












ಬ್ಯಾಟರಾಯನಪುರ ಕ್ಷೇತ್ರದ 14 ವಾರ್ಡ್ ಗಳಲ್ಲಿ ಬಿಜೆಪಿ ಗೆಲುವು ನಮ್ಮ ಸಂಕಲ್ಪ : ಎಚ್.ಸಿ.ತಮ್ಮೇಶ್ ಗೌಡ
ಕೆಂಪಾಪುರ ವಾರ್ಡ್ ನಲ್ಲಿ ಬೃಹತ್ ಸೇರ್ಪಡೆ ಕಾರ್ಯಕ್ರಮ :
ಬ್ಯಾಟರಾಯನಪುರ : ಕ್ಷೇತ್ರದ ಪ್ರತಿ ಬೂತ್ ಮಟ್ಡದಲ್ಲಿ ಬಿಜೆಪಿ ಬಲವರ್ಧನೆ, 14 ವಾರ್ಡ್ ಗಳಲ್ಲಿ ಗೆಲುವು ನಮ್ಮ ಸಂಕಲ್ಪವಾಗಿದ್ದು ಈ ಸಂಕಲ್ಪವನ್ನು ಸಾಕಾರಗೊ ಳಿಸಲು ಪ್ರತಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಶ್ರದ್ಧೆಯಿಂದ ಶ್ರಮಿಸಬೇಕು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಸಿ.ತಮ್ಮೇಶ್ ಗೌಡ ಕರೆ ನೀಡಿದರು.
ಬ್ಯಾಟರಾಯನಪುರ ಕ್ಷೇತ್ರದ ಕೆಂಪಾಪುರ ವಾರ್ಡ್ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ಶುಕ್ರವಾರ ‘ವಿಜಯ ಸಂಕಲ್ಪ’ ಶೀರ್ಷಿಕೆಯ ಅಡಿಯಲ್ಲಿ ಆಯೋಜಿಸಿದ್ದ ಪಕ್ಷದ ಪ್ರಮುಖರ ಸಭೆ ಮತ್ತು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಪ್ರತಿ ಬೂತ್ ಗೆದ್ದರೆ ಇಡೀ ದೇಶವನ್ನೇ ಗೆಲ್ಲಬಹುದು ಎಂಬ ನರೇಂದ್ರ ಮೋದಿಯವರ ನುಡಿಯನ್ನು ಬಿಜೆಪಿ ಪಕ್ಷದ ಪ್ರತಿ ಕಾರ್ಯಕರ್ತರು, ಮುಖಂಡರು ಪಾಲಿಸಿದ್ದೇ ಆದಲ್ಲಿ ಮುಂಬರುವ ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬ್ಯಾಟರಾಯನಪುರ ಕ್ಷೇತ್ರದ ಎಲ್ಲಾ 14 ವಾರ್ಡ್ ಗಳನ್ನು ಸುಲಭವಾಗಿ ಗೆಲ್ಲಬಹುದು.
ರಾಜ್ಯ ಸರ್ಕಾರದ ಜನವಿರೋಧಿ ಆಡಳಿತ, ಅಭಿವೃದ್ಧಿ ಶೂನ್ಯ ಕಾರ್ಯವೈಖರಿಗೆ ಜನತೆ ಬೇಸತ್ತಿದ್ದು ಎಷ್ಟು ಬೇಗ ಈ ಸರ್ಕಾರ ತೊಲಗುತ್ತದೆಯೋ ಎಂದು ಹಿಡಿಶಾಪ ಹಾಕುತ್ತಿದ್ದಾರೆ. ರಸ್ತೆ ಗುಂಡಿ ಮುಚ್ಚಲಾಗದ ಸರ್ಕಾರದಿಂದ ಯಾವ ಅಭಿವೃದ್ಧಿಯನ್ನು ಸಹ ನಿರೀಕ್ಷಿಸ ಲಾಗದು. ಬಿಬಿಎಂಪಿ ಚುನಾವಣೆ ಘೋಷಣೆಯ ಈ ಮಹತ್ವದ ವೇಳೆಯಲ್ಲಿ ಬಿಜೆಪಿ ಕಾರ್ಯಕರ್ತರು ಸರ್ಕಾರದ ವೈಫಲ್ಯತೆ, ದುರಾಡಳಿತದಂತಹ ನ್ಯೂನ್ಯತೆಗಳನ್ನು ನಿಮ್ಮ ನಿಮ್ಮ ಬೂತ್ ನ ಪ್ರತಿ ಮತದಾರರಿಗೆ ತಿಳಿಸುವ ಮೂಲಕ ಅರಿವು ಮೂಡಿಸಬೇಕು.
