ಸದಸ್ಯರ ಸಹಕಾರ, ನಿರ್ದೇಶಕರ ಬೆಂಬಲದಿಂದಾಗಿ ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘ ಯಶಸ್ವಿಯಾಗಿ ಮುನ್ನಡೆಯುತ್ತಿದೆ : ಡಾ.ವಾಣಿಶ್ರೀ ವಿಶ್ವನಾಥ್
ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ :
ಯಲಹಂಕ : ಸಹಕಾರ ಸಂಘದ ಸದಸ್ಯರ ಸಹಕಾರ, ನಿರ್ದೇಶಕರ‌ ಬೆಂಬಲ ಮತ್ತು ಸಮಯೋಚಿತ ಸಲಹೆ, ಸಿಬ್ಬಂದಿಗಳ ಪ್ರಾಮಾಣಿಕ ಕಾರ್ಯವೈಖರಿಯಿಂದಾಗಿ ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘವು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು ‘ಎ’ ದರ್ಜೆಯಲ್ಲಿ ಮುನ್ನಡೆದಿದೆ ಎಂದು ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷೆ ಡಾ.ವಾಣಿಶ್ರೀ ವಿಶ್ವನಾಥ್ ತಿಳಿಸಿದರು.
ಸಿಂಗನಾಯಕನಹಳ್ಳಿ ಗ್ರಾಮದ ಪುನೀತ್ ರಾಜ್‍ಕುಮಾರ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಸಹಕಾರ ಸಂಘವು 7154 ಎ ದರ್ಜೆಯ ಸದಸ್ಯರು, 1170 ಡಿ ದರ್ಜೆ ಸದಸ್ಯರು ಮತ್ತು 26 ಸಾವಿರ ಜನ ಸಿ ದರ್ಜೆಯ ಸದಸ್ಯರನ್ನು ಹೊಂದಿದ್ದು, 211 ಕೋಟಿ ರು.ಗಳ ಠೇವಣಿ ಸಂಗ್ರಹವನ್ನು ಹೊಂದಿದ್ದು, ಸಹಕಾರ ಸಂಘದಲ್ಲಿ ಒಟ್ಟು 277 ಕೋಟಿ ರು.ಗಳಷ್ಟು ದುಡಿಯುವ ಬಂಡವಾಳವಿದೆ. ಪ್ರಸಕ್ತ ವರ್ಷದಲ್ಲಿ ಸಹಕಾರ ಸಂಘಕ್ಕೆ ಸುಮಾರು 5.70 ಕೋಟಿ ರು.ಗಳಷ್ಟು ಲಾಭಾಂಶ ಬಂದಿದೆ. ಈ ಪೈಕಿ 16% ಡಿವಿಡೆಂಟ್ ನಂತೆ ಸುಮಾರು 1 ಕೋಟಿ ರು.ಗಳಷ್ಟು ಡಿವಿಡೆಂಟ್ ಹಣವನ್ನು ರೈತರಿಗೆ ವಿತರಿಸಲು ಯೋಜಿಸಲಾಗಿತ್ತು, ಆದರೆ ನಮ್ಮ ರೈತರು ಈ ಹಣದಲ್ಲಿ ವಾಣಿಜ್ಯ ಕಟ್ಟಡ ಕಟ್ಟಿಸುವಂತೆ ಸೂಚಿಸುವ ಮೂಲಕ ಉದಾರತೆ ಮೆರೆದಿದ್ದು, ಈ ಹಣದಲ್ಲಿ ಚಿಕ್ಕಬೆಟ್ಟಹಳ್ಳಿ ಯಲ್ಲಿದ್ದ ಸಹಕಾರ ಸಂಘದ ಹಳೆಯ ಕಟ್ಟಡವನ್ನು ತೆರವುಗೊಳಿಸಿ, ಅಲ್ಲಿ ಬೃಹತ್ ವಾಣಿಜ್ಯ ಕಟ್ಟಡ ನಿರ್ಮಿಸಲಾಗುವುದು. ಸಹಕಾರ ಸಂಘದಿಂದ ಸುಮಾರು 9200 ಪಡಿತರ ಚೀಟಿದಾರರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ನೆರವಿನಿಂದ ಬರುವ ಪಡಿತರ ಧಾನ್ಯವನ್ನು ಯಾವುದೇ ಬೇಧವಿಲ್ಲದೆ ವಿತರಿಸಲಾಗುತ್ತಿದೆ. ರು. 5 ಲಕ್ಷದ ವರೆಗೆ 0% ಬಡ್ಡಿದರದ ಸಾಲ ವಿತರಿಸಲಾಗುತ್ತಿದೆ. 25 ಲಕ್ಷದವರೆಗೆ ಅಡಮಾನ ಸಾಲ ಮತ್ತು ಆಭರಣ ಸಾಲ ವಿತರಿಸಲಾಗುತ್ತಿದೆ. ಶೇ 3% ಬಡ್ಡಿದರದ ಮದ್ಯಮಾವಧಿ ಸಾಲ ವಿತರಿಸಲಾಗುತ್ತಿದೆ. 20 ಸದಸ್ಯರನ್ನೊಳಗೊಂಡ ಪ್ರತಿ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳಿಗೆ 5 ಲಕ್ಷದಂತೆ ಒಟ್ಟು 2 ಕೋಟಿ ರು.ಗಳಷ್ಟು ಸಾಲ ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಸಹಕಾರ ಸಂಘವು ಒಟ್ಟು 19 ಕೋಟಿ ರು.ಗಳಷ್ಟು ಸಾಲ ವಿತರಿಸಿದೆ.
ಮಾರಸಂದ್ರ ದಲ್ಲಿ 50 ಲಕ್ಷ ರು.ವೆಚ್ಚದಲ್ಲಿ ಸಹಕಾರ ಸಂಘದ ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು. ಉಳಿದಂತೆ ರೈತರಿಗೆ ಸಮಯಕ್ಕೆ ಸರಿಯಾಗಿ ರಸಗೊಬ್ಬರ ವಿತರಣೆ, ಕೃಷಿ ಪರಿಕರಗಳ ಖರೀದಿಗೆ ಸಾಲ ಮತ್ತು ನೆರವು ಸೇರಿದಂತೆ ಹಲವು ಜನಪರ ಕಾರ್ಯಗಳನ್ನು ಸಿಂಗನಾಯಕನ ಹಳ್ಳಿ ರೈತರ ಸೇವಾ ಸಹಕಾರ ಸಂಘ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬಂದಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಸಂಪೂರ್ಣ ಬೆಂಬಲದೊಂದಿಗೆ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕಾಗಿ ಸದಸ್ಯರಿಗೆ ಅಭಾರಿಯಾಗಿದ್ದೇನೆ, ಸದಸ್ಯರ ಆಶೀರ್ವಾದ, ಸಹಕಾರ, ನಿರ್ದೇಶಕರ ಸಮಯೋಚಿತ ಸಲಹೆ, ಬೆಂಬಲ ಮತ್ತು ಸಿಬ್ಬಂದಿಗಳ ಪರಿಶ್ರಮದ ಕಾರ್ಯವೈಖರಿಯಿಂದಾಗಿ ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಗ್ಗಳಿಕೆಯ ಹೆಸರು ಗಳಿಸಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ ‘ಸಹಕಾರ ಸಂಘಗಳಲ್ಲಿ ಆರೋಗ್ಯ ಪೂರ್ಣ ಚರ್ಚೆಗಳಾಗಬೇಕು, ಅಗತ್ಯ ಮತ್ತು ಅಮೂಲ್ಯವಾದ ಸಲಹೆಗಳಿಗೆ ಎಲ್ಲರ ಬೆಂಬಲ ಇದ್ದೇ ಇರುತ್ತದೆ. ಆದರೆ ಸಹಕಾರ ಸಂಘಗಳ ವಿಚಾರದಲ್ಲಿ ರಾಜಕಾರಣ ಬೆರೆಸುವಂತಹ ಅಪ್ರಸ್ತುತವಾದ ಚರ್ಚೆ ಮತ್ತು ದುರುದ್ದೇಶಪೂರ್ವಕವಾದ ಪ್ರಶ್ನೆಗಳನ್ನು ಕೇಳುವಂತಹ ವ್ಯರ್ಥ ಪ್ರಯತ್ನಗಳಾಗಬಾರದು. ಕುಟುಂಬ ಗಳಲ್ಲಿ ಇರುವಂತೆಯೇ ಸಣ್ಣ ಪುಟ್ಟ ಲೋಪಗಳು ಕಂಡು ಬಂದಾಗ ಅವುಗಳನ್ನೇ ದೊಡ್ಡದು ಮಾಡಿ ಅನಗತ್ಯ ಪ್ರಚಾರ ಮಾಡುವು ದಕ್ಕಿಂತ ಸಹಯೋಗದಲ್ಲಿ ಕುಳಿತು ಸರಿಪಡಿಸಿಕೊಳ್ಳುವ ಆಶಾದಾಯಕ ಬೆಳವಣಿಗೆಗಳು ಆದಾಗ ಸಹಕಾರ ಸಂಘದ ಘನತೆ ಇನ್ನೂ ಎತ್ತರಕ್ಕೆ ತಲುಪುತ್ತದೆ. ಸಿಂಗನಾಯಕನಹಳ್ಳಿ ರೈತರ ಸಹಕಾರ ಸಂಘ ಅತ್ಯುತ್ತಮ ಕಾರ್ಯನಿರ್ವಹಣೆಯಿಂದಾಗಿ ಇಂದು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಗ್ಗಳಿಕೆಯ ಹೆಸರು ಗಳಿಸಿದೆ. ಈ ಬಗ್ಗೆ ಪ್ರತಿಯೊಬ್ಬ ಸದಸ್ಯರು ಹೆಮ್ಮೆ ಪಡಬೇಕು. ಪ್ರತಿವರ್ಷ ಮಳೆ ಆರಂಭವಾದಾಗ ರಾಜ್ಯದೆಲ್ಲೆಡೆ ರಸಗೊಬ್ಬರದ ಕೊರತೆಯ ಕೂಗು ಏಳುತ್ತದೆ ಆದರೆ ಸಿಂಗನಾಯಕನಹಳ್ಳಿ ಸಹಕಾರ ಸಂಘದಲ್ಲಿ ಇದುವರೆಗೂ ರಸಗೊಬ್ಬರದ ಕೊರತೆ ಆಗಿಲ್ಲ. ರಸಗೊಬ್ಬರದ ಕೊರತೆ ನೀಗಿಸಲು ಸಹಕಾರ ಸಂಘ ಎಷ್ಟು ಪರಿಶ್ರಮ ಪಟ್ಠಿರುತ್ತದೆ ಎಂಬ ಬಗ್ಗೆ ಸದಸ್ಯರಲ್ಲಿ ಹೆಮ್ಮೆ ಮೂಡುವಂತಾಗಬೇಕು ಎಂದು ಸಹಕಾರ ಸಂಘದ ಕಾರ್ಯ ವೈಖರಿ ಕುರಿತು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಶೇ. 80%ಕ್ಕಿಂತ ಹೆಚ್ಚು ಅಂಕ ಗಳಿಸಿದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ 5 ಸಾವಿರ ರು.ಗಳ ಪ್ರೋತ್ಸಾಹಧ, ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 10 ಸಾವಿರ ರು.ಗಳ ಪ್ರೋತ್ಸಾಹಧನ, ಮರಣ ಹೊಂದಿರುವ ಸದಸ್ಯರ ಕುಟುಂಬಸ್ತರಿಗೆ 5 ಸಾವಿರ ರು‌‌.ಗಳ ಸಹಾಯಧನ ಮತ್ತು ಮರಣ ಹೊಂದಿರುವ ಹಳೆಯ ಸದಸ್ಯರ ಕುಟುಂಬಸ್ಥರಿಗೆ 10 ಸಾವಿರ ರು.ಗಳ ಸಹಾಯಧನ ಸೇರಿದಂತೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ ನಿರ್ದೇಶಕರಾದ ಎ.ತಿಮ್ಮರಾಯಿಗೌಡ, ಎಂ.ಮಂಜುನಾಥ್, ಕೆ.ಆರ್.ಪುಟ್ಟರಾಜು, ಎನ್.ಎ.ಚಂದ್ರು, ಎನ್.ಮುನಿಯಪ್ಪ, ವೈ.ಕೆ.ಮುರಾರಿರಾಮು, ಎನ್.ಶಿವಕುಮಾರ್, ಎಂ‌.ಪಿ.ಈಶ್ವರಾಚಾರ್, ಎಸ್.ಎನ್.ರಾಮಚಂದ್ರರೆಡ್ಡಿ, ಜಿ.ಎಸ್.ಪುಷ್ಪಲತ, ಅಮರಾವತಿ, ಸಿ.ಇ.ಒ. ಶಶಿಧರ್ ಆರ್. ಸೇರಿದಂತೆ ಸಹಕಾರ ಸಂಘದ ಅಸಂಖ್ಯಾತ ಸದಸ್ಯರಿದ್ದರು.

Leave a Reply

Your email address will not be published. Required fields are marked *