ಹೆಸರುಘಟ್ಟ ಕೆರೆಗೆ ಜಲಮಂಡಳಿ ಅಧಿಕಾರಿಗಳ ಭೇಟಿ, ಪರಿಶೀಲನೆ :
ಉನ್ನತ ಅಧಿಕಾರಿಗಳಿಗೆ ಕೆರೆಯ ನೈಜ ಸ್ಥಿತಿ ಕುರಿತು ವರದಿ ನೀಡುವ ಭರವಸೆ :
ಯಲಹಂಕ : ಕ್ಷೇತ್ರದ ಹೆಸರಘಟ್ಟ ಕೆರೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ, ಕೆರೆಯ ವಾಸ್ತವಿಕ ಸ್ಥಿತಿಯನ್ನು ಪರಿಶೀಲಿಸಿದರು.
ಹೆಸರಘಟ್ಟ ಕೆರೆಯಲ್ಲಿ ಹೂಳು ಮತ್ತು ಗಿಡಗಂಟೆಗಳು ತುಂಬಿಕೊಂಡಿದ್ದು, ಕೆರೆಯ ಹೂಳೆತ್ತಿಸಿ, ಗೀಡಗಂಟೆ ಗಳನ್ನು ತೆಗೆದು ಸ್ವಚ್ಛ ಮಾಡುವ ಮೂಲಕ ಕೆರೆಯಲ್ಲಿ ಹೆಚ್ಚಿನ ನೀರು ಸಂಗ್ರಹಣೆ ಯಾಗುವಂತೆ ಮಾಡಬೇಕು ಮತ್ತು ಕೆರೆಗೆ ದೊಡ್ಡಬಳ್ಳಾಪುರ ಕೈಗಾರಿಕಾ‌ ಪ್ರದೇಶದ ಕಲುಷಿತ ನೀರು ಬಿಡುತ್ತಿರುವುದನ್ನು ನಿಲ್ಲಿಸಿ, ಕಲುಷಿತ ನೀರು ಬಿಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ‌ ಮತ್ತು ಹಸಿರುಸೇನೆಯ‌ ರಾಜ್ಯ ಕಾರ್ಯದರ್ಶಿ ಬಿ.ಜಿ.ನಂಜುಂಡಪ್ಪ ಕಡತನಮಲೆ ‌ಅವರ ನೇತೃತ್ವದಲ್ಲಿ ಸ್ಥಳೀಯ ರೈತ ಮುಖಂಡರು ಜಲಮಂಡಳಿ ಆಯುಕ್ತರಿಗೆ ನಮವಿ ಪತ್ರ‌ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಹೆಸರಘಟ್ಟ‌ ಕೆರೆಗೆ ಭೇಟಿ ನೀಡಿದ ಜಲಮಂಡಳಿ ಅಧಿಕಾರಿಗಳ ತಂಡ ಕೆರೆ ಆವರಣದಲ್ಲಿ ಕೆಲ ಕಾಲ ಸುತ್ತಾಡಿ ಕೆರೆಯ ವಾಸ್ತವ ಸ್ಥಿತಿಯನ್ನು ‌ಪರಿಶೀಲಿಸಿದರು.
