ಜಾಗೃತಿ ಮೂದಿದ್ದರೆ ಭಾರತ ಆಡಳಿತಾತ್ಮಕವಾಗಿ ಹಿಂದೂಗಳಿಂದ ಕೈತಪ್ಪಲಿದೆ : ಎಂ.ಆರ್.ಅನಂತ್
ಸಿಂಗನಾಯಕನಹಳ್ಳಿಯಲ್ಲಿ ಬೃಹತ್ ಹಿಂದೂ ಸಮಾಜೋತ್ಸವ :
ಯಲಹಂಕ : ಹಿಂದೂಗಳಲ್ಲಿ ಸೂಕ್ತ ರೀತಿಯ ಜಾಗೃತಿ, ಒಗ್ಗಟ್ಟು, ರಾಷ್ಟ್ರ ಪ್ರಜ್ಞೆ ಮೂಡದಿದ್ದರೆ 2050ರ ವೇಳೆಗೆ ಭಾರತ ಆಡಳಿತಾತ್ಮಕವಾಗಿ ಹಿಂದೂಗಳಿಂದ ಕೈತಪ್ಪಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ ಎಂ.ಆರ್.ಅನಂತ್ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ಸಂದಿರುವ ಹಿನ್ನೆಲೆಯಲ್ಲಿ ಹಲವು ಹಿಂದೂಪರ ಸಂಘಟನೆಗಳು, ಯಲಹಂಕ ಕ್ಷೇತ್ರ ಬಿಜೆಪಿ, ಸಿಂಗನಾಯಕನಹಳ್ಳಿ ಗ್ರಾಮದ ಬಿಜೆಪಿ ಮುಖಂಡರ ಸಹಯೋಗದೊಂದಿಗೆ ಸಿಂಗನಾಯಕನಹಳ್ಳಿ ಗ್ರಾಮದ ಪುನೀತ್ ರಾಜ್‍ಕುಮಾರ್ ಸಭಾಂಗಣದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಬೃಹತ್ ಹಿಂದೂ ಸಮಾಜೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು ಕ್ರಿ.ಶ‌.6ನೇ ಶತಮಾನದಿಂದ ಭಾರತದ ಮೇಲೆ ಹಲವು ಮುಸ್ಲಿಂ ಧಾಳಿಕೋರರು ಆಕ್ರಮಣ ಮಾಡಿ ನಮ್ಮ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದಿದ್ದಾರೆ. ಸುಮಾರು 800 ವರ್ಷಗಳ ಕಾಲ ಭಾರತ ಮುಸ್ಲಿಂ ದೊರೆಗಳ ಕ್ರೂರ ಆಡಳಿತಕ್ಕೆ ಸಿಲುಕಿ ನಲುಗಿ ಹೋಗಿದೆ. ಈ ವೇಳೆಯಲ್ಲಿ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿಸುವ ಹುನ್ನಾರಗಳು ನಡೆದಿವೆ. ನಮ್ಮ ದೇಶದ ಈ ಪರಿಸ್ಥಿತಿಗೆ ನಮ್ಮಲ್ಲಿನ ದೇಶದ್ರೋಹಿಗಳು, ವಿವಿಧ ವಿಷಯಗಳಲ್ಲಿ ನಮ್ಮಲ್ಲಿನ ಭಿನ್ನಾಭಿಪ್ರಾಯ, ಒಗ್ಗಟ್ಟಿನ ಕೊರತೆ ಇವುಗಳೇ ಮೂಲ ಕಾರಣ.
ಆದರೆ ಹಿಂದೂಗಳ ಮೂಲಸ್ಥಾನವಾಗಿರುವ ಭಾರತದಲ್ಲಿ ಹಿಂದೂಗಳ ಕ್ಷೇಮ, ಅವರ ಒಗ್ಗಟ್ಟು, ಅವರ ಹಿತದೃಷ್ಟಿಯನ್ನು ಆಲೋಚಿಸಿದ ಮೊದಲ ಸಂಘಟನೆ ಎಂದರೆ ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಅತ್ಯಂತ ಸುಭದ್ರ ಮತ್ತು ವ್ಯವಸ್ಥಿತ ನೆಲೆಗಟ್ಟಿನಲ್ಲಿ ಮುನ್ನಡೆಯುತ್ತಿರುವ ಜಗತ್ತಿನ ಸಂಘಟನೆಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಗ್ರ ಪಂಕ್ತಿಯಲ್ಲಿದೆ. ಸುಭದ್ರವಾದ ಹಿಂದೂ ರಾಷ್ಟ್ರ ನಿರ್ಮಾಣ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯ ಧ್ಯೇಯವಾಗಿದ್ದು, ಈ ದಿಸೆಯಲ್ಲಿ ಮುನ್ನುಗ್ಗುತ್ತಿದೆ.
