
ಬಸ್ 2.0 ಬಿಡುಗಡೆ ಮಾಡಿದ ಕ್ಲಿಯರ್ ಟ್ರಿಪ್: 6,000ಕ್ಕೂ ಹೆಚ್ಚು ನಗರಗಳ 6.5 ಲಕ್ಷ ಮಾರ್ಗಗಳಿಗೆ ಸಂಪರ್ಕ, ಮಲ್ಟಿ- ಮೋಡಲ್ ಪ್ಲಾಟ್ ಫಾರ್ಮ್ ಮತ್ತಷ್ಟು ಬಲವರ್ಧನೆ
ಜೆನ್ ಜೀ ಪೀಳಿಗೆಯಲ್ಲಿ ಬಸ್ ಪ್ರಯಾಣದ ಕ್ರೇಜ್ ಹೆಚ್ಚುತ್ತಿರುವ ಬೆನ್ನಲ್ಲೇ, ಭಾರತದ ಮುಂದಿನ ಪೀಳಿಗೆಯ ಪ್ರಯಾಣಿಕರಿಗಾಗಿ ಸಂಪೂರ್ಣ ಸಂಯೋಜಿತ ಪ್ಲಾಟ್ ಫಾರ್ಮ್ ಪೂರ್ಣಗೊಳಿಸಿದ ಕ್ಲಿಯರ್‌ಟ್ರಿಪ್‌ನ ಬಸ್ 2.0
ರಾಷ್ಟ್ರೀಯ, ಆಗಸ್ಟ್ 4, 2026: ಫ್ಲಿಪ್ ಕಾರ್ಟ್ ನ ಅಂಗಸಂಸ್ಥೆಯಾದ ಕ್ಲಿಯರ್ ಟ್ರಿಪ್ ಇಂದು ಬಸ್ 2.0 ಅನ್ನು ಬಿಡುಗಡೆಗೊಳಿಸಿದ್ದು, ವಿಮಾನ ಹಾಗೂ ರೈಲು ಸಂಪರ್ಕವಿಲ್ಲದ ದೂರದ ಪ್ರದೇಶಗಳು ಸೇರಿದಂತೆ 6,000ಕ್ಕೂ ಹೆಚ್ಚು ನಗರಗಳ 6.5 ಲಕ್ಷಕ್ಕೂ ಅಧಿಕ ಮಾರ್ಗಗಳಿಗೆ ಪ್ರಯಾಣಿಕರನ್ನು ಜೋಡಿಸುವ ರಸ್ತೆ ಪ್ರಯಾಣದ ವಿಸ್ತೃತ ಸೇವೆಯನ್ನು ಆರಂಭಿಸಿದೆ. ಗಾಢವಾದ ನೆಟ್ ವರ್ಕ್ ಸಂಪರ್ಕ, ಸುಲಭ ಬುಕಿಂಗ್ ಪ್ರಕ್ರಿಯೆ ಮತ್ತು ದೇಶದ ಅತಿ ದೊಡ್ಡ ರಸ್ತೆ ಪ್ರಯಾಣ ಸೇವೆಯ ಲಭ್ಯತೆಯೊಂದಿಗೆ, ಬಸ್ 2.0 ಪ್ರಯಾಣಿಕರಿಗೆ ವಿಮಾನ, ರೈಲು ಮತ್ತು ಹೋಟೆಲ್ ಬುಕಿಂಗ್ ಗಳ ಜೊತೆಗೆ ಒಂದೇ ಪ್ಲಾಟ್ ಫಾರ್ಮ್ ನಲ್ಲಿ ಸುಲಭವಾಗಿ ಬಸ್ ಟಿಕೆಟ್ ಗಳನ್ನು ಕಾಯ್ದಿರಿಸಲು ಅವಕಾಶ ಕಲ್ಪಿಸುತ್ತದೆ.
