














ಸೇವೆ ಮಾಡಿ ಮತ ಕೇಳುತ್ತೇನೆ, ಆಮಿಷ ಒಡ್ಡಿ ಮತ ಕೇಳಲಾರೆ :
ಸತತ ಗೆಲುವಿನ ರಹದಾರಿ ಬಿಚ್ಚಿಟ್ಟ ಎಸ್ ಆರ್ ವಿಶ್ವನಾಥ್ :
ಯಲಹಂಕ : ಕ್ಷೇತ್ರದ ಜನತೆಯ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿ ಜನಮತ ಕೇಳುತ್ತೇನೆಯೇ ಹೊರತು, ಆಮಿಷಗಳನ್ನು ಒಡ್ಡಿ ಮತ ಕೇಳಲಾರೆ, ಕ್ಷೇತ್ರದ ಜನತೆಯನ್ನು ಜಾತಿ, ಧರ್ಮ,ಮತ, ಪಂಥ, ಬಡವ, ಬಲ್ಲಿದ ಇವೆಲ್ಲವುಗಳ ಪರಿಧಿಯಿಂದ ಹೊರಗುಳಿದು ಕುಟುಂಬದ ರೀತಿಯಲ್ಲಿ ಕಾಣುವುದು ನನ್ನ ರಾಜಕೀಯ ಬದುಕಿನಲ್ಲಿ ನಾನು ಕಂಡುಕೊಂಡಿರುವ ರಾಜಮಾರ್ಗ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ತಮ್ಮ ಸತತ ಗೆಲುವಿನ ರಹದಾರಿ ಬಿಚ್ಚಿಟ್ಟರು.
ಯಲಹಂಕ ನಗರ ವ್ಯಾಪ್ತಿಯ ಅಟ್ಟೂರು ಕಾಲೋನಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಸಂಘಟನೆಯ ನಾಮಫಲಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘2008ರಿಂದ ಇಂದಿನವರೆಗೂ ಬಡವರಿಗೆ, ದಲಿತ, ಹಿಂದುಳಿದ ಸಮುದಾಯದ ಜನತೆಗೆ, ಕಾಲನಿಗಳಲ್ಲಿ ನಿರಾಶ್ರಿತರಂತೆ ಬದುಕುತ್ತಿದ್ದ ಕಡು ಬಡವರಿಗೆ ಸೂರು ಕಲ್ಪಿಸುವ ದಿಸೆಯಲ್ಲಿ ಹೆಚ್ಚು ಪರಿಶ್ರಮ ಪಟ್ಟಿದ್ದೇನೆ.
ಯಲಹಂಕದ ಎಲ್.ಬಿ.ಎಸ್. ನಗರ, ಅಂಬೇಡ್ಕರ್ ಕಾಲನಿ, ಜೆ.ಪಿ.ಕಾಲನಿ ಸೇರಿದಂತೆ ಹಿಂದುಳಿದ ಪ್ರದೇಶಗಳಲ್ಲಿ ಸಹಸ್ರಾರು ಮನೆಗಳನ್ನು ಕಟ್ಟಿಸಿಕೊಟ್ಟಿದ್ದೇನೆ, ಇದರ ಪ್ರತಿಫಲವಾಗಿ ಬಡವರು ನನ್ನನ್ನು ಇಷ್ಟಪಡುತ್ತಾರೆ. ಸೇವೆಯೇ ಪರಮಧರ್ಮ ಎಂಬ ಉಕ್ತಿಯನ್ನು ಬದುಕಿನಲ್ಲಿ ಮೈಗೂಡಿಸಿಕೊಂಡು ಬಡವರ ಸೇವೆ ಮಾಡುವ ನಾನು ಚುನಾವಣೆ ಬಂದಾಗ ನನ್ನ ಸೇವೆಗೆ ಮತ ನೀಡಿ ಎಂದು ಕೇಳುತ್ತೇನೆಯೇ ಹೊರತು ಆಮಿಷಗಳನ್ನು ಒಡ್ಡಿ ಮತ ಕೇಳುವುದಿಲ್ಲ, ನನ್ನ ಸೇವೆಯನ್ನು ಆಧರಿಸಿ ಇದುವರೆಗೂ ಯಲಹಂಕ ಕ್ಷೇತ್ರದ ಜನತೆ ನನ್ನನ್ನು