







ಬೆಟ್ಟಹಲಸೂರು-ರಾಜಾನುಕುಂಟೆ ರೈಲ್ವೆ ಲೈನ್ ನಿರ್ಮಾಣಕ್ಕೆ ವಿರೋಧ :
ಉಪವಿಭಾಗಾಧಿಕಾರಿಗಳೊಂದಿಗೆ ರೈತ ಮುಖಂಡರ ಸಭೆ :
ಬ್ಯಾಟರಾಯನಪುರ : ಕ್ಷೇತ್ರದ ಬೆಟ್ಟಹಲಸೂರು-ರಾಜನಕುಂಟೆ ಹೊಸ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡ ಅವರ ನೇತೃತ್ವದಲ್ಲಿ ರೈತ ಮುಖಂಡರು ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಡಾ.ಕಿರಣ್ ಹಾಗೂ ಉನ್ನತ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಈ ವೇಳೆ ಮಾನ್ಯ ಉಪ ವಿಭಾಗಾಧಿಕಾರಿಗಳಿಗೆ ಮಾಹಿತಿ ನೀಡಿದ ರೈತ ಮುಖಂಡರು ಬೆಟ್ಟಹಲಸೂರು-ರಾಜಾನುಕುಂಟೆ ರೈಲ್ವೆ ಮಾರ್ಗವು ಅವೈಜ್ಞಾನಿಕವಾದ ಯೋಜನೆಯಾಗಿದ್ದು, ಸದರಿ ಯೋಜನೆಯಿಂದ ರೈತರು ತಮ್ಮ ಕೃಷಿ ಭೂಮಿ ಕಳೆದುಕೊಳ್ಳು ವುದಲ್ಲದೆ ಭವಿಷ್ಯದಲ್ಲಿ ಅವರ ಕುಟುಂಬಗಳು ಬೀದಿ ಪಾಲಾಗುತ್ತವೆ. ಸುಮಾರು 25 ವರ್ಷಗಳ ಹಿಂದೆಯೇ ಗೌರಿಬಿದನೂರು-ಚಿಕ್ಕಬಳ್ಳಾಪುರ ರೈಲ್ವೆ ಮಾರ್ಗ ಯೋಜನೆ ರೂಪುಗೊಂಡಿದ್ದು, ಹಲವು ವರ್ಷಗಳಿಂದ ಈ ಯೋಜನೆಯನ್ನು ಜಾರಿಗೆ ತಂದಿಲ್ಲ, ಈ ರೈಲ್ವೆ ಮಾರ್ಗ ಯೋಜನೆಯನ್ನು ಜಾರಿಗೆ ತಂದಿದ್ದೆ ಆದಲ್ಲಿ ಧರ್ಮಾವರಂ ಕಡೆಯಿಂದ ಬರುವ ಪ್ರಯಾಣಿಕರ ರೈಲುಗಳು ಹಾಗೂ ಗೂಡ್ಸ್ ರೈಲು ಗೌರಿಬಿದನೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಕೋಲಾರ, ಕೆಜಿಎಫ್ ಹಾಗೂ ಚೆನ್ನೈ ಕಡೆಗೆ ಸರಾಗವಾಗಿ ಚಲಿಸಬಹುದು ಹಾಗೂ ಈ ಯೋಜನೆಯಿಂದ ಸರ್ಕಾರಕ್ಕೂ ಸಹ ಪ್ರಯಾಣಿಕರು ಹಾಗೂ ಗೂಡ್ಸ್ ವಾಹನಗಳಿಂದ ಅಧಿಕ ಲಾಭ ಬರುತ್ತದೆ ಹಾಗೂ ಸಮಯ, ಇಂಧನ ಸಹ ಉಳಿತಾಯ ವಾಗುತ್ತದೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿ ಕೊಟ್ಟರು. ಈಗಾಗಲೇ ಸೆರ್ಕ್ಯುಲರ್ ರೈಲ್ವೆ ಯೋಜನೆ ಅಡಿ ಬೆಂಗಳೂರು ಸುತ್ತ 287 ಕಿಲೋಮೀಟರ್ ಯೋಜನೆ ರೂಪುಗೊಂಡಿದ್ದು, ಅದರಲ್ಲಿ ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ 28.5 ಕಿಲೋಮೀಟರ್ ಮಾರ್ಗವೂ ಸಹ ಇದೆ, ಇದರಿಂದ ಬೆಂಗಳೂರು ಪ್ರವೇಶಿಸದೆ ಹೋರ ವಲಯದಿಂದ ಚೆನ್ನೈ ಕಡೆಗೂ ಸಹ ಪ್ರಯಾಣ ಬೆಳೆಸಬಹುದಾಗಿದೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು. ರೈತರ ಈ ಸರಿಯಾದ ಮಾಹಿತಿ ಆಲಿಸಿದ ರೈಲ್ವೆ ಅಧಿಕಾರಿಗಳು ಈ ಯೋಜನೆ ಬಗ್ಗೆ ನಮಗೆ ಮಾಹಿತಿಯಿಲ್ಲ ಎಂದು ನುಣಚ್ಚಿಕೊಳ್ಳಲು ಯತ್ನಿಸಿದರು.
ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿಗಳಾದ ಬಿ.ಜಿ.ನಂಜುಂಡಪ್ಪ ಬೆಟ್ಟಹಲಸೂರು, ಟಿ.ಡಿ.ಅಂಬರೀಶ್, ಸಂಘಟನಾ ಕಾರ್ಯದರ್ಶಿ ಆರ್.ಲೋಕೇಶ್ ಶರ್ಮ, ರೈತ ಮುಖಂಡರಾದ ಬೆಂಕಿ ನಾರಾಯಣ, ಜೀರಿಗೆ ಬಾಬು ಎ., ಪ್ರಕಾಶ್ ಟಿ.ಪಿ., ತಿಮ್ಮರಾಜು ಬಿ.ಎಂ., ಚಂದ್ರಶೇಖರ್ ಸೇರಿದಂತೆ ಗ್ರಾಮಸ್ಥರಿದ್ದರು.