ಈ ವಿಭಾಗವು ಮುಖ್ಯವಾಗಿ ಜೆನ್ ಜೀ ಯುವ ಪ್ರಯಾಣಿಕರಲ್ಲಿ ಅತ್ಯಂತ ಜನಪ್ರಿಯ ಸೇವೆಯಾಗಿ ಹೊರಹೊಮ್ಮಿದೆ. ಪ್ರಸ್ತುತ ಕ್ಲಿಯರ್ ಟ್ರಿಪ್ ನಲ್ಲಿ ಶೇ. 55ಕ್ಕೂ ಹೆಚ್ಚು ಬಸ್ ಬುಕಿಂಗ್ ಗಳು ಜೆನ್ ಜೀ ಪ್ರಯಾಣಿಕರಿಂದಲೇ ಆಗುತ್ತಿವೆ. ವಿದ್ಯಾರ್ಥಿಗಳು, ಏಕಾಂಗಿ ಪ್ರಯಾಣಿಕರು (ಸೋಲೊ ಟ್ರಾವೆಲರ್ಸ್) ಮತ್ತು ಉದ್ಯೋಗಕ್ಕೆ ಹೊಸದಾಗಿ ಸೇರಿದ ಯುವಜನರು ಕೈಗೆಟುಕುವ ದರದ ವಾರಾಂತ್ಯದ ಪ್ರವಾಸಗಳು, ಮನೆಗೆ ತೆರಳುವ ಪ್ರಯಾಣ ಹಾಗೂ ತತ್ ಕ್ಷಣದ ಪ್ರವಾಸಗಳಿಗೆ ಬಸ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ರೈಲು ಪ್ರಯಾಣಕ್ಕೆ ವಿಪರೀತ ಬೇಡಿಕೆಯಿರುವ ಸಮಯದಲ್ಲಿ ಇದು ಅತ್ಯಂತ ನಂಬಿಕಸ್ಥ ಪರ್ಯಾಯ ವ್ಯವಸ್ಥೆಯಾಗಿದ್ದು, ರಸ್ತೆ ಪ್ರಯಾಣವನ್ನು ಹಿಂದೆಂದಿಗಿಂತಲೂ ಹೆಚ್ಚು ಸುಲಭಗೊಳಿಸಿದೆ.
ಕ್ಲಿಯರ್ ಟ್ರಿಪ್ ಪ್ರಮುಖ ಖಾಸಗಿ ಬಸ್ ನಿರ್ವಾಹಕರೊಂದಿಗೆ ರಾಜ್ಯ ಸಾರಿಗೆ ಸಂಸ್ಥೆಗಳನ್ನು ಒಂದೇ ಸೂರಿನಡಿ ತಂದಿದ್ದು, ನಗರಗಳ ನಡುವಿನ ಮತ್ತು ಪ್ರಾದೇಶಿಕ ಮಾರ್ಗಗಳಲ್ಲಿ ಪ್ರಯಾಣಿಕರಿಗೆ ವ್ಯಾಪಕ ಆಯ್ಕೆಗಳನ್ನು ಒದಗಿಸುತ್ತದೆ. ದೇಶದ ಶೇಕಡಾ 95 ರಷ್ಟು ಖಾಸಗಿ ಬಸ್ ಸೇವೆಯ ಲಭ್ಯತೆ ಮತ್ತು ಸರ್ಕಾರಿ ಸಾರಿಗೆ ಸೇವೆಗಳ ವಿಸ್ತರಿತ ನೆಟ್ ವರ್ಕ್ ನೊಂದಿಗೆ, ಬಸ್ 2.0 ಸಾಂಪ್ರದಾಯಿಕ ಬಸ್ ಸ್ಟ್ಯಾಂಡ್ ಗಳಲ್ಲಿ ಸಿಗುವಷ್ಟೇ ವೈವಿಧ್ಯಮಯ ಆಯ್ಕೆಗಳನ್ನು ಈಗ ನೇರವಾಗಿ ಮೊಬೈಲ್ ಫೋನ್ ನಲ್ಲೇ ಬೆರಳ ತುದಿಯಲ್ಲಿ ಲಭ್ಯಗೊಳಿಸಿದೆ.
