ಕೋಗಿಲು ಬಂಡೆ ಬಳಿ 80 ಕೋಟಿ ರೂ. ಮೌಲ್ಯದ 5 ಎಕರೆ ಜಾಗ ಒತ್ತುವರಿ ತೆರವು: ಕರೀಗೌಡ.

ಯಲಹಂಕ. ಬೆಂಗಳೂರು, ದಿನಾಂಕ 20.12 2025 ರಂದು

ಬೆಂಗಳೂದು ಉತ್ತರ ನಗರ ಪಾಲಿಕೆ ಕೋಗಿಲು ಬಂಡೆ ಬಳಿ 5 ಎಕರೆ ಜಾಗ ಒತ್ತುವರಿ ತೆರವುಗೊಳಿಸಿ, ಜಾಗ ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕರೀಗೌಡ ರವರು ತಿಳಿಸಿದರು.

ಬೆಂಗಳೂರು ನಗರ ಜಿಲ್ಲೆ, ಯಲಹಂಕ ತಾಲ್ಲೂಕು, ಯಲಹಂಕ ಹೋಬಳಿಯ ಕೋಗಿಲು ಗ್ರಾಮದ ಸರ್ವೆ ನಂ. 99 ರಲ್ಲಿ ಲಭ್ಯವಿರುವ ಒಟ್ಟು 14 ಎಕರೆ 36 ಗುಂಟ ವಿಸ್ತೀರ್ಣದ ಜಮೀನಿನಲ್ಲಿ, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (BSWML) ವತಿಯಿಂದ ಪ್ರಸ್ತಾವಿತ ಬಯೋ ಮೆಥನೈಸೇಶನ್ ಪ್ಲಾಂಟ್, ಅನಿಮಲ್ ರೆಂಡರಿಂಗ್, ಅನಿಮಲ್ ಇನ್ಸಿನರೇಷನ್, ಎಳನೀರು ಬುರುಡೆ ಸಂಸ್ಕರಣಾ ಮತ್ತು ಸ್ಯಾನಿಟರಿ ತ್ಯಾಜ್ಯ ಸಂಸ್ಕರಣಾ ಸೌಲಭ್ಯಗಳನ್ನು ಕಾರ್ಯಗತಗೊಳಿಸಲು ಯೋಜಿಸಲಾಗಿತ್ತು.

ಬೆ.ಘ.ತ್ಯಾ.ನಿ ನಿಯಮಿತಕ್ಕೆ ಮೀಸಲಿರಿಸಿದ್ದ ಜಾಗದಲ್ಲಿ ಸುಮಾರು 5 ಎಕರೆ ಜಾಗವನ್ನು ಅಕ್ರಮವಾಗಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ತಾತ್ಕಾಲಿಕವಾಗಿ 150ಕ್ಕೂ ಹೆಚ್ಚು ಶೆಡ್/ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದರು. ಇಂದು ಅಧಿಕಾರಿಗಳ ನೇತೃತ್ವದ ತಂಡವು ಜಾಗದಲ್ಲಿದ್ದ ಎಲ್ಲಾ ಒತ್ತುವರಿಯನ್ನು ಸಂಪೂರ್ಣವಾಗಿ ತೆರವುಗೊಳಿಸಿ ಜಾಗವನ್ನು ಸಂಸ್ಥೆಯ ವಶಕ್ಕೆ ಪಡೆಯಲಾಯಿತು.

ಅನಧಿಕೃತ ಒತ್ತುವರಿ‌ ತೆರವು ಕಾರ್ಯಾಚರಣೆಯನ್ನು ಪೊಲೀಸ್ ಭದ್ರತೆಯೊಂದಿಗೆ ಬೆಂ.ಘ.ತ್ಯಾ.ನಿ.ನಿ, ಅಗ್ನಿಶಾಮಕ, ಪಾಲಿಕೆ, ಕಂದಾಯ ಇಲಾಖೆ, ಬಿಎಂಟಿಎಫ್, 70 ಮಾರ್ಷಲ್‍ಗಳು ಹಾಗೂ 200 ಮಂದಿ ಮಾನವ ಸಂಪನ್ಮೂಲದ‌ ಮೂಲಕ ನಡೆಯಿತು.

ಅನಧಿಕೃತ ಒತ್ತುವರಿ‌ ತೆರವಿಗಾಗಿ 9 ಟ್ರ್ಯಾಕ್ಟರ್, 9 ಜೆ.ಸಿ.ಬಿ ಯಂತ್ರಗಳನ್ನು ಬಳಸಿ ಸುಮಾರು 150ಕ್ಕೂ ಹೆಚ್ಚು ಅನಧಿಕೃತ ಶೆಡ್/ಮನೆಗಳನ್ನು ನೆಲಸಮಗೊಳಿಸಲಾಯಿತು.

ಒತ್ತುವರಿ ತೆರವುಗೊಳಿಸಿ ವಶಕ್ಕೆ ಪಡೆಯಲಾದ 5 ಎಕರೆ ಜಾಗದ ಸರ್ಕಾರಿ ಮಾರ್ಗಸೂಚಿ ದರ (Guidance Value) ಅಂದಾಜು 15 ಕೋಟಿ ರೂ. ಗಳಾಗಿದ್ದು, ಪ್ರಸ್ತುತ ಮಾರುಕಟ್ಟೆ ಮೌಲ್ಯ (Market Value) ಅಂದಾಜು 80 ಕೋಟಿ ರೂ. ಗಳಾಗಿರುತ್ತದೆ. ಈ ಕಾರ್ಯಾಚರಣೆಯ ಮೂಲಕ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಸ್ವತ್ತನ್ನು ರಕ್ಷಿಸಲಾಗಿದ್ದು, ಮುಂದಿನ ದಿನಗಳಲ್ಲಿ ಉದ್ದೇಶಿತ ಘನತ್ಯಾಜ್ಯ ನಿರ್ವಹಣಾ ಯೋಜನೆಗಳಿಗೆ ಈ ಜಾಗವನ್ನು ಬಳಸಿಕೊಳ್ಳಲಾಗುವುದು.

ಕಾರ್ಯಾಚರಣೆಯ ವೇಳೆ ಬೆಂ.ಘ.ತ್ಯಾ.ನಿ. ದ ಮುಖ್ಯ ಕಾರ್ರ್ಯಾಚರಣೆ ಅಧಿಕಾರಿ ರಮಾಮಣಿ, ಮುಖ್ಯ ಪ್ರಧಾನ ವ್ಯವಸ್ಥಾಪಕ ಡಾ: ರಾಘವೇಂದ್ರ ಪ್ರಸಾದ್, ಡಿಜಿಎಂ ಗಳು, ಎಜಿಎಂಗಳು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *