






ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ : ಡಾ.ಎಂ.ಸಿ.ಸುಧಾಕರ್
ಬಾಗಲೂರು ಗ್ರಾಮದಲ್ಲಿ ಸ್ನಾತಕೋತ್ತರ ಕೇಂದ್ರ ಉದ್ಘಾಟನೆ :
ಬ್ಯಾಟರಾಯನಪುರ : ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಪೋಷಕರಿಗೆ ಸಲಹೆ ನೀಡಿದರು.
ಬ್ಯಾಟರಾಯನಪುರ ಕ್ಷೇತ್ರದ ಬಾಗಲೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ‘ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವ ವಿದ್ಯಾನಿಲಯ ಸ್ನಾತಕೋತ್ತರ ಕೇಂದ್ರ’ವನ್ನು ಮಂಗಳವಾರ ಉದ್ಘಾಟನೆ ಮಾಡಿ ಮಾತನಾಡಿದ ಅವರು ‘ಸರ್ಕಾರಿ ಶಾಲೆಗಳು ಇತ್ತೀಚಿನ ದಿನಗಳಲ್ಲಿ ಕಟ್ಟಡ, ಸೌಕರ್ಯಗಳು, ಗ್ರಂಥಾಲಯ ಹೀಗೆ ಯಾವುದೇ ನಿಟ್ಟಿನಲ್ಲೂ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲದಂತಿವೆ. ಉಚಿತ ಸಮವಸ್ತ್ರ, ಉಚಿತ ಪಠ್ಯಪುಸ್ತಕ, ಶುಲ್ಕರಹಿತ ಶಿಕ್ಷಣ, ಆಂಗ್ಲ ಮಾಧ್ಯಮ, ಕನ್ನಡ ಮಾಧ್ಯಮ ಪಠ್ಯಕ್ರಮ ಸೇರಿದಂತೆ ಖಾಸಗಿ ಶಾಲೆಗಳಿಗಿಂತ ಅತ್ಯುತ್ತಮ ವ್ಯವಸ್ಥೆ, ಸೌಲಭ್ಯ ಸರ್ಕಾರಿ ಶಾಲೆಗಳಲ್ಲಿದೆ, ಇಷ್ಟೆಲ್ಲಾ ಉಚಿತ ವ್ಯವಸ್ಥೆ ಇದ್ದರೂ ಸಹ ಪೋಷಕರಿಗೆ ಖಾಸಗಿ ಶಾಲೆಗಳ ವ್ಯಾಮೋಹ ಹೋಗಿಲ್ಲ, ಮಕ್ಕಳನ್ನು ಲಕ್ಷಾಂತರ ಹಣ ತೆತ್ತು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಪೋಷಕರು ಮೊದಲು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು. ಇಂದು ಬಾಗಲೂರು ಗ್ರಾಮದಲ್ಲಿ ‘ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವ ವಿದ್ಯಾನಿಲಯ ಸ್ನಾತಕೋತ್ತರ ಕೇಂದ್ರ’ವನ್ನು ಉದ್ಘಾಟಿಸಿದ್ದು, ಬಾಗಲೂರು ಮತ್ತು ಸುತ್ತಮುತ್ತಲಿನ ವಿದ್ಯಾರ್ಥಿಗಳು ಈ ಸ್ನಾತಕೋತ್ತರ ಕೇಂದ್ರದ ಸದುಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿ ‘ಬಾಗಲೂರು ಗ್ರಾಮದಲ್ಲಿ ಇಂದು ಸ್ನಾತಕೋತ್ತರ ಕೇಂದ್ರದ ಉದ್ಘಾಟನೆ, ಬಾಗಲೂರು ಮುಖ್ಯರಸ್ತೆಯ ಸಂತೆ ಮೈದಾನದಿಂದ ಪ್ರಗತಿ ಎನ್ಕ್ಲೇವ್ ವರೆಗೆ ರಸ್ತೆ ಡಾಂಬರೀಕರಣ ಮತ್ತು ಕಾಂಕ್ರೀಟ್ ರಸ್ತೆ, ಬಾಗಲೂರು-ಬೂದಿಗೆರೆ ರಸ್ತೆ ಅಭಿವೃದ್ಧಿ, ಬಾಗಲೂರು ಪೊಲೀಸ್ ಠಾಣೆಯಿಂದ ಸೈಂಟ್ ಫ್ರಾನ್ಸಿಸ್ ಶಾಲೆಯವರೆಗಿನ ರಸ್ತೆ ಅಭಿವೃದ್ಧಿ, ಹೆಣ್ಣೂರು ಮುಖ್ಯರಸ್ತೆಯಿಂದ ಕೆ.ಕೆ.ಮೆಡೋಸ್ ವರೆಗಿನ ರಸ್ತೆ ಡಾಂಬರೀಕರಣ, ಯೂನಿಯನ್ ಬ್ಯಾಂಕ್ ನಿಂದ ಉದ್ಯಾನವನದ ವರೆಗಿನ ರಸ್ತೆ ಡಾಂಬರೀಕರಣ, ಮುನೇಶ್ವರ ಬಡಾವಣೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಸೇರಿದಂತೆ ಒಟ್ಟು 2 ಕೋಟಿ ರು.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಬ್ಯಾಟರಾಯನಪುರ ಕ್ಷೇತ್ರ ಅತ್ಯಂತ ವೇಗದ ಗತಿಯಲ್ಲಿ ಬೆಳೆಯುತ್ತಿದ್ದು, ಬೆಳವಣಿಗೆಯ ಲಯಕ್ಕೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಸರಿದೂಗಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಕೈಗೊಳ್ಳಲಾಗಿದೆ. ಕ್ಷೇತ್ರದ ಜನತೆಯ ಆರೋಗ್ಯದ ಕಾಳಜಿಯ ದಿಸೆಯಲ್ಲಿ ಯಲಹಂಕ-ಬಾಗಲೂರು ಮುಖ್ಯರಸ್ತೆಯಲ್ಲಿ ಬರುವ ರೇವಾ ಕಾಲೇಜ್ ಜಂಕ್ಷನ್ ಬಳಿ ಸುಮಾರು100 ಕೋಟಿ ರು.ಅಂದಾಜು ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡಲು ಯೋಜಿಸಲಾಗಿದ್ದು, ಈ ಮಹತ್ಕಾರ್ಯಕ್ಕೆ ಸಿ.ಎಂ.ಮತ್ತು ಡಿ.ಸಿ.ಎಂ. ಮಂಜೂರಾತಿ ನೀಡಿದ್ದಾರೆ. ಅತಿ ಶೀಘ್ರದಲ್ಲಿ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ರಮೇಶ್ ಬಿ., ಕುಲಸಚಿವ ನವೀನ್ ಜೋಸೆಫ್, ಕುಲಸಚಿವ ಪ್ರೊ.ರಮೇಶ್ ಬಿ.ಕುಡೇನಟ್ಟಿ, ವಿತ್ತಾಧಿಕಾರಿ ವಿಜಯಲಕ್ಷ್ಮಿ ಎಂ.ವಿ., ಬಾಗಲೂರು ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ರಿತಿಕ ಸಿನ್ಹ, ಜಿ.ಪಂ. ಮಾಜಿ ಅಧ್ಯಕ್ಷ ಕೆ.ಅಶೋಕನ್, ಮಾರೇನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ಆಂಜಿನಪ್ಪ (ಪುಟ್ಟು), ಬಾಗಲೂರು ಗ್ರಾ.ಪಂ.ಅಧ್ಯಕ್ಷ ಎ.ಕೆಂಪೇಗೌಡ, ಮಾಜಿ ಅಧ್ಯಕ್ಷ ಡಿ.ಜಗನ್ನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಯಗೋಪಾಲ್ ಗೌಡ, ಎನ್.ಎನ್.ಶ್ರೀನಿವಾಸಯ್ಯ, ಜಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜೈಕುಮಾರ್, ಪ್ರಧಾನ ಕಾರ್ಯದರ್ಶಿ ಮೀಸಗಾನಹಳ್ಳಿ ನಾರಾಯಣಗೌಡ, ಭೂನ್ಯಾಯ ಮಂಡಳಿ ಸದಸ್ಯರಾದ ನಾಗರಾಜ್, ಬಿ.ಕೆ.ನಾರಾಯಣ ಸ್ವಾಮಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜಕುಮಾರ್, ಬೆಟ್ಟಹಲಸೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಬಿ.ಎಂ.ನಾಗೇಶ್, ಕಾಂಗ್ರೆಸ್ ಮುಖಂಡರಾದ ಅಮರನಾರಾಯಣ, ಎ.ವೆಂಕಟರಾಜು, ಪಿಳ್ಳೇಗೌಡ, ಜಾಲ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮಧುಗೌಡ, ಯುವ ಮುಖಂಡರಾದ ಪಿ.ರಾಹುಲ್, ಪ್ರದೀಪ್(ಮುತ್ತು), ಸಿ.ಎ.ಶಿವರಾಜ್ ಸೇರಿದಂತೆ ಗ್ರಾ.ಪಂ.ಸದಸ್ಯರು ಹಾಗೂ ಇನ್ನಿತರರಿದ್ದರು.
