ಅರಿವು ಕೇಂದ್ರಗಳು ಯುವಕರ ಭವಿಷ್ಯ ರೂಪಿಸುವ ಜ್ಞಾನ‌‌ ಕೇಂದ್ರಗಳಾಗಬೇಕು : ಪ್ರಿಯಾಂಕ್ ಖರ್ಗೆ

ದೊಡ್ಡಜಾಲ‌ ಗ್ರಾಮದಲ್ಲಿ ಅರಿವು ಕೇಂದ್ರ, ಸ್ತ್ರೀ ಶಕ್ತಿ ಭವನ ಉದ್ಘಾಟನೆ :

ಬ್ಯಾಟರಾಯನಪುರ : ಅರಿವು ಕೇಂದ್ರಗಳು ಯುವಕರ ಭವಿಷ್ಯ ರೂಪಿಸುವ ಜ್ಞಾನ ಕೇಂದ್ರಗಳಾಗಬೇಕು, ಹಾಗಾದಾಗ ನಮ್ಮ ಪರಿಶ್ರಮ ಸಾರ್ಥಕವಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.

ಬ್ಯಾಟರಾಯನಪುರ ಕ್ಷೇತ್ರದ ದೊಡ್ಡ ಜಾಲ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ್ದ
ಅರಿವು ಕೇಂದ್ರ, ಸ್ತ್ರೀ ಶಕ್ತಿ ಭವನ, ನಮ್ಮ ಮೆಡಿಕಲ್, ನಮ್ಮ ಕ್ಲಿನಿಕ್ ಮತ್ತು ಬಸ್ ತಂಗುದಾಣ ಮುಂತಾದ ಸೌಲಭ್ಯಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಹಿಂದಿನ‌ ಸರ್ಕಾರದಲ್ಲಿ ಗ್ರಂಥಾಲಯ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದ ಕೇಂದ್ರಗಳನ್ನು ನಮ್ಮ ಸರ್ಕಾರ ‘ಅರಿವು ಕೇಂದ್ರ’ ಎಂಬ ಹೊಸ ಹೆಸರಿನೊಂದಿಗೆ ಹೊಸ ಪರಿಕಲ್ಪನೆ ಮತ್ತು ಆಧುನಿಕ ಶೈಲಿಯಲ್ಲಿ ರೂಪಿಸುತ್ತಿದ್ದು, ಯುವ ಸಮುದಾಯದ ಜ್ಞಾನ ವೃದ್ಧಿಗೆ ಅಗತ್ಯವಿರುವ ಎಲ್ಲಾ ಸೌಕರ್ಯ ಮತ್ತು ಸವಲತ್ತುಗಳನ್ನು ಅರಿವು ಕೇಂದ್ರಗಳಲ್ಲಿ ಕಲ್ಪಿಸಲಾಗುತ್ತಿದೆ.

