

ಸ್ಥಳೀಯ ನಾಗರೀಕರಿಂದ ಸಭೆ :
ಯಲಹಂಕ : ಯಲಹಂಕ ನಗರ ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಹಿಂದೆ ಕೆಂಪೇಗೌಡ ವಾರ್ಡ್ 1 ಮತ್ತು ಚೌಡೇಶ್ವರಿ ವಾರ್ಡ್ 2 ಎಂದು ಕರೆಯಲ್ಪಡುತ್ತಿದ್ದ ವಾರ್ಡ್ ಗಳ ಹೆಸರು, ವಾರ್ಡ್ ಸಂಖ್ಯೆ ಮತ್ತು ಪ್ರದೇಶವನ್ನು ಇತ್ತೀಚೆಗೆ ಹೊರಡಿಸಿರುವ ಗೆಜೆಟ್ ಪತ್ರದಲ್ಲಿ ಬದಲಾಯಿಸಿ(ರಾಜಾ ಕೆಂಪೇಗೌಡ ವಾರ್ಡ್-1, ಯಲಹಂಕ ಹಳೇ ನಗರ ವಾರ್ಡ್-2)ರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಅಲ್ಲಿನ ಸ್ಥಳೀಯ ನಿವಾಸಿಗಳು ಶುಕ್ರವಾರ ಪಕ್ಷಾತೀತವಾಗಿ ಸಭೆ ನಡೆಸಿ, ಯಾವುದೇ ಕಾರಣಕ್ಕೂ ಈ ಎರಡೂ ವಾರ್ಡ್ ಗಳ ಹೆಸರು, ವಾರ್ಡ್ ಸಂಖ್ಯೆ ಮತ್ತು ಪ್ರದೇಶವನ್ನು ಬದಲಾಯಿಸಬಾರದು ಎಂದು ಒಕ್ಕೊರಲಿನಿಂದ ಸರ್ಕಾರವನ್ನು ಆಗ್ರಹಿಸಿದರು.
ಈ ಹಿಂದೆ ವಾರ್ಡ್ ರಚನೆ ಮಾಡುವಾಗ ನಾಡಪ್ರಭು ಕೆಂಪೇಗೌಡರ ಆಳ್ವಿಕೆಯ ಕಾಲದ ಹಲವು(ಸ್ಮಾರಕ) ಕುರುಹುಗಳನ್ನು ಗಮನಿಸಿಯೇ ಆ ಪ್ರದೇಶಕ್ಕೆ ಕೆಂಪೇಗೌಡ ವಾರ್ಡ್ 1 ಎಂದು ಹೆಸರಿಡಲಾಗಿತ್ತು,
ಹಾಗೆಯೇ ಚೌಡೇಶ್ವರಿ ಅಮ್ಮನವರ ದೈವ ಸನ್ನಿಧಿ ಇಲ್ಲಿರುವುದನ್ನು ಗಮನಿಸಿಯೇ ಈ ವಾರ್ಡ್ ಗೆ ಚೌಡೇಶ್ವರಿ ವಾರ್ಡ್-2 ಎಂದು ಸರಿಯಾದ ಅನ್ವರ್ಥದ ಆಧಾರದ ಮೇಲೆಯೇ ಈ ಎರಡೂ ವಾರ್ಡ್ ಗಳಿಗೆ ಹೆಸರಿಡಲಾಗಿದೆ. ಸರ್ಕಾರ ಇಂತಹ ಗಂಭೀರ ವಿಷಯವನ್ನು ಉಪೇಕ್ಷೆ ಮಾಡಿ, ಕೆಂಪೇಗೌಡ ವಾರ್ಡ್ ಮತ್ತು ಚೌಡೇಶ್ವರಿ ವಾರ್ಡ್ ಗಳ ಹೆಸರು, ವಾರ್ಡ್ ಸಂಖ್ಯೆ ಮತ್ತು ಪ್ರದೇಶವನ್ನು ಬದಲಾಯಿಸಿರುವುದು ಸ್ಥಳೀಯ ನಿವಾಸಿಗಳ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಕೂಡಲೇ ಸರ್ಕಾರ ರಾಜಾ ಕೆಂಪೇಗೌಡ ವಾರ್ಡ್ ಮತ್ತು ಯಲಹಂಕ ಹಳೇನಗರ ವಾರ್ಡ್ ಎಂಬ ಹೊಸ ಹೆಸರುಗಳನ್ನು ಹಿಂಪಡೆದು, ಕೆಂಪೇಗೌಡ ವಾರ್ಡ್-1, ಚೌಡೇಶ್ವರಿ ವಾರ್ಡ್ 2 ಎಂಬ ಹಳೆಯ ಹೆಸರು, ಪ್ರದೇಶ ಮತ್ತು ವಾರ್ಡ್ ಸಂಖ್ಯೆಯ ಯಥಾ ಸ್ಥಿತಿ ಕಾಪಾಡಬೇಕು, ಒಂದು ವೇಳೆ ತಾಂತ್ರಿಕ ದೋಷದಿಂದ ಈ ರೀತಿಯ ಲೋಪವಾಗಿದ್ದರೆ, ಅದನ್ನು ಮುಂದಿನ ಹದಿನೈದು ದಿನಗಳ ಗಡುವಿನ ಒಳಗೆ ಸರಿಪಡಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವಿ.ವಿ.ರಾಮಮೂರ್ತಿ, ಎ.ಎಸ್.ರಾಜ, ಜಿ.ಈಶ್ವರಪ್ಪ, ಮುನಿರಾಜು, ಯುವ ಮುಖಂಡರಾದ ಗಿರೀಶ್, ದಾಮೋದರ್, ಧನಂಜಯ, ಕಾಂಗ್ರೆಸ್ ಮುಖಂಡರಾದ ಅಮರನಾಥ್, ಲಕ್ಷ್ಮೀನಾರಾಯಣ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಸ್ಥಳೀಯ ನಿವಾಸಿಗಳಿದ್ದರು.
