














ಬ್ಯಾಟರಾಯನಪುರ ಕ್ಷೇತ್ರಕ್ಕೆ ನಾನು ರಾಜಕಾರಣ ಮಾಡಲು ಬಂದಿಲ್ಲ ಅನ್ಯಾಯ-ಅಕ್ರಮಗಳ ವಿರುದ್ಧ ಹೋರಾಡಲು ಬಂದಿದ್ದೇನೆ : ಎಚ್.ಸಿ.ತಮ್ಮೇಶ್ ಗೌಡ
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರಕ್ಕೆ ನಾನು ಶುಷ್ಕ ರಾಜಕಾರಣ ಮಾಡಲು ಬಂದಿಲ್ಲ, ಇಲ್ಲಿನ ಅನ್ಯಾಯ, ಅಕ್ರಮಗಳ ವಿರುದ್ಧ ಹೋರಾಡಲು ಬಂದಿದ್ದೇನೆ, ರಾಜ್ಯದಲ್ಲೇ ಬ್ಯಾಟರಾಯನಪುರ ಕ್ಷೇತ್ರಕ್ಕೆ ಒಂದು ವಿಭಿನ್ನ ಅಸ್ಮಿತೆ ಕಲ್ಪಿಸುವ ಮೂಲಕ ರಾಜ್ಯದ ಜನತೆ ಬ್ಯಾಟರಾಯನಪುರ ಕ್ಷೇತ್ರದತ್ತ ಹಿಂತಿರುಗಿ ನೋಡುವಂತೆ ಮಾಡಬೇಕೆಂಬ ಧ್ಯೇಯ ನನ್ನದು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಸಿ.ತಮ್ಮೇಶ್ ಗೌಡ ಅಭಿಪ್ರಾಯಪಟ್ಟರು.
‘ಒಂದು ರಾಷ್ಟ್ರ, ಒಂದು ಆಚರಣೆ: ಶೀರ್ಷಿಕೆ ಅಡಿಯಲ್ಲಿ ಬ್ಯಾಟರಾಯನಪುರ ಕ್ಷೇತ್ರದ ಹುಣಸಮಾರನಹಳ್ಳಿಯಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ ‘ಬ್ಯಾಟರಾಯನಪುರ ಸಂಕ್ರಾಂತಿ ಉತ್ಸವ’ದ ಅಂತಿಮ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ಕಳೆದ ಹಲವು ವರ್ಷಗಳಿಂದ ಧಾರ್ಮಿಕ ಉತ್ಸವಗಳು, ದೈವ ಕಾರ್ಯಗಳು, ಪಾರಂಪರಿಕ ಹಬ್ಬಗಳನ್ನು ಕ್ಷೇತ್ರದ ಜನರೊಟ್ಟಿಗೆ ಸೇರಿ ಆಚರಿಸಲಾಗುತ್ತಿದ್ದು, ಜನತೆ ಸಹ ಬಹಳ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ.ಬ್ಯಾಟರಾಯನಪುರ ಸಂಕ್ರಾಂತಿ ಉತ್ಸವದಲ್ಲಿ ಸಹಸ್ರಾರು ಜನ ಅತ್ಯುತ್ಸಾಹದಿಂದ ಪಾಲ್ಗೊಂಡಿರುವುದು ಸಂತೋಷ ಉಂಟು ಮಾಡಿದೆ. ಸಂಕ್ರಾಂತಿ ಯನ್ನು ಬ್ಯಾಟರಾಯನಪುರ ಕ್ಷೇತ್ರದಲ್ಲಿ ನೆಲೆಸಿರುವ ದೇಶದ ವಿವಿಧ ರಾಜ್ಯಗಳ ಜನರೊಟ್ಟಿಗೆ ಆಚರಿಸಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಸಂಕ್ರಾಂತಿ ಉತ್ಸವ ಆಯೋಜಿಸಲಾಗಿದೆ. ಬ್ಯಾಟರಾಯನಪುರ ಕ್ಷೇತ್ರದಲ್ಲಿ ನೆಲೆಸಿರುವ ನಾಡಿನ ವಿವಿಧ ಜಿಲ್ಲೆಗಳ, ವಿವಿಧ ರಾಜ್ಯ ಮತ್ತು ಭಾಷೆಗಳ ಜನರೊಂದಿಗೆ ಸಂಪ್ರದಾಯ ಬದ್ಧವಾಗಿ ಆಚರಿಸುತ್ತಿರುವ ಬಗ್ಗೆ ಹೆಮ್ಮೆ ಇದೆ. ಜನತೆ ತಮ್ಮ ಕಲೆ , ಸಂಸ್ಕೃತಿ ಮತ್ತು ಆಚರಣೆಗಳನ್ನು ಸಂಕ್ರಾಂತಿ ಉತ್ಸವದಲ್ಲಿ ಪ್ರಸ್ತುತ ಪಡಿಸುತ್ತಿರುವುದು ಸಾರ್ಥಕ ಭಾವ ಮೂಡುವಂತೆ ಮಾಡಿದೆ. ಕ್ಷೇತ್ರದ ಜನತೆ ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಆಭಾರಿಯಾಗಿ ದ್ದೇನೆ. ಕ್ಷೇತ್ರದ ಜನತೆಗೆ ನ್ಯಾಯ ದೊರಕಿಸಿಕೊಡುವುದು ಮತ್ತು ಅವರ ಶ್ರೇಯೋಭಿವೃದ್ಧಿ ನನ್ನ ಗುರಿಯಾಗಿದ್ದು, ಈ ಗುರಿಸಾಧನೆಗಾಗಿ ಅವಿರತವಾಗಿ ಶ್ರಮಿಸುವುದಾಗಿ ತಿಳಿಸಿದರು.