ಈ ವೇಳೆ ಜಲಮಂಡಳಿಯ ಮುಖ್ಯ ಅಭಿಯಂತರ ರಾಜಶೇಖರ್ ಅವರು ಮಾತನಾಡಿ ‘ಹೆಸರಘಟ್ಟ ಕೆರೆಯಲ್ಲಿ ಹೂಳು, ಗಿಡಗಂಟೆಗಳು ತುಂಬಿಕೊಂಡಿರುವ ಬಗ್ಗೆ ಮತ್ತು ಕಲುಷಿತ ನೀರು ಹರಿಯುತ್ತಿರುವ ಬಗ್ಗೆ ಸಾರ್ವಜನಿಕರ ಆಕ್ಷೇಪಣೆಗಳು ಬಂದಿದ್ದವು, ಹೆಚ್ಚಿನ ಮಾಹಿತಿ ಸಂಗ್ರಹಿಸುವ ದಿಸೆಯಲ್ಲಿ ಜಲಮಂಡಳಿ ಅಧಿಕಾರಿಗಳು ಸಹ ಕಾರ್ಯಪ್ರವೃತ್ತರಾಗಿದ್ದರು. ಏತನ್ಮಧ್ಯೆ ಕೆರೆಯ ಸ್ಥಿತಿಯ ಗಂಭೀರತೆ ಕುರಿತು ರೈತ ಮುಖಂಡರು ಜಲಮಂಡಳಿ ಆಯುಕ್ತರಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಇಂದು ಕೆರೆಗೆ ಭೇಟಿ ನೀಡಿ, ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದ್ದು, ಕೆರೆಯ ನೈಜ ಸ್ಥಿತಿ ಕುರಿತು ಮೇಲಾಧಿಕಾರಿಗಳಿಗೆ ವರದಿ ನೀಡುವ ಮೂಲಕ ಅಗತ್ಯಕ್ತಮಕ್ಕೆ ಸೂಚಿಸಲಾಗುವುದು ಎಂದು ತಿಳಿಸಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಿ‌.ಜಿ. ನಂಜುಂಡಪ್ಪ ಕಡತನಮಲೆ ಅವರು ಮಾತನಾಡಿ ‘ಹೆಸರಘಟ್ಟ ಕೆರೆಗೆ ದೊಡ್ಡಬಳ್ಳಾಪುರ ಕೆ.ಐ.ಎ.ಡಿ.ಬಿ., ಭಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಹಾಗೂ ಕೆಲವು ಗ್ರಾಮ ಪಂಚಾಯಿತಿಗಳಿಂದ ತ್ಯಾಜ್ಯ, ಕಲುಷಿತ ಹಾಗೂ ರಾಸಾಯನಿಕ ಮಿಶ್ರಿತ ನೀರು ಹರಿಯುತ್ತಿದ್ದು, ಇದನ್ನು ತಡೆದು ಸಂಬಂಧ ಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿ.ಡಬ್ಲ್ಯೂ.ಎಸ್ ಎಸ್.ಬಿ.)ಆಧೀನದಲ್ಲಿ ಬರುವ ಹೆಸರಘಟ್ಟ ಕೆರೆ ಹಾಗೂ ಅದರ ಮೇಲ್ಭಾಗದಲ್ಲಿರುವ ಕಾಕೋಳು ಕೆರೆಯಲ್ಲಿರುವ ಹೂಳು, ಗಿಡ ಗಂಟೆಗಳನ್ನು ತೆಗೆದು ಹಾಕುವ ಮೂಲಕ ಕೆರೆ ಸ್ವಚ್ಛ ಮಾಡಿ, ಹೆಚ್ಚಿನ ನೀರು ಸಂಗ್ರಹಣೆ ಆಗುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕೆರೆಯಲ್ಲಿ ತುಂಬಿಕೊಂಡಿರುವ ಹೂಳಿನ‌ ಮಣ್ಣು ಹೆಚ್ಚು ಫಲವತ್ತಾಗಿದ್ದು, ಕೃಷಿಕರು ಈ ಮಣ್ಣನ್ನು ತಮ್ಮ ಜಮೀನುಗಳಿಗೆ ಬಳಕೆ ಮಾಡಿ ಕೊಂಡರೆ ಮಣ್ಣಿನ‌ ಫಲವತ್ತತೆ ವೃದ್ಧಿಯಾಗಲಿದೆ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ಜಲಮಂಡಳಿ ಅಪರ ಮುಖ್ಯ ಅಭಿಯಂತರ ಚಲಪತಿ, ಕಾರ್ಯ ನಿರ್ವಾಹಕ ಅಭಿಯಂತರ ಹರ್ಷ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಮೋಹನ್, ರೈತ ಸಂಘದ ರಾಜ್ಯ ಸಂಘಟನಾ‌ ಕಾರ್ಯದರ್ಶಿ ಲೋಕೇಶ್ ಶರ್ಮ‌ ರಾಜಾನುಕುಂಟೆ, ಸ್ಥಳೀಯ ಪ್ರಗತಿಪರ ರೈತರಾದ ಮುನಿರಾಜು, ಯುವ ರೈತ ಮುಖಂಡ ಸಂತೋಷ್ ಹನಿಯೂರು ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *