






















ಬ್ಯಾಟರಾಯನಪುರ : ಆಡಳಿತವನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ದಿಸೆಯಲ್ಲಿ ವಿರೋಧ ಪಕ್ಷಕ್ಕೂ ಸಹ ಆಡಳಿತ ಪಕ್ಷದಷ್ಟೇ ಜವಾಬ್ದಾರಿ ಇರುತ್ತದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್ ಸಿ ತಮ್ಮೆಶ್ ಗೌಡ ಅಭಿಪ್ರಾಯ ಪಟ್ಟರು.
ಬ್ಯಾಟರಾಯನಪುರ ಬಿಜೆಪಿ ನಗರ ಮಂಡಲ ವತಿಯಿಂದ ಕ್ಷೇತ್ರದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ಆಡಳಿತದಲ್ಲಿ ಆಗುವ ಅನಾಹುತಗಳನ್ನು ನೋಡಿಕೊಂಡು ಸುಮ್ಮನೆ ಕೂರುವುದು ವಿರೋಧ ಪಕ್ಷದ ವರ್ತನೆಯಾಗಬಾರದು, ಆಡಳಿತ ದಿಕ್ಕು ತಪ್ಪಿದಾಗ ಅದರ ವಿರುದ್ಧ ಗಟ್ಟಿ ಧ್ವನಿ ಎತ್ತುವುದು, ಹೋರಾಟಗಳ ಮೂಲಕ ಆಡಳಿತವನ್ನು ಸರಿದಾರಿಗೆ ತರುವುದು ವಿರೋಧ ಪಕ್ಷಗಳ ಜವಾಬ್ದಾರಿಯಾಗಿರುತ್ತದೆ. ಬ್ಯಾಟರಾಯನಪುರ ಕ್ಷೇತ್ರದಲ್ಲಿ ವಿರೋಧ ಪಕ್ಷದ ನಾಯಕನಾಗಿ ಆಡಳಿತ ಪಕ್ಷದ ವೈಫೈಲ್ಯಗಳ ವಿರುದ್ಧ ಗಟ್ಟಿಯಾದ ಧ್ವನಿ ಎತ್ತುವುದು ಹಾಗೂ ಹೋರಾಟಗಳನ್ನು ರೂಪಿಸುವ ಮೂಲಕ ಆಡಳಿತ ಪಕ್ಷದ ಕಿವಿ ಹಿಂಡುವ ಕೆಲಸವನ್ನು ಪ್ರಾಮಾಣಿಕವಾಗಿ ಕೈಗೊಂಡಿದ್ದೇನೆ, ಈ ಬಗ್ಗೆ ಆತ್ಮ ತೃಪ್ತಿ ಇದೆ.
ಬ್ಯಾಟರಾಯನಪುರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಸದೃಢವಾಗಿ ಬಲಪಡಿಸುವ ಮೂಲಕ ಮುಂಬರುವ ಜಿಬಿಎ ಚುನಾವಣೆಯಲ್ಲಿ ಎಲ್ಲಾ 14 ವಾರ್ಡ್ ಗಳಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸುವುದು ನಮ್ಮ ಆದ್ಯತೆಯ ಗುರಿಯಾಗಿದ್ದು, ಈ ದಿಸೆಯಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಬ್ಯಾಟರಾಯನಪುರ ಕ್ಷೇತ್ರದಲ್ಲಿ ಹಲವು ಜ್ವಲಂತ ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ಷೇತ್ರದ ಪ್ರತಿ ವಾರ್ಡ್ ಗಳಲ್ಲಿರುವ ನೀರಿನ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ಪಟ್ಟಿ ಮಾಡಿ, ಮಾ.16ಕ್ಕೆ ಜಿಬಿಎ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಪ್ರತಿ ವಾರ್ಡ್ ನಲ್ಲಿನ ಬಿಜೆಪಿ ಮುಖಂಡರು ವಾರ್ಡ್ ಗಳಲ್ಲಿರುವ ಸಮಸ್ಯೆಗಳನ್ನು ಪಟ್ಟಿ ಮಾಡಬೇಕು.
ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಬಲವರ್ಧನೆಯ ನಿಟ್ಟಿನಲ್ಲಿ ‘ನಾನು ಮೋದಿ ನಾನು ಬಿಜೆಪಿ’ ಎಂಬ ಅಭಿಯಾನ ಕೈಗೊಳ್ಳಲು ನಿರ್ಧರಿಸಿದ್ದು ಈ ಅಭಿಯಾನದ ಅಡಿಯಲ್ಲಿ ಪ್ರತಿ ಬೂತ್ ನ ಅಧ್ಯಕ್ಷರು 50 ಮನೆಗಳ ಮೇಲೆ ಬಿಜೆಪಿ ಬಾವುಟ ಕಟ್ಟುವುದು, ಮೋದಿಯವರ ಆಡಳಿತದಲ್ಲಿ ಕೈಗೊಂಡಿರುವ ಹಲವು ಅಭಿವೃದ್ಧಿ ಕಾರ್ಯಗಳ ಕುರಿತು ಅರಿವು ಮೂಡಿಸುವುದು, ರಾಜ್ಯ ಸರ್ಕಾರದ ವೖಫಲ್ಯಗಳು, ಬ್ಯಾಟರಾಯನಪುರ ಕ್ಷೇತ್ರದಲ್ಲಿನ ಜ್ವಲಂತ ಸಮಸ್ಯೆಗಳ ಕುರಿತು ಜನಜಾಗೃತಿ ಮೂಡಿಸುವುದು ಅಭಿಯಾನದ ಮುಖ್ಯ ಧ್ಯೇಯವಾಗಿದೆ.
ಬ್ಯಾಟರಾಯನಪುರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಗೆಲುವಿಗಾಗಿ ಪ್ರತಿ ಕಾರ್ಯಕರ್ತರು ಹೊಣೆಗಾರಿಕೆಯಿಂದ ಕೆಲಸ ಮಾಡಬೇಕು, ನಮ್ಮ ಸೋಲಿಗೆ ನಮ್ಮ ಬೇಜವಾಬ್ದಾರಿತನ ಕಾರಣವಾಗಬಾರದು, ಜವಾಬ್ದಾರಿ ನಿರ್ವಹಣೆಯಲ್ಲಿ ಶ್ರದ್ಧೆ ಪ್ರಾಮಾಣಿಕತೆ ಇರಬೇಕು ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂ.ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಹರೀಶ್, ರಾಜ್ಯ ಕಾರ್ಯದರ್ಶಿಗಳಾದ ವಿನಯ್ ಬಿದರಿ, ಶರಣು ತಳ್ಳಿಕೇರಿ, ಕಾನೂನು ಪ್ರಕೋಷ್ಠ ಸಂಚಾಲಕ ವಸಂತಕುಮಾರ್, ಬ್ಯಾಟರಾಯನಪುರ ನಗರ ಮಂಡಲ ಬಿಜೆಪಿ ಅಧ್ಯಕ್ಷ ಕೃಷ್ಣಮೂರ್ತಿ, ಗ್ರಾ.ಮಂಡಲ ಅಧ್ಯಕ್ಷ ಹನುಮಂತಗೌಡ, ಬೆಂ.ವಿಭಾಗೀಯ ಪ್ರಭಾರಿ ಎಸ್.ಎನ್.ರಾಜಣ್ಣ, ಸಹಪ್ರಭಾರಿ ಕಿರಣ್ ಬಾಬು, ಹಿರಿಯ ಬಿಜೆಪಿ ಮುಖಂಡ ಪಿ.ಕೆ.ರಾಜಗೋಪಾಲ್, ಅಗ್ರಹಾರ ನರಸಿಂಹಮೂರ್ತಿ, ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ದೀಪಕ್ ಕುಮಾರ್, ನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಲೋಹಿತ್ ಗೌಡ, ಓಬಿಸಿ ಮೋರ್ಚಾ ಅಧ್ಯಕ್ಷ ಮುನಿಸ್ವಾಮಿ ಒಡೆಯರ್(ಆನಂದ್ ಮಾಸ್ಟರ್), ಮನೋಹರ್, ಮಹಿಳಾ ಮೋರ್ಚಾ ಅಧ್ಯಕ್ಷೆ ಪೂರ್ಣಿಮಾ, ನಗರ ಮಂಡಲ ಉಪಾಧ್ಯಕ್ಷ ಚಂದ್ರಶೇಖರ್ ರೆಡ್ಡಿ, ಡಾ. ಯೋಗೀಶ್, ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಇ., ಸಂತೋಷ್ ರೆಡ್ಡಿ, ಶ್ರೀನಾಥ್, ಸುಬ್ಬು, ಮಧುಸೂದನ್ ಸೇರಿದಂತೆ ಇನ್ನಿತರರಿದ್ದರು.
ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಬಲವರ್ಧನೆ, ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಕುರಿತು ಜನಜಾಗೃತಿ ಮೂಡಿಸುವುದು, ಜಿಬಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗೆಲುವಿಗಾಗಿ ಅನುಸರಿಸಬೇಕಾದ ಕಾರ್ಯತಂತ್ರ ಕುರಿತು ಹಲವು ಗಣ್ಯರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಲವು ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು.
