

















ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಕಟ್ಟಿಗೆನಹಳ್ಳಿಯಲ್ಲಿ 110 ಗ್ರಾಮಗಳ ಯೋಜನೆಯಡಿಯಲ್ಲಿ ಕಾವೇರಿ ಪೈಪ್ ಲೈನ್, ಒಳಚರಂಡಿ ಪೈಪ್ ಲೈನ್ ಅಳವಡಿಕೆ ಕಾಮಗಾರಿ, ಸಾತನೂರು ಗ್ರಾಮದ ಎಸ್ ಎಲ್ ವಿ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ, ಮಾರೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಮತ್ತು ಮಂಚಪ್ಪನಹಳ್ಳಿ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಸುಮಾರು 137 ಕೋಟಿ ರೂ ಅಂದಾಜು ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಕೃಷ್ಣಭೈರೇಗೌಡ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ ಖಾಸಗಿ ಬಡಾವಣೆಗಳ ಮಾಲೀಕರು ಸೂಕ್ತ ಮೂಲಭೂತ ಸೌಕರ್ಯ ಕಲ್ಪಿಸದೆ ಬಡಾವಣೆಗಳನ್ನು ನಿರ್ಮಿಸಿ ಹಣದ ಹಪಹಪಿಗಾಗಿ ಗ್ರಾಹಕರಿಗೆ ನಿವೇಶನಗಳನ್ನು ಮಾರುತ್ತಾರೆ. ಆದರೆ ನಿವೇಶನ ಕೊಂಡ ಗ್ರಾಹಕರು ನೀರು ಒಳಚರಂಡಿ ವಿದ್ಯುತ್ ಸಂಪರ್ಕ ಇತ್ಯಾದಿ ಮೂಲಭೂತ ಸೌಕರ್ಯಗಳಿಗೆ ಬಡಾವಣೆಗಳ ಮಾಲೀಕರನ್ನು ಒತ್ತಾಯಿಸದೆ ಸರ್ಕಾರವನ್ನು ಒತ್ತಾಯಿಸುವುದು ನಿಜಕ್ಕೂ ದುರ್ದೈವದ ಸಂಗತಿ. ಹಣದಾಸೆಗಾಗಿ ಬಡಾವಣೆಗಳನ್ನು ನಿರ್ಮಿಸುವವರು ಗ್ರಾಹಕರಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡಬೇಕು ಎಲ್ಲವನ್ನು ಸರ್ಕಾರದ ಹಣೆಗೆ ಕಟ್ಟುವುದಾದರೆ ಬಡಾವಣೆ ನಿರ್ಮಿಸಲು ಸರ್ಕಾರ ಏನಾದರೂ ನಿಮಗೆ ತಿಳಿಸಿತ್ತಾ ಎಂದು ಖಾಸಗಿ ಬಡಾವಣೆಗಳನ್ನು ನಿರ್ಮಿಸುವವರನ್ನು ತರಾಟೆಗೆ ತೆಗೆದುಕೊಂಡರು. ಬ್ಯಾಟರಾಯನಪುರ ಕ್ಷೇತ್ರದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅಭಿವೃದ್ಧಿಯ ಕೊರತೆ ಕಾಣಿಸಿಕೊಳ್ಳಬಾರದು ಎಂಬ ನಿಟ್ಟಿನಲ್ಲಿ ರಸ್ತೆ, ಚರಂಡಿ, ಉದ್ಯಾನವನ, ಆಟದ ಮೈದಾನಗಳು, ಶಾಲೆ ಹೀಗೆ ಸರ್ವಾಂಗೀಣವಾದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ, ಜನತೆಯ ಅಭಿವೃದ್ಧಿಯ ಆಶಯಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ.ಮಹೇಶ್ ಕುಮಾರ್, ಜಿ.ಪಂ. ಮಾಜಿ ಸದಸ್ಯರಾದ ದಾನೇಗೌಡ, ಸುಷ್ಮಾ ಮುನಿರಾಜು, ತಾಲ್ಲೂಕು ಭೂ ನ್ಯಾಯ ಮಂಡಳಿ ಸದಸ್ಯ ನಾಗರಾಜ್, ಬೆಂ.ನಗರ ಜಿಲ್ಲಾ ಭೂ ನ್ಯಾಯ ಮಂಡಳಿ ಸದಸ್ಯ ಬಿ.ಕೆ.ನಾರಾಯಣಸ್ವಾಮಿ, ಬಾಗಲೂರು ಗ್ರಾ.ಪಂ.ಅಧ್ಯಕ್ಷ ಎ.ಕೆಂಪೇಗೌಡ, ಜಗನ್ನಾಥ್, ಮಾರೇನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಪಿ.ರಾಹುಲ್, ಹೊಸಹಳ್ಳಿ ಕೃಷ್ಣಮೂರ್ತಿ, ಕಾಂಗ್ರೆಸ್ ಮುಖಂಡರಾದ ಶುಕೂರ್ ಅಹಮದ್ ಖಾನ್, ಸಂಪಿಗೆಹಳ್ಳಿ ಶಿವಕುಮಾರ್, ಸುಬ್ರಮಣಿ, ಮುನಿರಾಜು, ಇಕೋ ಪ್ರೊಟೆಕ್ಷನ್ ಇಂಜಿನಿಯರ್ಸ್ ನ ಪಿ.ಪ್ರೇಮ್ ಕುಮಾರ್, ಮುತ್ತುಲಕ್ಷ್ಮಣನ್ ಸೇರಿದಂತೆ ಇನ್ನಿತರರಿದ್ದರು.
