















ಯಲಹಂಕ ಕೋಗಿಲು ವಾರ್ಡ್ ನಲ್ಲಿ ಬೃಹತ್ ಸೇರ್ಪಡೆ ಕಾರ್ಯಕ್ರಮ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಪ್ರತಿ ಗ್ರಾಮ, ಬಡಾವಣೆ, ಪ್ರತಿ ಬೂತ್ ಮಟ್ಟದಲ್ಲಿ ಬಿಜೆಪಿ ಪಕ್ಷದ ಸದೃಢ ಬಲವರ್ಧನೆ ನಮ್ಮ ಧ್ಯೇಯ ವಾಗಿದ್ದು, ಮುಂಬರುವ ಜಿಬಿಎ ಚುನಾವಣೆಯಲ್ಲಿ ಬ್ಯಾಟರಾಯನಪುರ ಕ್ಷೇತ್ರದ 14 ವಾರ್ಡ್ ಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಸಿ.ತಮ್ಮೇಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು
ಬ್ಯಾಟರಾಯನಪುರ ಕ್ಷೇತ್ರದ ಕೋಗಿಲು ವಾರ್ಡ್ ವ್ಯಾಪ್ತಿಯಯಲ್ಲಿ ಭಾನುವಾರ ‘ವಿಜಯ ಸಂಕಲ್ಪ’ ಶೀರ್ಷಿಕೆಯ ಅಡಿಯಲ್ಲಿ ಆಯೋಜಿಸಿದ್ದ ಪಕ್ಷದ ಪ್ರಮುಖರ ಸಭೆ ಮತ್ತು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಪ್ರತಿ ಬೂತ್ ಗೆದ್ದರೆ ಇಡೀ ದೇಶವನ್ನೇ ಗೆಲ್ಲಬಹುದು ಎಂಬ ನರೇಂದ್ರ ಮೋದಿಯವರ ನುಡಿಯನ್ನು ಬಿಜೆಪಿ ಪಕ್ಷದ ಪ್ರತಿ ಕಾರ್ಯಕರ್ತರು, ಮುಖಂಡರು ಪಾಲಿಸಿದ್ದೇ ಆದಲ್ಲಿ ಮುಂಬರುವ ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬ್ಯಾಟರಾಯನಪುರ ಕ್ಷೇತ್ರದ ಎಲ್ಲಾ 14 ವಾರ್ಡ್ ಗಳನ್ನು ಸುಲಭವಾಗಿ ಗೆಲ್ಲಬಹುದು. ಎಲ್ಲಾ 14 ವಾರ್ಡ್ ಗಳನ್ನು ಗೆಲ್ಲಬೇಕು ಎಂಬುದು ನಮ್ಮ ಸಂಕಲ್ಪವಾಗಿದ್ದು ಈ ಸಂಕಲ್ಪವನ್ನು ಸಾಕಾರಗೊಳಿಸಲು ಪ್ರತಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಶ್ರದ್ಧೆಯಿಂದ ಶ್ರಮಿಸಬೇಕು.
ರಾಜ್ಯ ಸರ್ಕಾರದ ಜನವಿರೋಧಿ ಆಡಳಿತ, ಅಭಿವೃದ್ಧಿ ಶೂನ್ಯ ಕಾರ್ಯವೈಖರಿಗೆ ರಾಜ್ಯದ ಜನತೆ ಬೇಸತ್ತಿದ್ದು ಎಷ್ಟು ಬೇಗ ಈ ಸರ್ಕಾರ ತೊಲಗುತ್ತದೆಯೋ ಎಂದು ಹಿಡಿಶಾಪ ಹಾಕುತ್ತಿದ್ದಾರೆ. ರಸ್ತೆ ಗುಂಡಿ ಮುಚ್ಚಲಾಗದ ಸರ್ಕಾರದಿಂದ ಯಾವ ಅಭಿವೃದ್ಧಿಯನ್ನು ಸಹ ನಿರೀಕ್ಷಿಸಲಾಗದು. ಜಿಬಿಎ ಘೋಷಣೆಯ ಈ ಮಹತ್ವದ ವೇಳೆಯಲ್ಲಿ ಪ್ರತಿ ಬಿಜೆಪಿ ಕಾರ್ಯಕರ್ತರು ಸರ್ಕಾರದ ವೈಫಲ್ಯತೆ, ದುರಾಡಳಿತ, ನ್ಯೂನ್ಯತೆಗಳನ್ನು ಕುರಿತು ನಿಮ್ಮ ನಿಮ್ಮ ಬೂತ್ ನ ಪ್ರತಿ ಮತದಾರರಿಗೆ ಅರಿವು ಮೂಡಿಸಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೋಗಿಲು ವಾರ್ಡ್ ನ ಕಟ್ಟಿಗೇನಹಳ್ಳಿ ಮುಖಂಡರಾದ ನಾರಾಯಣ, ರಾಕೇಶ್, ವೀರಣ್ಣ ಹರಿಣಿ ಮತ್ತು ಅವರ ಅಪಾರ ಸಂಖ್ಯೆಯ ಬೆಂಬಲಿಗರು ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷ ಸೇರ್ಪಡೆಯಾದರು.
ಇದೇ ಸಂದರ್ಭದಲ್ಲಿ ಬ್ಯಾಟರಾಯನಪುರ ನಗರ ಮಂಡಲ ಬಿಜೆಪಿ ಅಧ್ಯಕ್ಷ ಕೃಷ್ಣಮೂರ್ತಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಹನುಮಂತಗೌಡ, ಕೋಗಿಲು ವಾರ್ಡ್ ಅಧ್ಯಕ್ಷ ಕೆ.ಎ.ಅನಿಲ್, ಓಬಿಸಿ ಬ್ಯಾಟರಾಯನಪುರ ನಗರ ಮಂಡಲ ಅಧ್ಯಕ್ಷರಾದ ಮುನಿಸ್ವಾಮಿ ಒಡೆಯರ್(ಆನಂದ್ ಮಾಸ್ಟರ್), ಇನ್ನು ಅನೇಕ ಬಿಜೆಪಿ ಮುಖಂಡರಾದ. ಪುಟ್ಟರಾಜು, ಡಾ.ಯೋಗೀಶ್, ಎಸ್.ಸಿ.ಮೋರ್ಚಾ ಅಧ್ಯಕ್ಷ ಮುನಿಕೃಷ್ಣಪ್ಪ, ಮನೋಹರ್ ಜಿ.ಕೆ., ಎನ್.ನರಸಿಂಹಮೂರ್ತಿ ಆನಂದ್ ಆರ್., ಮುರಳಿ(ಚಿಕ್ಕಣ್ಣ), ಗೋವಿಂದರಾಜು, ಆರ್.ಲೀಲಾವತಿ, ಗೀತಾ ಸೇರಿದಂತೆ ಇನ್ನಿತರರಿದ್ದರು.
