಂಚಾಲಕಿ ಬಿ.ಕೆ.ಕಲಾವತಿ ಸೇರಿದಂತೆ ಇನ್ನಿತರರಿದ್ದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
R Hanumanthau
Kogilu layout Yelahanka
9845085793
7349337989
