ವಾರ್ಡ್ ಹೆಸರು ಬದಲಾವಣೆ ವೆಂಕಟಾಲ ನಾಗರೀಕರಿಂದ ಪ್ರತಿಭಟನೆ :

ಯಲಹಂಕ : ಯಲಹಂಕ ಕ್ಷೇತ್ರದ ವೆಂಕಟಾಲ, ಮಾರುತಿನಗರ ಪ್ರದೇಶಕ್ಕೆ ಏರೋಸ್ಪೇಸ್ ವಾರ್ಡ್ ಎಂಬ ಸಂಬಂಧವಿಲ್ಲದ ಹೆಸರಿಟ್ಟಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಮಾಜಿ ಬಿಬಿಎಂಪಿ ಸದಸ್ಯರಾದ ಕೆಂಪೇಗೌಡ ಅವರ ನೇತೃತ್ವದಲ್ಲಿ ಸ್ಥಳೀಯ ನಾಗರೀಕರಿ ವೆಂಕಟಾಲ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ಬಿಬಿಎಂಪಿ ಮಾಜಿ ಸದಸ್ಯ ಕೆಂಪೇಗೌಡ ಅವರು ಮಾತನಾಡಿ ‘ನಾಡಿನೆಲ್ಲೆಡೆ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವ ಈ ಶುಭ ವೇಳೆಯಲ್ಲಿ ಸರ್ಕಾರ ವೆಂಕಟಾಲ, ಮಾರುತಿನಗರ ಎಂಬ ಅಚ್ಚ ಕನ್ನಡದಲ್ಲಿದ್ದ ನಮ್ಮ ವಾರ್ಡ್ ನ ಹೆಸರನ್ನು ಏರೋಸ್ಪೇಸ್ ವಾರ್ಡ್ ಎಂಬ ಇಂಗ್ಲಿಷ್ ಹರಸರಿಟ್ಟಿರು ವುದು ಆಸಮಧಾನ ಉಂಟು ಮಾಡಿದೆ. ಈ ಹಿಂದೆ ಇದೇ ಪ್ರದೇಶಕ್ಕೆ ಆಕಾಶ್ ವಾರ್ಡ್ ಎಂದು ಪ್ರಬಲ ರಾಜಕಾರಣಿಯೊಬ್ಬರ ಮಗನ ಹೆಸರಿಟ್ಟಿದ್ದರು. ಅದನ್ನು ವಿರೋಧಿಸಿ ನಾವು ಪ್ರತಿಭಟನೆ ಮಾಡಿ ವೆಂಕಟಾಲ ಅಥವಾ ಮಾರುತಿನಗರ ವಾರ್ಡ್ ಎಂಬ ಹೆಸರಿಡುವಂತೆ ಒತ್ತಾಯಿಸಿದ್ದೆವು. ಶಾಸಕ ಎಸ್ ಆರ್ ವಿಶ್ವನಾಥ್ ಅವರಿಗೆ ಮನವಿಪತ್ರದ ಮೂಲಕ ವಾರ್ಡ್ ಹೆಸರು ಬದಲಿಸಲು ಕೋರಿಕೊಂಡಿದ್ದೆವು. ಶಾಸಕರೂ ಸಹ ನಮ್ಮ ಮನವಿಯನ್ನು ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಚಿವರಿಗೆ ತಲುಪಿಸುವ ಮೂಲಕ ಸ್ಪಂದಿಸಿದ್ದರು. ಆದರೆ ಇದೀಗ ಬದಲಾದ ವಾರ್ಡ್ ಗಳ ಹೆಸರಿನ‌ ಪಟ್ಟಿ ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಮತ್ತದೇ ಎಡವಟ್ಡು ಪುನರಾವರ್ತನೆಯಾಗಿದ್ದು, ಆಕಾಶ್ ವಾರ್ಡ್ ಎಂಬ ಹೆಸರು ಬದಲಿಸಿ ಏರೋಸ್ಪೇಸ್ ವಾರ್ಡ್ ಎಂಬ ಹೆಸರಿಟ್ಟಿದ್ದಾರೆ. ಏರೋಸ್ಪೇಸ್ ಹೆಸರಿಗೂ ನಮ್ಮ ಪ್ರದೇಶಕ್ಕೂ ಯಾವುದೇ ಸಂಬಂಧವೇ ಇಲ್ಲ. ಯಾರೋ ರಿಯಲ್ ಎಸ್ಟೇಟ್ ಮಾಫಿಯಾಗಳನ್ನು ಮೆಚ್ಚಿಸಲು ಈ ವಾರ್ಡ್ ಗೆ ಏರೋಸ್ಪೇಸ್ ವಾರ್ಡ್ ಎಂಬ ಹೆಸರಿಟ್ಟಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ವಿವಿಧ ರಾಜಕಾರಣಿಗಳ ಮನೆಯಲ್ಲಿ ಸಹಭೋಜನ ಮಾಡುತ್ತಿದ್ದಾರೆ. ಅದರ ಬಗ್ಗೆ ನಮ್ಮ ಯಾವುದೇ ತಕರಾರು, ಟೀಕೆ-ಟಿಪ್ಪಣಿಗಳಿಲ್ಲ ಆದರೆ ನಮ್ಮ ವಾರ್ಡ್ ಗೆ ವೆಂಕಟಾಲ, ಮಾರುತಿನಗರ ಅಥವಾ ವಾಯುಪುತ್ರ ವಾರ್ಡ್ ಎಂದು ಹೆಸರಿಡುವ ಮೂಲಕ ನಮಗೂ ಸಾವಧಾನದಿಂದ ಸಹಭೋಜನ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ಉದ್ದೇಶಿಸಿ ಹಿರಿಯ ಬಿಜೆಪಿ ಮುಖಂಡ ವಿ.ಎಂ.ಚಂದ್ರಯ್ಯ ಮಾತನಾಡಿ ‘ನಮ್ಮ ವಾರ್ಡ್ ಗೆ ಅಸಂಬದ್ಧವಾಗಿ ಏರೋಸ್ಪೇಸ್ ವಾರ್ಡ್ ಎಂದು ಹೆಸರಿಡುವ‌ ಮೂಲಕ ನಮ್ಮ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ಮಾಡಲಾಗಿದೆ. ಈ ಹಿಂದೆಯೂ ಸಹ ವೆಂಕಟಾಲ, ಮಾರುತಿನಗರ ಪ್ರದೇಶಕ್ಕೆ ಆಕಾಶ್ ವಾರ್ಡ್ ಎಂಬ ಅಸಂಬದ್ಧವಾದ ಹೆಸರಿಟ್ಟು ನಮ್ಮ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗಿತ್ತು, ಇದನ್ನು ವಿರೋಧಿಸಿ ವೆಂಕಟಾಲ ಅಥವಾ ಮಾರುತಿನಗರ ವಾರ್ಡ್ ಎಂಬ ಹೆಸರಿಡಲು ಒತ್ತಾಯಿಸಿದ್ದೆವು, ಶಾಸಕ ಎಸ್ ಆರ್ ವಿಶ್ವನಾಥ್ ಅವರಿಗೂ ಮನವಿಯ ಮೂಲಕ ಹೆಸರು ಬದಲಾಯಿಸಲು ಕೋರಿಕೊಂಡಿದ್ದೆವೆ, ನಮ್ಮ ಕೋರಿಕೆಗೆ ಸ್ಪಂದಿಸಿದ ಶಾಸಕರು, ವಾರ್ಡ್ ಹೆಸರು ಬದಲಾಯಿಸಲು ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಪ್ರಾಮಾಣಿಕವಾಗಿ ಶ್ರಮಿಸಿದ್ದರು. ಆದರೆ ಇದೀಗ ಸರ್ಕಾರ ಮತ್ತದೇ ಅಸಂಬದ್ಧತೆಯನ್ನು ಪುನರಾವರ್ತನೆಗೊಳಿಸಿದ್ದು, ಏರೋಸ್ಪೇಸ್ ವಾರ್ಡ್ ಎಂಬ ಸಂಬಂಧವಿಲ್ಲದ ಇಂಗ್ಲಿಷ್ ಹೆಸರಿಟ್ಟಿದ್ದಾರೆ. ಇದನ್ನು ಗಮನಿಸಿದರೆ ನಾವು ಇಂಗ್ಲೆಂಡ್ ನಲ್ಲಿದ್ದೇವೆಯೋ ಅಥವಾ ಕರ್ನಾಟಕದಲ್ಲಿದ್ದೇವೆಯೋ ಎಂಬ ಅನುಮಾನ ಮೂಡುತ್ತಿದೆ. ಸರ್ಕಾರ ಕೂಡಲೇ ಏರೋಸ್ಪೇಸ್ ವಾರ್ಡ್ ಎಂಬ ಹೆಸರನ್ನು ಹಿಂಪಡೆದು ಸ್ಥಳೀಯ ಪ್ರದೇಶವನ್ನು ಪ್ರತಿನಿಧಿಸುವ ವೆಂಕಟಾಲ, ಮಾರುತಿನಗರ ಅಥವಾ ವಾಯುಪುತ್ರ ವಾರ್ಡ್ ಎಂಬ ಹೆಸರಿಡಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದರ ಜೊತೆಗೆ ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ಇದಕ್ಕೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಬಿಬಿಎಂಪಿ ಮಾಜಿ ಸದಸ್ಯೆ ಚಂದ್ರಮ್ಮ ಕೆಂಪೇಗೌಡ, ಬಿಜೆಪಿ ಮುಖಂಡರಾದ ರಾಜಣ್ಣ, ಎಚ್.ಎಸ್.ಕಿರಣ್, ರಘು, ಸತೀಶ್, ಸಚಿನ್, ಮಂಜುನಾಥ್, ದೇವರಾಜ್, ಮಹಿಳಾ ಮುಖಂಡರಾದ ಪ್ರಭ, ಶೋಭ, ಕಲಾವತಿ, ಸುಗುಣ, ಶ್ಯಾಮಲ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರಿದ್ದರು.

Leave a Reply

Your email address will not be published. Required fields are marked *