ಸತತವಾಗಿ ಗೆಲ್ಲಿಸುತ್ತಿದ್ದಾರೆ. ಬದುಕು ಶಾಶ್ವತವಲ್ಲ ಆದರೆ ಉತ್ತಮ ಕೆಲಸಗಳ ಮೂಲಕ ಜನಮಾನಸದಲ್ಲಿ ನಾವು ಶಾಶ್ವತವಾಗಿ ಉಳಿಯಬಹುದು. ಈ ತತ್ವದ ಅಡಿಯಲ್ಲಿ ರಾಜಕಾರಣದಲ್ಲಿ ನಾನು ಜನಸೇವೆ ಮಾಡಲಿಚ್ಛಸುತ್ತೇನೆ ಎಂದು ಸಾರ್ಥಲ ಬದುಕಿನ ಮೌಲ್ಯಗಳನ್ನು ಮನೋಜ್ಞವಾಗಿ ತಿಳಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಅಶ್ವಥ್ ಅಂತ್ಯಜ ಅವರು ಮಾತನಾಡಿ ‘ಹೋರಾಟದ ಬದುಕಿನಲ್ಲಿ ರಾಜ್ಯವನ್ನು ಸುತ್ತಿದ್ದೇನೆ ಬಹುತೇಕ ಶಾಸಕರನ್ನು ಕಂಡಿದ್ದೇನೆ ಆದರೆ ಜನಸೇವೆ, ಕಾರ್ಯಕ್ಷಮತೆ, ಕೌಶಲ್ಯತೆ, ಅಭಿವೃದ್ಧಿ ಕಾರ್ಯಗಳಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ಅವರನ್ನು ಸರಿಗಟ್ಟಿ ನಿಲ್ಲುವ ಶಾಸಕರು ತೀರಾ ವಿರಳ, ಯಲಹಂಕ ಕ್ಷೇತ್ರದಲ್ಲಿ ವಿಶ್ವನಾಥ್ ಅವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಅವರ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿ ನಿಂತಿವೆ ಎಂದು ವಿಶ್ವನಾಥ್ ಅವರ ಕಾರ್ಯವೈಖರಿ, ಜನಸೇವೆಯ ಪರಿ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ದಲಿತ ಪರ ಹೋರಾಟಗಾರ ದಿ.ಅಟ್ಟೂರು ನಾಗರಾಜ್ ಅವರನ್ನು ಸ್ಮರಿಸಿ ಮೌನಾಚರಣೆ ಮಾಡಿ, ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯರಾದ ಎಂ.ರವಿಕುಮಾರ್ ಗಂಗನಬೀಡು, ಟಿ.ಹನುಮಯ್ಯ ಕೆಂಚನಪುರ, ಅಬ್ಬಿಗೆರೆ ರಾಜಣ್ಣ, ಯಲಹಂಕ ನಗರ ಮಂಡಲ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಮುರಳಿ, ಪ್ರಧಾನ ಕಾರ್ಯದರ್ಶಿ ಅಟ್ಟೂರು ವಿಶ್ವ, ಎಸ್ಸಿ ಮೋರ್ಚಾ ಪದಾಧಿಕಾರಿಗಳಾದ ಸೀತಕೆಂಪನಹಳ್ಳಿ ಚಂದ್ರಶೇಖರ್, ವೆಂಕಟಾಲ ಮುನಿರಾಜು, ಪುಟ್ಟೇನಹಳ್ಳಿ ಮುನಿರಾಜು, ಸುನಿಲ್ ಕುಮಾರ್, ಯಲಹಂಕ ಜಯಣ್ಣ, ಮುನಿಯಪ್ಪ ಸೇರಿದಂತೆ ಇನ್ನಿತರರಿದ್ದರು.
