








36 ಕೋಟಿ ರು.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ :
ಯಲಹಂಕ : ಕ್ಷೇತ್ರದ ಹೆಸರಘಟ್ಟ ಗ್ರಾಮದಲ್ಲಿ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ, ಸ್ತ್ರೀ ಶಕ್ತಿ ಭವನ ಉದ್ಘಾಟನೆ, ಗ್ರಾಮ ಪಂಚಾಯತಿ ಸಭಾಂಗಣ ಕಟ್ಟಡ ಉದ್ಘಾಟನೆ, ಹೆಸರಘಟ್ಟದ 2, 3, 8 ಮತ್ತು 9ನೇ ವಾರ್ಡ್ ಗಳಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ, ಹುರುಳಿಚಿಕ್ಕನಹಳ್ಳಿ ಮತ್ತು ಕೊಡಗಿತಿರುಮಳಾಪುರ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಭೂಮಿಪೂಜೆ, ಬ್ಯಾಲಕೆರೆ ಮತ್ತು ಗುಣಿ ಅಗ್ರಹಾರ ಗ್ರಾಮಗಳಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಸುಮಾರು 36 ಕೋಟಿ ರು.ಅಂದಾಜು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಸೋಮವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ‘ಹೆಸರಘಟ್ಟ ನನಗೆ ರಾಜಕೀಯ ದೀಕ್ಷೆ ನೀಡಿದ ಪುಣ್ಯಭೂಮಿ, ನಾನು ಯಲಹಂಕ ಕ್ಷೇತ್ರದ ಶಾಸಕನಾಗಿದ್ದರೂ ಸಹ ಹೆಸರಘಟ್ಟದ ಬಗ್ಗೆ ವಿಶೇಷವಾದ ಪ್ರೀತಿ, ಕಾಳಜಿ ಇದೆ. ನಮ್ಮ ಧರ್ಮಪತ್ನಿ ಯವರನ್ನು ಹೆಸರಘಟ್ಟದ ಜನತೆ ಎರಡು ಬಾರಿ ಜಿಲ್ಲಾ ಪಂಚಾಯತಿ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ, ಹೆಸರಘಟ್ಟ ಜನತೆಯ ಋಣ ಭಾರ ನಮ್ಮ ಮೇಲಿದೆ, ಎಂದಿಗೂ ಅದನ್ನು ಮರೆಯಲಾರೆ. ಚುನಾವಣೆಯ ವೇಳೆಯಲ್ಲಿ ಮಾತ್ರ ಕಾಣಿಸಿಕೊಂಡು ಕಣ್ಮರೆಯಾಗುವ ಹಲವು ರಾಜಕಾರಣಿಗಳನ್ನು ನೀವು ಕಂಡಿದ್ದೀರಿ ಆದರೆ ನಾನು ಪ್ರತಿ ನಿತ್ಯ ಕ್ಷೇತ್ರ ಪರ್ಯಾಟನೆ ಮಾಡುವ, ಜನರ ಸಂಕಷ್ಟಗಳನ್ನು ಕೇಳಿ, ಅವುಗಳನ್ನು ಪರಿಹರಿಸುವ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಕ್ಷೇತ್ರ ನಿಷ್ಠ ಶಾಸಕ, ನನಗೆ ಯಲಹಂಕ ಬರಿಯ ಕ್ಷೇತ್ರವಲ್ಲ ಅದು ನನ್ನ ಕರ್ಮಭೂಮಿ, ಕ್ಷೇತ್ರದ ಜನತೆಯೇ ನನ್ನ ಕುಟುಂಬ ಎಂಬುದು ನನ್ನ ಮನೋಭಾವನೆ, ಅಭಿವೃದ್ಧಿಯ ವಿಷಯದಲ್ಲಿ ಕ್ಷೇತ್ರದ ಚಿಕ್ಕ ಗ್ರಾಮವನ್ನು ಸಹ ಕಡೆಗಣಿಸುವುದಿಲ್ಲ. ಇಂದಿನ ರಾಜ್ಯ ಸರ್ಕಾರದ ಅನುದಾನದ ಕೊರತೆಯ ನಡುವೆಯೂ ಸಹ ಎಡೆಬಿಡದೆ ಓಡಾಡಿ, ಕ್ಷೇತ್ರದ ನಗರ ಮತ್ತು ಗ್ರಾಮೀಣ ಭಾಗದ ಅಭಿವೃದ್ಧಿಗೆ ಅಗತ್ಯ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ. ಇಂದು