









ಯಲಹಂಕ : ಸ್ನೇಹ ಇರುವ ಕಡೆ ಸಂತೋಷ, ನೆಮ್ಮದಿ, ಇರುತ್ತದೆ, ಸ್ನೇಹಕ್ಕೆ ಮನುಷ್ಯನ ಬದುಕಿನಲ್ಲಿ ಅತ್ಯಂತ ಮಹತ್ವಪೂರ್ಣವಾದ ಸ್ಥಾನವಿದೆ ಎಂದು ಹಿರಿಯ ಸಾಹಿತಿ, ನಾಡೋಜ ಡಾ.ಹಂ.ಪ.ನಾಗರಾಜಯ್ಯ ಅಭಿಪ್ರಾಯಪಟ್ಟರು.
ಶೇಷಾದ್ರಿಪುರಂ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಯಲಹಂಕದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ ’27ನೇ ವಾರ್ಷಿಕ ಸ್ನೇಹ-ಸಮ್ಮಿಲನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿರುವ ಎಲ್ಲಾ ಸ್ತರದ ಸಿಬ್ಬಂದಿಗಳನ್ನು ಒಂದೆಡೆ ಸೇರಿಸಿ, ಅವರ ಸೇವೆಯನ್ನು ಸ್ಮರಿಸಿ ಗೌರವಿಸುವ ಸಂಸ್ಕೃತಿ ಅದೆಷ್ಟು ಸಂಸ್ಥೆಗಳಲ್ಲಿದೆಯೋ ತಿಳಿಯದು, ಆದರೆ ಶೇಷಾದ್ರಿಪುರಂ ಸಮೂಹ ಶಿಕ್ಷಣ ಸಂಸ್ಥೆ ಕಳೆದ 27 ವರ್ಷಗಳಿಂದ ಇಂತಹದ್ದೊಂದು ಸಂಸ್ಕಾರ ಯುಕ್ತವಾದ ಕಾರ್ಯಕ್ರಮವನ್ನು ಅವ್ಯಾಹತವಾಗಿ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ ಸಂಗತಿ. ಸಂಸ್ಥೆಯ ಸಿಬ್ಬಂದಿಗಳನ್ನು ಮತ್ತು ಅವರ ಸೇವೆಯನ್ನು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಗೌರವಿಸುವ ಪರಿ ನಿಜಕ್ಕೂ ಪ್ರಶಂಸಾರ್ಹವಾದುದು. ಸ್ನೇಹ ಇರುವೆಡೆ ಪ್ರೀತಿ, ವಿಶ್ವಾಸ, ಸಂತೋಷ, ನೆಮ್ಮದಿಯಂತಹ ಎಲ್ಲಾ ರೀತಿಯ ಒಳ್ಳೆಯ ಅಂಶಗಳು ಇರುತ್ತವೆ. ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಶೈಕ್ಷಣಿಕ ಸೇವೆಯ ಜೊತೆಗೆ ಇಂತಹ ಅನುಪಮ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಸ್ಥೆಯ ಸಿಬ್ಬಂದಿಗಳಲ್ಲಿ ನಿಜವಾದ ಸ್ನೇಹವನ್ನು ಬೆಸೆಯುವ ಸತ್ಕಾರ್ಯವನ್ನು ಮಾಡುತ್ತಿರುವುದು ನಿಜಕ್ಕೂ ಮಾದರಿ ಎನಿಸುತ್ತದೆ ಎಂದರು.
ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿ ನಾಡೋಜ ವೂಡೇ ಪಿ.ಕೃಷ್ಣ ಅವರು ಮಾತನಾಡಿ ‘ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಶೈಕ್ಷಣಿಕ ಸೇವೆಯ ಮೂಲಕ ಸಮಾಜಕ್ಕೆ ಅನುಪಮ ಕೊಡುಗೆಯನ್ನು ನೀಡಿದ್ದು, ವಿಜ್ಞಾನಿಗಳು, ಸಾಹಿತಿಗಳು, ತಂತ್ರಜ್ಞಾನ ಪರಿಣಿತರು, ಲೆಕ್ಕ ಪರಿಶೋಧಕರು ಸೇರಿದಂತೆ ಹಲವು ಪ್ರತಿಷ್ಠಿತ ವ್ಯಕ್ತಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದು, ದೇಶ ವಿದೇಶಗಳಲ್ಲಿ ಸಂಸ್ಥೆಯ ಗೌರವವನ್ನು ಈ ಮಹನೀಯರು ಹೆಚ್ಚಿಸಿದ್ದಾರೆ. ಸಂಸ್ಥೆಯ ವತಿಯಿಂದ ನಡೆಸುತ್ತಿರುವ 27ನೇ ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮ ಇದಾಗಿದ್ದು, ಈ ಕಾರ್ಯಕ್ರಮದ ಮೂಲಕ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುವ ಸಿಬ್ಬಂದಿಗಳನ್ನು ಗೌರವಿಸುವ ಸತ್ ಸಂಪ್ರದಾಯವನ್ನು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ನಡೆಸಿಕೊಂಡು ಬಂದಿದೆ. ಇಂತಹ ಮಹತ್ವಪೂರ್ಣ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ನಾಡೋಜ ಡಾ.ಹಂ.ಪ.ನಾಗರಾಜಯ್ಯ ಅವರು ಪಾಲ್ಗೊಂಡಿರುವುದು ನಮ್ಮ ಸೌಭಾಗ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಅಧ್ಯಕ್ಷರಾದ ಎನ್.ಆರ್.ಪಂಡಿತಾರಾಧ್ಯ ಅವರು ವಹಿಸಿದ್ದು, ಕಾರ್ಯಕ್ರಮದಲ್ಲಿ ಶಿಕ್ಷಣ ದತ್ತಿಯ ಉಪಾಧ್ಯಕ್ಷ ಟಿ.ಎಸ್.ಹೆಂಜಾರಪ್ಪ, ಗೌರವ ಕೋಷಾಧ್ಯಕ್ಷ ಬಿ.ಎಂ.ಪಾರ್ಥಸಾರಥಿ, ಗೌರವ ಸಹ ಕಾರ್ಯದರ್ಶಿ ಎಸ್.ಶೇಷನಾರಾಯಣ, ಸಹಾಯಕ ಕಾರ್ಯದರ್ಶಿ ಎಂ.ಎಸ್.ನಟರಾಜ್ ಸೇರಿದಂತೆ ಶಿಕ್ಷಣ ದತ್ತಿಯ ಟ್ರಸ್ಟಿಗಳು, ಶೇಷಾದ್ರಿಪುರಂ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕ, ಬೋಧಕೇತರ ಸಿಬ್ಬಂದಿಗಳಿದ್ದರು.