ಆದರೆ ಇತ್ತೀಚೆಗೆ ನಮ್ಮ ಹಿಂದೂಗಳಲ್ಲಿ ಸ್ವಾರ್ಥಪರತೆ, ಕೌಟುಂಬಿಕ ನೆಲೆಗಟ್ಟಿಗಷ್ಟೇ ಸೀಮಿತವಾಗಿರುವ ಬದುಕು, ಸಮಾಜ ಮತ್ತು ರಾಷ್ಟ್ರದ ಬಗೆಗಿನ ಚಿಂತನೆ ಕ್ಷೀಣವಾಗುತ್ತಿರುವುದು ಮುಂತಾದ ಅಪಮೌಲ್ಯಗಳಿಂದಾಗಿ ನಾವು ದೇಶವನ್ನು ಕೈಚೆಲ್ಲುವ ಹಂತಕ್ಕೆ ತಲುಪುತ್ತಿದ್ದೇವೆ, ಇದು ತುಂಬಾ ಅಪಾಯಕಾರಿ ಬೆಳವಣಿಗೆಯಾಗಿದೆ. ಹಲವು ವಿದ್ವಾಂಸರು, ಅಂಕಿಅಂಶಗಳ ಪರಿಣಿತರು ಭಾರತದ ಭವಿಷ್ಯ ಕುರಿತು ಆಘಾತಕಾರಿ ಅಂಶಗಳನ್ನು ಬಹಿರಂಗ ಪಡಿಸಿದ್ದು, 2050ರ ವೇಳೆಗೆ ಭಾರತ ಆಡಳಿತಾತ್ಮಕವಾಗಿ ಹಿಂದೂಗಳಿಂದ ಕೈತಪ್ಪಲಿದೆ ಎಂದು ಎಚ್ಚರಿಸಿದ್ದಾರೆ. ದೇಶದ ಪ್ರತಿ ಹಿಂದೂಗಳಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿದ್ದು, ಹಿಂದೂಗಳಲ್ಲಿ ಜಾಗೃತಿ, ಒಗ್ಗಟ್ಟು, ಐಕ್ಯತೆ ಮೂಡದಿದ್ದರೆ ಪರಿಣಿತರ ಅಭಿಪ್ರಾಯಗಳು ನಿಜವಾಗುವ ಸಂಭಾವ್ಯತೆಯಿದೆ ಈ ದಿಸೆಯಲ್ಲಿ ಹಿಂದೂಗಳಾದ ನಾವು ಅಗತ್ಯ ಸಾಮರ್ಥ್ಯ, ಶಕ್ತಿ ಬೆಳೆಸಿಕೊಳ್ಳುವುದರ ಜೊತೆಗೆ ಒಗ್ಗಟ್ಟಾಗಿರಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳ ಅಗತ್ಯತೆ ಇದೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ ‘ಹಿಂದೂ ಸಮಾಜೋತ್ಸವವನ್ನು ಯಲಹಂಕ ಕ್ಷೇತ್ರದ ನಗರ ಪ್ರದೇಶದ ಪ್ರತಿ ವಾರ್ಡ್, ಗ್ರಾಮೀಣ ಭಾಗದಲ್ಲಿ ಪ್ರತಿ‌ ಹಳ್ಳಿಯ ಮಟ್ಟದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗಿದೆ. ಜಾಗೃತಿ ಮೂಡಿಸುವ ಮೂಲಕ ಪರಧರ್ಮಿಯರು ಮತ್ತು ಪರಕೀಯರಿಂದ ಹಿಂದೂ ಸಮಾಜವನ್ನು ರಕ್ಷಿಸಿಕೊಳ್ಳಲು ಸಮಾಜ ಬಾಂಧವರನ್ನು ಅಣಿಗೊಳಿಸುವುದಷ್ಟೇ ಹಿಂದೂ ಸಮಾಜೋತ್ಸವ ಆಚರಣೆಯ ಮುಖ್ಯ ಧ್ಯೇಯವಾಗಿದೆ. ಹಿಂದೂಗಳು ಎಂದಿಗೂ ಬೇರೆಯವರ ಮೇಲೆ ಆಕ್ರಮ ಮಾಡಿರುವ ಯಾವ ಉದಾಹರಣೆಗಳು ಇತಿಹಾಸದ ಪುಟದಲ್ಲಿಲ್ಲ, ಜಾಗೃತಿ ಮತ್ತು ಒಗ್ಗಟ್ಟಿನ ಕೊರತೆಯಿಂದಾಗಿ ಅರ್ಧ ದೇಶವನ್ನು ಕಳೆದುಕೊಂಡಿದ್ದೇವೆ, ಮುಂದೆ ಈ ರೀತಿ ಆಗದಂತೆ ಜಾಗೃತಿ ವಹಿಸುವಂತೆ ಸಂದೇಶ ಸಾರುವುದಷ್ಟೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಹಿಂದೂ ಸಮಾಜೋತ್ಸವಕ್ಕೆ ಪ್ರಖರ ಹಿಂದುತ್ವವಾದಿ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಆಹ್ವಾನಿಸಲಾಗಿತ್ತು, ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಅವರನ್ನು ಗೃಹಬಂಧನದಲ್ಲಿಟ್ಟ ಕಾರಣದಿಂದಾಗಿ ಅವರು ಆಗಮಿಸಿಲ್ಲ, ಮುಂದಿನ ದಿನಗಳಲ್ಲಿ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಆಹ್ವಾನಿಸಿ, ಲಕ್ಷಾಂತರ ಜನರ ಸಮ್ಮುಖದಲ್ಲಿ ಬೃಹತ್ ಕಾರ್ಯಕ್ರಮ ನಡೆಸಲಾಗುವುದು ಎಂದರು.
ಆದಿ ಚುಂಚನಗಿರಿ ಬೆಂಗಳೂರು ಶಾಖಾ ಮಠದ ಮುಖ್ಯಸ್ಥರಾದ ಶ್ರೀ ಸೌಮ್ಯನಾಥ ಸ್ವಾಮೀಜಿಯವರು ಮಹತ್ವದ ಈ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದು,ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಹಿಂದೂ ಸಮಾಜೋತ್ಸವ ಸಮಿತಿಯ ಅಧ್ಯಕ್ಷ ಟಿ.ಚೆಲುವರಾಜ್ ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಬಿಜೆಪಿ ಮುಖಂಡರು, ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಜನ ಪಾಲ್ಗೊಂಡಿದ್ದರು.
ಬಾಕ್ಸ್ :
ಹೊಸ ಮೈಲಿಗಲ್ಲು ಸೃಷ್ಟಿಸಿದ ಬೃಹತ್ ಶೋಭಾ ಯಾತ್ರೆ :
ಹಿಂದೂ ಸಮಾಜೋತ್ಸವದ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಿಂಗನಾಯಕನಹಳ್ಳಿ ಗ್ರಾಮದಾದ್ಯಂತ ವಿವಿಧ ಜಾನಪದ ಕಲಾ ತಂಡಗಳ ಕಲಾ ಪ್ರದರ್ಶನದ ನಡುವೆ ಭಾರತಾಂಬೆ, ಮೈಲಪ್ಪನಹಳ್ಳಿ ಮತ್ತು ಹೊನ್ನೇನಹಳ್ಳಿ ಗ್ರಾಮಗಳ ಗ್ರಾಮದೇವತೆಗಳು ಸೇರಿದಂತೆ ಹಿಂದೂ ಧರ್ಮದ ಹಲವು ದೇವರುಗಳ ಬೃಹತ್ ಶೋಭಾಯಾತ್ರೆ ನಡೆಸಲಾಯಿತು. ಬೃಹತ್‌ ಶೋಭಾಯಾತ್ರೆಯಲ್ಲಿ ಹಿಂದೂಪರ ಸಂಘಟನೆಗಳ ಸಹಸ್ರಾರು ಕಾರ್ಯಕರ್ತರು, ಬಿಜೆಪಿ ಮುಖಂಡರು, ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಸೇರಿದಂತೆ ಸುಮಾರು ಐದು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದು, ಸಿಂಗನಾಯಕನಹಳ್ಳಿ ಗ್ರಾಮದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿತು. ಈ ವೇಳೆ ಹಿಂದೂ ಜಾಗೃತಿ ಸಂದೇಶ ಹೊತ್ತ ವಿವಿಧ ಘೋಷಣೆಗಳನ್ನು ಕೂಗಿ ಜಾಗೃತಿ ಮೂಡಿಸಲಾಯಿತು.

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

R Hanumanthau kogilu layout 

Yelahanka Bangalore Karnataka

9845085793.   7349337989

Leave a Reply

Your email address will not be published. Required fields are marked *