ಕ್ಯಾನ್ಸರ್ ಮಾರಕ ರೋಗವಾದರೂ ಮುಂಜಾಗ್ರತೆಯ ಮೂಲಕ ತಡೆಗಟ್ಟಬಹುದು : ಡಾ.ಕಲಾ ಹರ್ಷ

ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘದ ವತಿಯಿಂದ ಮಹಿಳಾ ದಿನಾಚರಣೆ :

ಯಲಹಂಕ : ಕ್ಯಾನ್ಸರ್ ಒಂದು ಮಾರಕ ರೋಗವೇ ಆಗಿದ್ದರೂ ಸಹ ಮುಂಜಾಗ್ರತೆ, ಒಳ್ಳೆಯ ಹವ್ಯಾಸಗಳ ಮೂಲಕ ತಡೆಗಟ್ಟಬಹುದು ಎಂದು ಮಹಿಳಾ ತಜ್ಞೆ ಡಾ.ಕಲಾ ಹರ್ಷ ಅಭಿಪ್ರಾಯ ಪಟ್ಟರು.

‘ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘ ಯಲಹಂಕ’ದ ವತಿಯಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು ‘ಕ್ಯಾನ್ಸರ್ ರೋಗದಲ್ಲಿ ಹಲವು ವಿಧಗಳಿವೆ. ಸಕಾಲದಲ್ಲಿ ರೋಗಪತ್ತೆ ಮತ್ತು ಸೂಕ್ತ ರೀತಿಯ ಚಿಕಿತ್ಸೆಯಿಂದ ಕ್ಯಾನ್ಸರ್ ರೋಗದಿಂದ ಹೊರಬರಲು ಸಾಧ್ಯವಿದೆ. ಕ್ಯಾನ್ಸರ್ ರೋಗ ಎಷ್ಟೇ ಮಾರಕವಾಗಿದ್ದರೂ ಸಹ ಒಳ್ಳೆಯ ಹವ್ಯಾಸಗಳು, ಉತ್ತಮ ಆಹಾರ ಪದ್ಧತಿ ಮುಂತಾದ ಮುಂಜಾಗ್ರತಾ ಕ್ರಮಗಳಿಂದ ತಡೆಗಟ್ಟಲು ಸಾಧ್ಯವಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಆಹಾರ ತಜ್ಞೆ ಡಾ.ಶರಣ್ಯಶೆಟ್ಟಿ ಅವರು ಮಾತನಾಡಿ ‘ಆಹಾರ ಜೀವನದ ಮೂಲಾಧಾರವಾಗಿದ್ದು, ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ‘ಆಹಾರ ಔಷಧವಾಗಬೇಕೇ ಹೊರತು ಔಷಧ ಆಹಾರವಾಗಬಾರದು’ ಎಂಬ ನಾಣ್ನುಡಿಯಲ್ಲಿ ಆಹಾರದ ಮಹತ್ವವೇನು ಎಂಬುದರ ಸಂದೇಶವಿದೆ. ಉತ್ತಮ ಆಹಾರ ಪದ್ಧತಿ ರೋಗ ನಮ್ಮ ಬಳಿ ಸುಳಿಯದಂತೆ ಕಾಪಾಡಬಲ್ಲದು, ಹಾಗೆಯೇ ವ್ಯವಸ್ಥಿತವಲ್ಲದ, ಅಸಮತೋಲಿತ ಆಹಾರ ಪದ್ಧತಿ ನಮ್ಮನ್ನು ರೋಗದ ಸುಳಿಗೆ ಸಿಲುಕಿಸಬಲ್ಲದು, ಈ ದಿಸೆಯಲ್ಲಿ ಪ್ರತಿಯೊಬ್ಬರು ತಮ್ಮ ಆಹಾರ ಪದ್ಧತಿಯ ಬಗ್ಗೆ ಹೆಚ್ಚು ಗಮನ ವಹಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ, ದೇವನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಅನುಸೂಯ ಕೆ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘದ ಮಹಿಳಾ ಉಪಾಧ್ಯಕ್ಷೆ ಶ್ರೀಲತಾ ಹರೀಶ್ ಶೆಟ್ಟಿ ಅವರು ವಹಿಸಿದ್ದು, ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸಾಂಸ್ಕೃತಿ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಪ್ರತಿಮಾ ಆಚಾರ್, ಸಂಘದ ಅಧ್ಯಕ್ಷ ಶೇಖರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಶೋಕ್ ಹೆಬ್ಬಾರ್, ಉಪಾಧ್ಯಕ್ಷ ಜಯರಾಮ್ ಶೆಟ್ಟಿ, ಖಜಾಂಚಿ ವಿಶ್ವನಾಥ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಿಂಧೂ ಜಿ ನಾಯಕ್, ಕಮಲಾಕ್ಷ ಎಲ್. ಕುಂದರ್, ವಿನಯ ವಿಜಯ್, ಸಂಧ್ಯಾ ಶೆಟ್ಟಿ, ರಮೇಶ್ ಪೂಜಾರಿ, ಚೇತನ್ ಹೆಗ್ಡೆ, ನವೀನ್, ಅಮೂಲ್ಯ ವಿ.ಶೆಟ್ಟಿ, ದೀಪಕ್, ಸಂಯೋಜಕರಾದ ಚಿತ್ರಕಲಾ ರೈ, ಸೇರಿದಂತೆ ಇನ್ನಿತರ ಪದಾಧಿಕಾರಿಗಳಿದ್ದರು.

Leave a Reply

Your email address will not be published. Required fields are marked *