









ಕಾಫಿ ಬೋರ್ಡ್ ಬಡಾವಣೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ :
ಬ್ಯಾಟರಾಯನಪುರ : ಸ್ತ್ರೀಯರನ್ನು ಗೌರವಿಸುವುದು ಭಾರತೀಯ ಸಂಸ್ಕೃತಿ, ಪರಂಪರೆಯ ಮೂಲಾಧಾರ ವಾಗಿದ್ದು, ನೆಲ, ಜಲ, ವನ ಹೀಗೆ ಪವಿತ್ರವಾದ ಎಲ್ಲವನ್ನು ತಾಯಿ ಎಂದು ಸಂಬೋಧಿಸುವ, ಪೂಜಿಸುವ, ಆರಾಧಿಸುವ ಸಂಸ್ಕಾರ ನಮ್ಮಲ್ಲಿ ಜನ್ಮದತ್ತವಾಗಿ ಬಂದಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಹೆಚ್.ಸಿ.ತಮ್ಮೇಶ್ ಗೌಡ ಅಭಿಪ್ರಾಯ ಪಟ್ಟರು.
ಬ್ಯಾಟರಾಯನಪುರ ಕ್ಷೇತ್ರದ ಕೆಂಪಾಪುರ ವಾರ್ಡ್ ನ ಕಾಫಿ ಬೋರ್ಡ್ ಬಡಾವಣೆಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳಾ ಮಣಿಯರಿಗೆ ಗೌರವ ಸನ್ಮಾನ ನೀಡಿ ಮಾತನಾಡಿದ ಅವರು ‘ಭಾರತೀಯ ಪರಂಪರೆಯಲ್ಲಿ ಮಹಿಳೆಯರಿಗೆ ಅತ್ಯಂತ ಪೂಜ್ಯ ಸ್ಥಾನವಿದ್ದು ಪವಿತ್ರವಾದ ಎಲ್ಲವನ್ನು ತಾಯಿಯ ಹೆಸರಲ್ಲಿ ಪೂಜಿಸುವ ಸಂಸ್ಕಾರ ಆದಿಕಾಲದಿಂದಲೂ ಇದೆ.
ಕೇಂದ್ರ ಬಿಜೆಪಿ ಸರ್ಕಾರ ಮಹಿಳೆಯರ ಉನ್ನತಿ, ಸಬಲೀಕರಣದ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶದ ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತರನ್ನಾಗಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ದೇಶದ 2.75 ಕೋಟಿ ಮಹಿಳಾ ಫಲಾನುಭವಿಗಳಿಗೆ ಮನೆಗಳನ್ನು ಒದಗಿಸಿದೆ. ಮುದ್ರಾ ಯೋಜನೆ ಅಡಿಯಲ್ಲಿ ಸ್ವ ಉದ್ಯೋಗ ಕೈಗೊಳ್ಳುವ ಮಹಿಳೆಯರಿಗೆ ಸುಲಭ ಸಾಲದ ನೆರವು, ಭೇಟಿ ಬಚಾವೋ ಭೇಟಿ ಪಡಾವೋ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ ಹೀಗೆ ಹಲವು ಯೋಜನೆಗಳ ಮೂಲಕ ಮಹಿಳೆಯರನ್ನು ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿಸುವ ಶ್ಲಾಘನೀಯ ಕಾರ್ಯವನ್ನು ಕೈಗೊಂಡಿದ್ದಾರೆ. ಮಹಿಳೆಯರು ಕೇವಲ ಗೃಹಿಣಿಯರಲ್ಲ, ಅವರು ರಾಷ್ಟ್ರನಿರ್ಮಾಣಕಾರರು ಎಂದು ಪ್ರಧಾನಿ ನರೇಂದ್ರ ಮೋದಿ ಯವರು ಪದೇ ಪದೇ ಒತ್ತಿ ಹೇಳುತ್ತಿರುವುದು ಮಹಿಳೆಯರ ಉನ್ನತಿಯ ಬಗ್ಗೆ ಅವರು ಹೊಂದಿರುವ ಕಾಳಜಿಯನ್ನು ತೋರಿಸುತ್ತದೆ. ಬಿಎಸ್ ಯಡಿಯೂರಪ್ಪ ಅವರು ತಮ್ಮ ಅಧಿಕಾರಾವಧಿಯಲ್ಲಿ ಮಹಿಳಾ ಕಲ್ಯಾಣ ಕೇಂದ್ರಿತವಾದ ಹಲವು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಮಹಿಳೆಯರ ಉನ್ನತಿಗೆ ಶ್ರಮಿಸಿದ್ದರು. ಮೊದಲ ಬಾರಿಗೆ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಪ್ರತ್ಯೇಕ ಆಯವ್ಯಯ ಮಂಡಿಸಿರುವ ಖ್ಯಾತಿಗೆ ಬಿಎಸ್ ವೈ ಭಾಜನರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಹಲವು ಮಹಿಳಾ ಮುಖಂಡರು ಭಾರತದಲ್ಲಿ ಮಹಿಳೆಯರಿಗೆ ನೀಡಿರುವ ಸ್ಥಾನಮಾನ, ಗೌರವ ಆಧುನಿಕ ಮಹಿಳೆಯರು ಸಾಗಬೇಕಿರುವ ಪ್ರಗತಿಯ ಹಾದಿ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಲವು ಮಹಿಳಾ ಸಾಧಕಿಯರನ್ನು ಸನ್ಮಾನಿಸಿ ಗೌರವಿಸಲಾಯಿತು , ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಮಹಿಳೆಯರಿಗೆ ಬಾಗಿಣದ ಉಡುಗೊರೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ವಿಲ್ಸನ್ ರೆಡ್ಡಿ, ರಮೇಶ್, ಚಂದ್ರಶೇಖರ್ ರೆಡ್ಡಿ ಗೋಪಿನಾಥ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂರ್ಣಿಮಾ, ಕೆಂಪಾಪುರ ವಾರ್ಡ್ ಅಧ್ಯಕ್ಷೆ ಉಷಾ, ಮನೋಹರ್ ಪಟೇಲ್, ಪಟೇಲ್, ಹೇಮಂತ್ ಕುಮಾರ್, ಪ್ರಭಾಕರ್ ಸೇರಿದಂತೆ ಇನ್ನಿತರ ಗಣ್ಯರಿದ್ದರು.
