



ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ :
ಯಲಹಂಕ : ಕನ್ನಡ ಭಾಷೆ ಶಿಕ್ಷಣ ಇಲಾಖೆಯಿಂದಲೇ ಹೆಚ್ಚು ಕಡೆಗಣಿಸಲ್ಪಟ್ಟಿದ್ದು, ಪದವಿ ಕಾಲೇಜಿನಲ್ಲಿ ಕನ್ನಡ ಭಾಷೆಯನ್ನು ನಾಲ್ಕು ಸೆಮಿಸ್ಟರ್ ಗಳಿಗೆ ಸೀಮಿತಗೊಳಿಸಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು, ಸಾಹಿತಿ ಎಸ್.ಜಿ.ಸಿದ್ಧರಾಮಯ್ಯ ಕಳವಳ ವ್ಯಕ್ತಪಡಿಸಿದರು.
ಯಲಹಂಕದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ನಾಡಹಬ್ಬ’ ಶೀರ್ಷಿಕೆಯ ಅಡಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು ದ್ವಿಭಾಷಾ ಸೂತ್ರವೇ ನಮಗೆ ಸಾಕು, ಆದರೆ ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರದ ಮೂಲಕ ಹಿಂದಿಯನ್ನು ಹೇರುತ್ತಿದ್ದು, ಪದವಿ ತರಗತಿಗಳ ಹೆಚ್ಚಿನ ವಿದ್ಯಾರ್ಥಿಗಳು ಭಾಷಾ ಪಠ್ಯದ ಆಯ್ಕೆಯ ವಿಷಯ ಬಂದಾಗ ಕನ್ನಡಕ್ಕೆ ಬದಲಾಗಿ ಹಿಂದಿ ಮತ್ತು ಸಂಸ್ಕೃತ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಕನ್ನಡ ಭಾಷೆ ಕಡೆಗಣಿಸಲ್ಪಡುತ್ತಿದೆ. ಎಲ್ಲಿಯವರೆಗೆ ರಾಜ್ಯದ ಶೈಕ್ಷಣಿಕ ಪಠ್ಯಕ್ರಮದಲ್ಲಿ ಕನ್ನಡ ಕಡ್ಡಾಯ ಆಗುವುದಿಲ್ಲವೋ ಅಲ್ಲಿಯವರೆಗೆ ಕನ್ನಡದ ಏಳಿಗೆ, ಬೆಳವಣಿಗೆ ಕಷ್ಡ ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ರಾಜ್ಯ ಸರ್ಕಾರ ಖಾಸಗಿ ಶಾಲೆ ಮತ್ತು ಸರ್ಕಾರಿ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸ ಬೇಕು ಎಂದರು.
ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿ ನಾಡೋಜ ಡಾ.ವೂಡೇ ಪಿ.ಕೃಷ್ಣ ಅವರು ಮಾತನಾಡಿ ‘ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯಲ್ಲಿ ಆರಂಭದಿಂದಲೂ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದ್ದು, ಎಲ್ಲಾ ಶಾಖೆಗಳಲ್ಲಿಯೂ ಕನ್ನಡ ವಾತಾವರಣ ಇರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪದವಿ ವಿದ್ಯಾರ್ಥಿಗಳಿಂದ ಕನ್ನಡದ ಕಂಪು ಬೀರುವ ಆಹಾರ ಮಳಿಗೆಗಳ ಪ್ರದರ್ಶನ, ಕನ್ನಡ ಪುಸ್ತಕಗಳ ಪ್ರದರ್ಶನ, ಹೂವಿನ ಚಿತ್ತಾರದಿಂದ ರಚಿಸಲಾಗಿದ್ದ ಕನ್ನಡ ಅಕ್ಷರಮಾಲೆ, ಬೃಹತ್ ಬೋರ್ಡ್ ಗಳಲ್ಲಿ ವರ್ಣರಂಜಿತವಾಗಿ ಮೂಡಿ ಬಂದಿದ್ದ ಕನ್ನಡ ಅಕ್ಷರಗಳು ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಎನ್.ವೆಂಕಟೇಶ್, ಪ್ರಾಧ್ಯಾಪಕರಾದ ಡಾ.ಎಂ.ಎಲ್.ಅಶೋಕ್, ಸಿದ್ಧಲಿಂಗಸ್ವಾಮಿ ಎಚ್. ಎಂ., ಡಾ.ಗೀತಾ ಡಿ.ಸಿ., ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂದೀಪ್ ಎಸ್., ಕಾಲೇಜಿನ ಕನ್ನಡ ಸಂಘದ ಅಧ್ಯಕ್ಷೆ ಮೇಘಶ್ರೀ ಎಚ್.ಡಿ.ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿಗಳಿದ್ದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
R Hanumanthau kogilu layout
Yelahanka Bangalore Karnataka
9845085793. 8050671579
7349337989