ಬ್ಯಾಟರಾಯನಪುರ ಸಂಕ್ರಾಂತಿ ಉತ್ಸವದಲ್ಲಿ ಬ್ಯಾಟರಾಯನಪುರ ಮಂಡಲಗಳ ಬಿಜೆಪಿ ಅಧ್ಯಕ್ಷರಾದ ಹನುಮಂತಗೌಡ, ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಸ್.ಅನಿಲ್ ಕುಮಾರ್, ಬೇಗೂರು ಮಹೇಶ್, ಪ್ರತಾಪ್ ಗೌಡ, ಮಧುಸೂದನ್, ಉಪಾಧ್ಯಕ್ಷ ಡಾ.ಎಸ್.ಯೋಗೇಶ್ ಬೆಸ್ತರ್, ಒಬಿಸಿ ಮೋರ್ಚಾ ಅಧ್ಯಕ್ಷ ಮುನಿಸ್ವಾಮಿ ಒಡೆಯರ್(ಆನಂದ್ ಮಾಸ್ಟರ್), ಹಿರಿಯ ಬಿಜೆಪಿ ಮುಖಂಡರಾದ ಮುನಿಹನುನಯ್ಯ, ಎಲ್.ನಂಜಪ್ಪ, ಯುವ ಮೋರ್ಚಾ ಅಧ್ಯಕ್ಷರಾದ ತಿಮ್ಮೇಗೌಡ, ಲೋಹಿತ್ ಗೌಡ, ಮುರಳಿ, ಮನೋಹರ್, ಸುನಿಲ್, ಕಿರಣ್ ಸೇರಿದಂತೆ ಇನ್ನಿತರರಿದ್ದರು.
ಅಂತಿಮ ದಿನದ ಸಂಕ್ರಾಂತಿ ಉತ್ಸವದ ಪ್ರಯುಕ್ತ ಖ್ಯಾತ ಗಾಯಕರಾದ ವಿಜಯಪ್ರಕಾಶ್, ಅನುರಾಧ ಭಟ್ ಅವರ ನೇತೃತ್ವದಲ್ಲಿ ಸಂಗೀತ ರಸಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು, ಕಾರ್ಯಕ್ರಮದಲ್ಲಿ ಹತ್ತಾರು ಸಾವಿರ ಜನ ಪಾಲ್ಗೊಂಡು ಕುಣಿದು ಕುಪ್ಟಳಿಸಿದರು.
ಬಾಕ್ಸ್ :
ಸಂಕ್ರಾಂತಿ ಉತ್ಸವದ ಪ್ರಯುಕ್ತ ಸರಣಿ ಕಾರ್ಯಕ್ರಮಗಳು :
ಸಂಕ್ರಾಂತಿ ಉತ್ಸವದ ಪ್ರಯುಕ್ತ ಸಾಂಪ್ರದಾಯಿಕ ಕ್ರೀಡಗಳು, ಆಹಾರ ಮೇಳ, ಕಡಲೆಕಾಯಿ ಪರಿಷೆ, ಅವರೆ ಮೇಳ ಸೇರಿದಂತೆ ವಿವಿಧ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಜೀ ಕನ್ನಡ ಸರಿಗಮಪ ಖ್ಯಾತಿಯ ಸುನಿಲ್, ಸುಹಾನಾ, ಸಮನ್ವಿ ಶೆಟ್ಟಿ, ಅಮಿಶ್ ಅವರ ಗಾನ ಸುಧೆ ಕಾರ್ಯಕ್ರಮ, ಉತ್ತರ ಕರ್ನಾಟಕದ ಬಂಧುಗಳಿಂದ ಸಂಕ್ರಾಂತಿ ಸುಗ್ಗಿ ಕಾರ್ಯಕ್ರಮ, ತೆಲುಗು ಸಹೋದರರಿಂದ ಭೋಗಿ ಉತ್ಸವ, ತಮಿಳು ಸಹೋದರರಿಂದ ಪೊಂಗಲ್ ಉತ್ಸವ, ಮಲೆಯಾಳಿ ಸಹೋದರರಿಂದ ಮಕರ ವಿಳಕ್ಕು ಮುಂತಾದ ಕಾರ್ಯಕ್ರಮಗಳು ಸಂಕ್ರಾಂತಿ ಉತ್ಸವದ ಮೆರಗನ್ನು ಹೆಚ್ಚಿಸಿದವು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಿಗೆ ನಮ್ಮರ ಹೆಮ್ಮೆ ಪ್ರಶಸ್ತಿ ಪ್ರಧಾನ, ಸಂಕ್ರಾಂತಿ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಣೆ, ನಾಲ್ಕು ಸಾವಿರ ಮಹಿಳೆಯರಿಗೆ ಸಮಾಧಾನಕರ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