ಹೆಸರಘಟ್ಟದಲ್ಲಿ ಬೃಹತ್ ಒಳಾಂಗಣ ಕ್ರೀಡಾಂಗಣ, ಸ್ತ್ರೀ ಶಕ್ತಿ ಭವನ, ಗ್ರಾಮ ಪಂಚಾಯ್ತಿ ಸಭಾಂಗಣ ಕಟ್ಟಡ ಉದ್ಘಾಟಿಸಿದ್ದು , ಗ್ರಾಮದ ವಿವಿಧ ವಾರ್ಡ್ ಗಳಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಉಳಿದಂತೆ ಹುರುಳಿಚಿಕ್ಕನಹಳ್ಳಿ ಮತ್ತು ಕೊಡಗಿ ತಿರುಮಳಾಪುರ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ಕಾಮಗಾರಿ, ಬ್ಯಾಲಕೆರೆ ಮತ್ತು ಗುಣಿ ಅಗ್ರಹಾರ ಗ್ರಾಮಗಳಲ್ಲಿ ಬಹುಕೋಟಿ ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾಮಗಾರಿ ನಿರ್ವಹಣೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದರ ಜೊತೆಗೆ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡ ದಿಬ್ಬೂರು ಜಯಣ್ಣ, ಜಿ.ಪಂ.ಮಾಜಿ ಸದಸ್ಯರಾದ ಚೊಕ್ಕನಹಳ್ಳಿ ವೆಂಕಟೇಶ್, ಎಂ.ಬಿ.ಕೃಷ್ಣಯ್ಯ, ಹೆಸರಘಟ್ಟ ಹೋಬಳಿ ಬಿಜೆಪಿ ಅಧ್ಯಕ್ಷ ವಸಂತ್ ಅರಕೆರೆ, ಪ್ರಧಾನ ಕಾರ್ಯದರ್ಶಿ ಎಸ್.ಜಿ.ಪ್ರಶಾಂತ್ ರೆಡ್ಡಿ, ರೈತ ಮೋರ್ಚಾ ಅಧ್ಯಕ್ಷ ಎಚ್.ಸಿ.ರಾಜೇಶ್, ಹೆಸರಘಟ್ಟ ಗ್ರಾ.ಪಂ.ಅಧ್ಯಕ್ಷೆ ರಂಜಿನಿ ಮಧುಸೂದನ್, ಉಪಾಧ್ಯಕ್ಷ ಶಿವಾನಂದ್, ಬಿಜೆಪಿ ಮುಖಂಡರಾದ ಪ್ರಕಾಶ್, ಸಂದೀಪ್, ಅಶ್ವಥ್, ಪಿ.ಕೆ.ರಾಜಣ್ಣ,ಕೆ.ಪಿ.ಪ್ರಭಾಕರ್,ಚಿಕ್ಕಹನುಮಂತೇಗೌಡ, ಮಂಜುನಾಥ್, ಕೆಂಪರಾಜು, ನರಸಿಂಹಮೂರ್ತಿ, ಸಿದ್ಧರಾಜು, ಮುನಿರಾಜು(ಎಂ.ಡಿ.), ಸುರೇಶ್(ಮೊಗ್ಯಬೋ), ಎಚ್.ವಿ.ಗೋವಿಂದರಾಜು, ಒಬಿಸಿ ಉಪಾಧ್ಯಕ್ಷ ಎಂ.ಸುರೇಶ್, ರೋಹಿತಾಶ್ವ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಮಹೇಂದ್ರ, ಕಸಘಟ್ಟಪುರ ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ದೇವರಾಜ್, ಪರಿಮಳ, ಅಂಜನಾದೇವಿ, ಲತಾ, ಪುಷ್ಪಲತಾ, ಶಾಂತಾ, ಪುಷ್ಪ ಸೇರಿದಂತೆ ಹಲವು ಬಿಜೆಪಿ ಮುಖಂಡರು ಹಾಗೂ ಗ್ರಾ.ಪಂ.ಸದಸ್ಯರಿದ್ದರು.
ಕಾಮಗಾರಿ ಪೂಜೆಗೂ ಮುನ್ನ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಕ್ಷೇತ್ರಾಭಿವೃದ್ಧಿ ಕಾರ್ಯಗಳು ಮತ್ತು ಬಿಜೆಪಿ ಪಕ್ಷದ ತತ್ವ ಸಿದ್ಧಾಂತವನ್ನು ಮೆಚ್ಚಿ ಕಾಂಗ್ರೆಸ್ ಪಕ್ಷ ಸೇರಿದಂತೆ ವಿವಿಧ ಪಕ್ಷಗಳ ಹಲವು ಮುಖಂಡರು ಪಕ್ಷ ತೊರೆದು ಶಾಸಕರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.
