ಅಂಬೇಡ್ಕರ್, ಬಸವಲಿಂಗಪ್ಪ ಅವರ ತತ್ವಾದರ್ಶ ಪಾಲನೆಯಿಂದ ತಳ ಸಮುದಾಯದ ಉನ್ನತಿ ಸಾಧ್ಯ : ರವಿಕುಮಾರ್
ಬ್ಯಾಟರಾಯನಪುರ : ಡಾ.ಬಿ.ಆರ್.ಅಂಬೇಡ್ಕರ್, ಮಾಜಿ‌ ಸಚಿವ ದಿ.ಬಸವಲಿಂಗಪ್ಪ ರವರ ತತ್ವಾದರ್ಶ ಪಾಲನೆಯಿಂದ ಮಾತ್ರ ತಳಸಮುದಾಯದ ಉನ್ನತಿ, ಸಾಮಾಜಿಕ‌ ಸಮಾನತೆ ಸಾಧ್ಯ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಜಕ್ಕೂರು ರವಿಕುಮಾರ್ ಅಭಿಪ್ರಾಯಪಟ್ಟರು.
ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಬಡತನದ ಹಿನ್ನೆಲೆಯಿಂದ ಬಂದಿರುವ ನನಗೆ ಬಡವರ, ಆರ್ಥಿಕವಾಗಿ ಹಿಂದುಳಿದ ಮತ್ತು ತಳಸಮುದಾಯದ ಜನರ ನಾಡಿ ಮಿಡಿತ, ಅವರ ಕಷ್ಟಕಾರ್ಪಣ್ಯಗಳ ಬಗ್ಗೆ ಚೆನ್ನಾಗಿ ತಿಳಿದಿದೆ. ಬಾಲ್ಯದಿಂದಲೂ ಡಾ‌.ಬಿ.ಆರ್.ಅಂಬೇಡ್ಕರ್ ಮತ್ತು ದಿ.ಬಸವಲಿಂಗಪ್ಪ ಅವರ ಬದುಕಿನ ಆದರ್ಶಗಳನ್ನು ಮೈಗೂಡಿಸಿ ಕೊಂಡಿದ್ದರಿಂದ ಶಿಕ್ಷಣದ ಜೊತೆಗೆ ಸಮಾಜದಲ್ಲಿ ಉತ್ತಮ ಬದುಕು‌ ರೂಪಿಸಿಕೊಳ್ಳಲು‌‌ ಸಾಧ್ಯವಾಯಿತು. ಬಾಲ್ಯದಿಂದಲೂ ಬಡವರಿಗಾಗಿ ಏನಾದರೊಂದು‌ ಸಹಾಯಾರ್ಥವಾದ ಕೆಲಸ ಮಾಡಬೇಕು ಎಂಬ ತುಡಿತದ ಹಿನ್ನೆಲೆಯಲ್ಲಿ ಬಡವರ ಕಲ್ಯಾಣಕ್ಕಾಗಿ ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸ್ಥಾಪಿಸಿದೆ, ಇದವರಲ್ಲಿರುವ ಬಹುತೇಕ ಸದಸ್ಯರು ಬಡತನದ ಹಿನ್ನೆಲೆಯುಳ್ಳವರಾಗಿದ್ದು, ಬಡವರು ಮತ್ತು ಮಹಿಳೆಯರಿಗೆ ಸ್ವಾವಲಂಬಿ ಬದುಕು ರೂಪಿಸಲು ಸೊಸೈಟಿಯ ಮೂಲಕ ಶ್ರಮಿಸಲಾಗುತ್ತಿದೆ. ಅಂಬೇಡ್ಕರ್, ಬುದ್ಧ, ಬಸವ, ದಿ.ಬಸವಲಿಂಗಪ್ಪ ಮುಂತಾದ ಮಹಾತ್ಮರ ಆದರ್ಶಗಳನ್ನು ‌ಮೈಗೂಡಿಸಿಕೊಂಡಿರುವುದೇ ನಾನು ಬದುಕಿನಲ್ಲಿ ಗಳಿಸಿಕೊಂಡಿರುವ ಬಹುದೊಡ್ಡ ಆಸ್ತಿಯಾಗಿದೆ. ಡಾ.ಬಿ.ಆರ್.ಅಂಬೇಡ್ಕರ್, ಬುದ್ಧ, ಬಸವ, ದಿ.ಬಸವಲಿಂಗಪ್ಪ ಅವರ ಆದರ್ಶಗಳ ಪಾಲನೆಯಿಂದ ಮಾತ್ರ ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ಸ್ವಾವಲಂಬನೆ ಸಾಧ್ಯ, ಈ ದಿಸೆಯಲ್ಲಿ ಸಮಾಜ ಮುನ್ನಡೆಯ ಬೇಕಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಹೊಸ ವರ್ಷದ ಡೈರಿ, ದಿನದರ್ಶಿಕೆ ಬಿಡುಗಡೆ ಮಾಡಲಾಯಿತು. ಇದೇ ವೇಳೆ ಹಲವು ಮುಖಂಡರು ಜಕ್ಕೂರು ರವಿಕುಮಾರ್ ಅವರಿಗೆ ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವದ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಪ್ರಸನ್ನಕುಮಾರ್, ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷೆ ರತ್ನಮ್ಮ, ನಿರ್ದೇಶಕರಾದ ವಿ.ನಾಗರಾಜಪ್ಪ, ವಿನೋದ್ ಕುಮಾರ್ ವ್ಯಾಸ, ಬಿ.ಜಿ.ರಮೇಶ್, ಬಿ.ಕೆ.ರವೀಂದ್ರ ನಾಥಗೌಡ, ಸುಮಿತ್ರ,ವೀಣಾ ವೆಂಕಟೇಶ್, ಎಸ್.ಮಾರುತಿ, ಚಂದ್ರಶೇಖರ್, ಆಂಜಿನಪ್ಪ, ಇ.ಕೃಷ್ಣಪ್ಪ, ಮಂಜುನಾಥ್, ಮಾಲಾ ವಿ.ಭಟ್, ಎಸ್.ವಿ.ರಾಮಚಂದ್ರಪ್ಪ, ಮಾಜಿ ಉಪಮೇಯರ್ ಆನಂದ್, ಮುಖಂಡರಾದ ಎನ್.ಎನ್. ಶ್ರೀನಿವಾಸಯ್ಯ, ನಾಗೇನಹಳ್ಳಿ ಶ್ರೀನಿವಾಸ್, ರಘ(ಎಫ್.ಎಂ.), ಆವಲಹಳ್ಳಿ ರಮೇಶ್, ಅಳ್ಳಾಳಸಂದ್ರ ಸೋಮಶೇಖರ್, ತಿರುಮಳಪ್ಪ, ಸೊಸೈಟಿಯ ಸಿಇಒ ರಾಕೇಶ್ ಎಸ್.ಟಿ., ಯಶೋಧ, ಲಾವಣ್ಯ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *