







ಐಸಿಎಆರ್-ನಿವೇದಿ ಸಂಸ್ಥೆಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾನ್ ಭೇಟಿ :
ಯಲಹಂಕ : ಯಲಹಂಕ ಕ್ಷೇತ್ರದ ರಾಮಗೊಂಡನಹಳ್ಳಿ ಸಮೀಪ ವಿರುವ ‘ರಾಷ್ಟ್ರೀಯ ಪಶುರೋಗ ಸೋಂಕುಶಾಸ್ತ್ರ ಮತ್ತು ಮಾಹಿತಿ ವಿಜ್ಞಾನ ಸಂಸ್ಥೆ(ಐಸಿಎಆರ್- ನಿವೇದಿ)ಗೆ ಕೇಂದ್ರ ಕೃಷಿ, ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾನ್ ಶುಕ್ರವಾರ ಭೇಟಿ ನೀಡಿ, ಸಂಸ್ಥೆಯ ಮುಖ್ಯಸ್ಥ ಡಾ.ಬಲದೇವ್ ರಾಜ್ ಗುಲಾಟಿ ಅವರಿಂದ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ ರೈತರು, ಪಶುಸಾಕಾಣೆದಾರರು ಮತ್ತು ಇತರ ಪಾಲುದಾರರೊಂದಿಗೆ ಸಂವಾದ ನಡೆಸಿದರು.
ನಂತರ ವೇದಿಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ‘ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಇಂದು ಅತ್ಯಂತ ವೇಗದ ಗತಿಯಲ್ಲಿ ಮುನ್ನಡೆಯುತ್ತಿದೆ. ಇತರೆ ಯಾವುದೇ ದೇಶ ನಮ್ಮನ್ನು ದಬಾಯಿಸುವುದನ್ನು ಸಹಿಸಿಕೊಂಡು ಸುಮ್ಮನೆ ಕೂರುವ ಮಟ್ಟದಲ್ಲಿ ನಾವಿಲ್ಲ, ವಿಶ್ವದ ನಾಲ್ಕನೆಯ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಿದ್ದು, ಶೀಘ್ರದಲ್ಲೇ ಮೂರನೆಯ ಸ್ಥಾನಕ್ಕೇರಲಿದ್ದು, ವಿಶ್ವಗುರುವಾಗುವತ್ತ ದಾಪುಗಾಲಿಡುತ್ತಿದೆ.
ಕೃಷಿ ನಮ್ಮ ದೇಶದ ಪರಂಪರಾಗತ ವೃತ್ತಿಯಾಗಿದ್ದು, ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳ ಅಳವಡಿಕೆ, ನವೀನ ರೀತಿಯ ಸಂಶೋಧನೆಗಳ ಮೂಲಕ ಕೃಷಿಯಲ್ಲೂ ಸಹ ಆರ್ಥಿಕ ಸದೃಢತೆಯನ್ನು ಕಾಪಾಡಿಕೊಳ್ಳುತ್ತಿದೆ. ಕೃಷಿಯ ಪೂರಕ ಚಟುವಟಿಕೆಗಳಾದ ಪಶುಸಾಂಗೋಪನೆ ಯಲ್ಲೂ ಸಹ ನಮ್ಮ ರೈತರು ಹಿಂದೆ ಬಿದ್ದಿಲ್ಲ. ಹಸು, ಕುರಿ, ಕೋಳಿ, ಮೀನುಗಾರಿಕೆ ಯಂತಹ ಕೃಷಿಯ ಉಪಕಸುಬುಗಳ ಮೂಲಕವೂ ನಮ್ಮ ರೈತರು ಗಣನೀಯವಾಗಿ ಆದಾಯ ಗಳಿಸುತ್ತಿರುವುದು ಹೆಮ್ಮೆಯ ಸಂಗತಿ. ಪಶುಸಾಂಗೋಪಾನೆ ಸಮರ್ಪಕ ರೀತಿಯಲ್ಲಿ ನಡೆಯಲು ಅಗತ್ಯವಿರುವ ಸಂಶೋಧನೆ ಗಳು ಮತ್ತು ಪಶು ರೋಗ ನಿಯಂತ್ರಣಕ್ಕಾಗಿ ಐಸಿಎಆರ್-ನಿವೇದಿಯಂತಹ ಹಲವು ಸಂಸ್ಥೆಗಳಲ್ಲಿ ನಮ್ಮ ವಿಜ್ಞಾನಿಗಳು ನಿರಂತರ ಪರಿಶ್ರಮ ಕೈಗೊಳ್ಳುವ ಮೂಲಕ ರೋಗ ಹತೋಟಿಗೆ ಅಗತ್ಯ ಔಷದಿ ಸಂಶೋಧನೆಯಲ್ಲಿ ತೊಡಗಿದ್ದು, ಪಶುಸಾಂಗೋಪನೆ ಅಭಿವೃದ್ಧಿಗೆ ಇಂಬು ನೀಡುತ್ತಿರುವುದು ಸಂತೋಷದ ಸಂಗತಿ ಎಂದ ಅವರು ಕೇವಲ ಉದ್ಯೋಗದ ಏಕಮೇವ ಉದ್ದೇಶಕ್ಕಾಗಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಬಾರದು ಸಮಾಜಕ್ಕೆ, ದೇಶಕ್ಕೆ ಏನಾದರೊಂದು ಕೊಡುಗೆ ನೀಡಬೇಕೆಂಬ ಉತ್ಕಟವಾದ ಇಚ್ಛೆಯನ್ನಿಟ್ಟು ಕೊಂಡು ವ್ಯಾಸಂಗ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ, ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್, ಡಾ.ರಾಘವೇಂದ್ರ ಭಟ್, ನಿವೇದಿ ಸಂಸ್ಥೆಯ ವಿಜ್ಞಾನಿಗಳಿದ್ದರು.
ಕಾರ್ಯಕ್ರಮದಲ್ಲಿ ಹೈನು ಉತ್ಪಾದಕ ರೈತರಿಗೆ ಹಾಲಿನ ಕ್ಯಾನ್, ಪಶು ಆಹಾರ ವಿತರಿಸಲಾಯಿತು.