ರಾಜ್ಯದಲ್ಲಿ 5770 ಅರಿವು ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ರಾಜ್ಯದ 51 ಲಕ್ಷ ಯುವಕರು ಅರಿವು ಕೇಂದ್ರಗಳಲ್ಲಿ ಹೆಸರು ನೋಂದಣಿ ಮಾಡಿಸಿಕೊಂಡಿದ್ದು, ಅರಿವು ಕೇಂದ್ರಗಳ ಸದುಪಯೋಗದ ಮೂಲಕ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿರುವ ಹಲವು ಉದಾಹರಣೆಗಳಿವೆ. ಅರಿವು ಕೇಂದ್ರಗಳಲ್ಲಿ ಡಿಜಿಟಲ್ ಗ್ರಂಥಾಲಯ, ಸ್ಮಾರ್ಟ್ ಬೋರ್ಡ್‌ ಸೇರಿದಂತೆ ಅತ್ಯಾಧುನಿಕ ಸವಲತ್ತುಗಳನ್ನು ನೀಡುವ ಮೂಲಕ ಅರಿವು ಕೇಂದ್ರಗಳನ್ನು ಜ್ಞಾನ ಕೇಂದ್ರಗಳಾಗಿ ರೂಪಿಸಬೇಕೆಂಬುದು ನಮ್ಮ ಧ್ಯೇಯವಾಗಿದೆ. ಅರಿವು ಕೇಂದ್ರಗಳು ಕೇವಲ ಮೇಲ್ನೋಟದ ಕಟ್ಟಡಗಳಾಗದೆ, ಜ್ಞಾನದ ಅಂತಃಸತ್ವ ಕೇಂದ್ರಗಳಾಗಬೇಕು. ಅರಿವು ಕೇಂದ್ರಗಳ ಮೂಲಕ ಬಸವಣ್ಣ, ಅಂಬೇಡ್ಕರ್ ಅವರಂಥ ಮಹನೀಯರ ಪ್ರಗತಿಪರ ಚಿಂತನೆಗೆ ಇಂಬು ನೀಡುವ ಕೆಲಸಗಳಾಗಬೇಕು. ಇಂದು ಲೋಕಾರ್ಪಣೆ ಮಾಡಿರುವ ದೊಡ್ಡಜಾಲ‌ ಅರಿವು ಕೇಂದ್ರದಲ್ಲಿ 8 ಸಾವಿರ ಅಮೂಲ್ಯವಾದ ಪುಸ್ತಕಗಳಿವೆ, ಡಿಜಿಟಲ್ ಗ್ರಂಥಾಲಯದ ಮೂಲಕ ಅಪರಿಮಿತವಾದ ಜ್ಞಾನ ಸಂಪಾದನೆಗೆ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ. ನಮ್ಮ ಸಮಾಜ ಜ್ಞಾನ ಮತ್ತು ಪ್ರಬುದ್ಧ ಸಮಾಜವಾದರೆ ಸಹಜವಾಗಿಯೇ ಪ್ರಗತಿಪರ ಸಮಾಜವಾಗುತ್ತದೆ. ದೊಡ್ಡಜಾಲ‌ ಗ್ರಾಮ ಪಂಚಾಯಿತಿ ರಾಜ್ಯದಲ್ಲೇ ಅತಿಹೆಚ್ಚು ತೆರಿಗೆ ಸಂಗ್ರಹವಾಗುವ ಗ್ರಾಮ ಪಂಚಾಯಿತಿಗಳ ಪಟ್ಟಿಯಲ್ಲಿದ್ದು, ಸಂಗ್ರಹಿತ ತೆರಿಗೆಯನ್ನು ಸಮರ್ಪಕವಾಗಿ ಬಳಸಿಕೊಂಡು ರಾಜ್ಯದಲ್ಲೇ ಮಾದರಿ ಗ್ರಾಮ ಪಂಚಾಯಿತಿಯಾಗಿ ರೂಪಿಸಿರುವುದರ ಹಿಂದೆ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಪ್ರಬಲವಾದ ಇಚ್ಛಾಶಕ್ತಿ ಇದೆ. ಅತ್ಯುತ್ತಮ ಅಭಿವೃದ್ಧಿ ಕಾರ್ಯಗಳ ಮೂಲಕ ರಾಜ್ಯದ ಇತರೆ ಗ್ರಾಮ ಪಂಚಾಯಿತಿಗಳಿಗೆ ಮಾದರಿಯಾಗಿರುವ ದೊಡ್ಡಜಾಲ‌ ಗ್ರಾಮ ಪಂಚಾಯಿತಿಗೆ ವಿಶೇಷ ಅನುದಾನವಾಗಿ 1 ಕೋಟಿ ರು.ನೀಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮ ಉದ್ದೇಶಿಸಿ ಕಂದಾಯ ಸಚಿವ ಕೃಷ್ಣಬೈರೇಗೌಡ ‌ಮಾತನಾಡಿ ‘ಜ್ಞಾನ‌ಕ್ಕೆ ಎಲ್ಲಾ ರೀತಿಯ ಉತ್ತಮ ಅವಕಾಶಗಳ ಬಾಗಿಲು ತೆರೆಯುವ ಶಕ್ತಿಯಿದೆ. ಇಂದು ಲೋಕಾರ್ಪಣೆ ಗೊಳಿಸಿರುವ ಅರಿವು ಕೇಂದ್ರವನ್ನು ಯುವಜನತೆ ಸದುಪಯೋಗ ಮಾಡಿಕೊಳ್ಳುವ ಮೂಲಕ ಬದುಕಿನ ಅವಕಾಶಗಳನ್ನು ಪಡೆಯುವ ಜ್ಞಾನಕೇಂದ್ರವನ್ನಾಗಿ ಮಾಡಿಕೊಳ್ಳಬೇಕು. ಜ್ಞಾನಾರ್ಜನೆಗೆ ಅಗತ್ಯವಿರುವ ಎಲ್ಲಾ ಸೌಕರ್ಯ, ಸವಲತ್ತುಗಳು ಈ ಅರಿವು ಕೇಂದ್ರದಲ್ಲಿದ್ದು, ಯುವ ಜನತೆ ಇದರ ಸದುಪಯೋಗ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ದೊಡ್ಡಜಾಲ‌ ಗ್ರಾ.ಪಂ.ಅಧ್ಯಕ್ಷ ಆರ್.ಬೈರೇಗೌಡ, ಉಪಾಧ್ಯಕ್ಷೆ ಗೌರಮ್ಮ ಕೃಷ್ಣಪ್ಪ, ಜಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಕುಮಾರ್ ಎನ್. ಕೆ., ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತರಾದ ಅರುಂಧತಿ ಚಂದ್ರಶೇಖರ್, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ಎನ್.ನೋಮೇಶ್ ಕುಮಾರ್, ಯಲಹಂಕ ತಾ.ಪಂ. ಇಒ ಎಲ್. ಮಧು, ಪಿಡಿಓ ವೆಂಕಟರಂಗನ್, ಬಾಗಲೂರು ಗ್ರಾ.ಪಂ.ಅಧ್ಯಕ್ಷ ಎ.ಕೆಂಪೇಗೌಡ, ಚಿಕ್ಕಜಾಲ ಗ್ರಾ.ಪಂ.ಅಧ್ಯಕ್ಷ ರವಿಕುಮಾರ್, ಕಾಂಗ್ರೆಸ್ ಮುಖಂಡರಾದ ಸಿಂಗಹಳ್ಳಿ ವೆಂಕಟೇಶ್, ಎಂ.ಜಿ.ರಾಜಕುಮಾರ್, ಜೈಕುಮಾರ್, ಬಿ.ಕೆ.ನಾರಾಯಣಸ್ವಾಮಿ, ಮಂಜುನಾಥ್, ಯುವ ಮುಖಂಡರಾದ ಪ್ರದೀಪ್(ಮುತ್ತು) ಸೇರಿದಂತೆ ಗ್ರಾ.ಪಂ.ಸದಸ್ಯರು ಹಾಗೂ ಗ್ರಾಮಸ್ಥರಿದ್ದರು.

Leave a Reply

Your email address will not be published. Required fields are marked *