ಈ ನೂತನ ಸೇವೆಯ ಚಾಲನೆಯ ಕುರಿತು ಮಾತನಾಡಿದ ಕ್ಲಿಯರ್ ಟ್ರಿಪ್ ನ ಚೀಫ್ ಬಿಸಿನೆಸ್ ಆಫೀಸರ್ (ಏರ್) ಗೌರವ್ ಪಟ್ವಾರಿ ಅವರು, “ಭಾರತದ ಮೂಲೆ ಮೂಲೆಗಳನ್ನು ಜೋಡಿಸುವಲ್ಲಿ ಬಸ್ ಸಾರಿಗೆಯು ಇತರ ಯಾವುದೇ ಸಾರಿಗೆ ಮಾಧ್ಯಮಕ್ಕಿಂತ ಮುಂದಿದೆ. ಅನೇಕ ಯುವ ಪ್ರಯಾಣಿಕರಿಗೆ ಬಸ್ ಟಿಕೆಟ್ ಬುಕಿಂಗ್ ಮಾಡುವುದೇ ಅವರ ಸ್ವತಂತ್ರ ಪ್ರಯಾಣದ ಮೊದಲ ಅನುಭವವಾಗಿರುತ್ತದೆ. ಈ ಯುವ ಪ್ರಯಾಣಿಕರನ್ನು ಮನಸ್ಸಿನಲ್ಲಿಟ್ಟುಕೊಂಡೇ ಬಸ್ 2.0 ಅನ್ನು ವಿನ್ಯಾಸಗೊಳಿಸಲಾಗಿದ್ದು, ಇದು ಅನುಕೂಲಕರ ವ್ಯವಸ್ಥೆ, ವಿಸ್ತೃತ ನೆಟ್ ವರ್ಕ್ ಮತ್ತು ಅಗತ್ಯವಿದ್ದಾಗ ಬಯಸಿದ ಮಾರ್ಗದಲ್ಲಿ ಪ್ರಯಾಣ ಲಭ್ಯವಾಗುವ ಭರವಸೆಯನ್ನು ನೀಡುತ್ತದೆ” ಎಂದು ಹೇಳಿದರು.
ಅವರು ಮುಂದುವರಿದು ಮಾತನಾಡಿ, “ಈ ಯೋಜನೆಯ ಬಿಡುಗಡೆಯೊಂದಿಗೆ, ಕ್ಲಿಯರ್ ಟ್ರಿಪ್ ಅನ್ನು ಸಮಗ್ರ ಮಲ್ಟಿ-ಮೋಡಲ್ (ಬಹುಮಾದರಿ) ಪ್ರಯಾಣದ ವೇದಿಕೆಯನ್ನಾಗಿ ಮಾಡುವ ನಮ್ಮ ದೂರದೃಷ್ಟಿಯತ್ತ ನಾವು ಇನ್ನೊಂದು ಹೆಜ್ಜೆ ಹತ್ತಿರವಾಗಿದ್ದೇವೆ” ಎಂದರು.
ಬಸ್ 2.0, ರೈಲು ಬುಕಿಂಗ್ ವಿಸ್ತರಣೆ ಮತ್ತು ಅಂತರರಾಷ್ಟ್ರೀಯ ಹೋಟೆಲ್ ಕೊಡುಗೆಗಳನ್ನು ಹೆಚ್ಚಿಸಿದ ನಂತರ, ಭಾರತೀಯರ ಪ್ರತಿಯೊಂದು ಪ್ರಯಾಣದ ಅಗತ್ಯಕ್ಕೂ ಏಕೈಕ ಪರಿಹಾರವಾಗುವತ್ತ ಕ್ಲಿಯರ್ ಟ್ರಿಪ್ ನ ಮತ್ತೊಂದು ಪ್ರಮುಖ ಮೈಲಿಗಲ್ಲಾಗಿದೆ. ಈಗ ವಿಮಾನ, ಹೋಟೆಲ್, ರೈಲು, ಬಸ್ ಮತ್ತು ರಜಾದಿನಗಳ ಪ್ರವಾಸ ಪ್ಯಾಕೇಜ್ ಗಳು ಒಂದೇ ಪ್ಲಾಟ್ ಫಾರ್ಮ್ ನಲ್ಲಿ ಲಭ್ಯವಿದ್ದು, ಪ್ರಯಾಣಿಕರ ಮುಂದಿನ ಪ್ರಯಾಣದ ಯೋಜನೆಗಳನ್ನು ಕ್ಲಿಯರ್ ಟ್ರಿಪ್ ಇನ್ನಷ್ಟು ಸರಳಗೊಳಿಸುತ್ತಿದೆ.