ಬ್ಯಾಟರಾಯನಪುರ ಕ್ಷೇತ್ರದ ಎಲ್ಲಾ ಹದಿನಾಲ್ಕು ವಾರ್ಡ್ ಗಳಲ್ಲೂ ಬಿಜೆಪಿ ಪಕ್ಷಕ್ಕೆ ಸುಭದ್ರವಾದ ನೆಲೆಯಿದೆ, ಕಾರ್ಯಕರ್ತರು ಅದನ್ನು ಇನ್ನೂ ಹೆಚ್ಚು ಭದ್ರಪಡಿಸುವ ಕಾರ್ಯವನ್ನು ಕಾಳಜಿಯಿಂದ ಮಾಡಿದರೆ ಪ್ರತಿ ವಾರ್ಡ್ ನಲ್ಲೂ ಬಿಜೆಪಿ ಗೆಲುವು ಶತಃಸಿದ್ಧ ಈ ದಿಸೆಯಲ್ಲಿ ಕಾರ್ಯಕರ್ತರು ಕಾರ್ಯಪ್ರವೃತ್ತ ರಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬ್ಯಾಟರಾಯನಪುರ ಕ್ಷೇತ್ರದ ಕೆಂಪಾಪುರ ವಾರ್ಡ್ ನ ಪ್ರಮುಖ ಜೆಡಿಎಸ್ ಮುಖಂಡ, ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿದ್ದ ವಿಲ್ಸನ್ ರೆಡ್ಡಿ, ಮೈಕೆಲ್, ಪರಮೇಶ್ವರಪ್ಪ, ಬಾಹೇಂದ್ರ, ಇಸ್ಮಾಯಿಲ್ ಕುಮಾರ್ ಹಾಗೂ ಬೆಂಬಲಿಗರು ತಮ್ಮೇಶ್ ಗೌಡರ ಜನಸ್ಪಂದನೆ ಹಾಗೂ ನರೇಂದ್ರ ಮೋದಿಯವರು ದೇಶವನ್ನು ಮುನ್ನಡೆಸು ತ್ತಿರುವ ರೀತಿಯನ್ನು ಮೆಚ್ಚಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದರು.
ಇದೇ ಸಂದರ್ಭದಲ್ಲಿ ಬ್ಯಾಟರಾಯನಪುರ ನಗರ ಮಂಡಲ ಬಿಜೆಪಿ ಅಧ್ಯಕ್ಷ ಕೃಷ್ಣಮೂರ್ತಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಹನುಮಂತಗೌಡ, ನಗರ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಲೋಹಿತ್ ಗೌಡ, ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ. ಅಜಿತ್ ಸುತಾರ್, ಪ್ರಧಾನ ಕಾರ್ಯದರ್ಶಿ ಲುಕಾಸ್, ಬ್ಯಾಟರಾಯನಪುರ ವಿ.ಎಸ್.ಎಸ್.ಎನ್.ಅಧ್ಯಕ್ಷ ಸುರೇಶ್, ಬಿಜೆಪಿ ಮುಖಂಡರಾದ ಮುನಿಸ್ವಾಮಿಗೌಡ (ಆನಂದ್ ಮಾಸ್ಟರ್) ಸೇರಿದಂತೆ ಇನ್ನಿತರರಿದ್ದರು.
