ಯೋಜನೆಯ ಸದುಪಯೋಗಕ್ಕೆ ಸತೀಶ್ ಕಡತನಮಲೆ ಸಲಹೆ :








ಬಮೂಲ್ ಗುಂಪು ರಾಸು ವಿಮೆ ಯೋಜನೆ’ಗೆ ಚಾಲನೆ :
ಯೋಜನೆಯ ಸದುಪಯೋಗಕ್ಕೆ ಸತೀಶ್ ಕಡತನಮಲೆ ಸಲಹೆ :
ಯಲಹಂಕ : ಬೆಂಗಳೂರು ಸಹಕಾರ ಹಾಲು ಒಕ್ಕೂಟ(ಬಮೂಲ್)ದಿಂದ ನೂತನವಾಗಿ ಆರಂಭಿಸಿರುವ ಗುಂಪು ರಾಸು ವಿಮೆ ಯೋಜನೆಗೆ ಯಲಹಂಕ ಕ್ಷೇತ್ರದ ಹನಿಯೂರು ಗ್ರಾಮದಲ್ಲಿ ಗೋಪೂಜೆ ಮಾಡುವ ಮೂಲಕ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸತೀಶ್ ಕಡತನಮಲೆ ಗುರುವಾರ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ ‘ಬಮೂಲ್ ವತಿಯಿಂದ ನೀಡುವ ಈ ಯೋಜನೆಯಲ್ಲಿ ವಿಮೆಯ ಕಂತಿನಲ್ಲಿ ಶೇಕಡಾ 50% ರಷ್ಟು ರಿಯಾಯಿತಿ ನೀಡಲಾಗುವುದು. ಪ್ರತಿ ರಾಸುಗಳಿಗೆ ಅವುಗಳ ವಯೋಮಾನ, ಆರೋಗ್ಯದ ಗುಣಮಟ್ಟ ಮತ್ತು ಇನ್ನಿತರ ಅಂಶಗಳಿಗೆ ಅನುಗುಣವಾಗಿ ಗರಿಷ್ಠ 1.20 ಲಕ್ಷ ರು.ವರೆಗೆ ವಿಮೆ ಹಣ ನೀಡಲಾಗುವುದು. 2026 27ನೇ ಸಾಲಿನಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ವ್ಯಾಪ್ತಿಯ 35 ಲಕ್ಷ ರಾಸುಗಳಿಗೆ ಗುಂಪು ರಾಸು ವಿಮೆ ಮಾಡಿಸುವ ಗುರಿಯನ್ನು ಒಕ್ಕೂಟ ಹೊಂದಿದ್ದು, ಈ ಹಿಂದೆ ಖಾಸಗಿ ವಿಮಾ ಕಂಪನಿಗಳ ಮೂಲಕ ರಾಸುಗಳಿಗೆ ವಿಮೆ ಮಾಡಿಸಲಾಗುತ್ತಿತ್ತು, ಪ್ರಸಕ್ತ ಸಾಲಿನಿಂದ ಬೆಂಗಳೂರು ಸಹಕಾರ ಹಾಲು ಒಕ್ಕೂಟದಿಂದ ನೇರವಾಗಿ ರಾಸುಗಳಿಗೆ ವಿಮೆ ಮಾಡಿಸುವ ಸದವಕಾಶ ಕಲ್ಪಿಸಲಾಗಿದೆ. ಹಾಲು ಉತ್ಪಾದಕ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೆ ವೇಳೆ ಹಾಲು ಉತ್ಪಾದಕ ಸದಸ್ಯರ ವೈದ್ಯಕೀಯ ವೆಚ್ಚದ ಮರುಪಾವತಿ ಚೆಕ್ ವಿತರಣೆ ಮಾಡಿದರು ಹಾಗೂ ರೈತರ ಜೊತೆ ರಾಸು ವಿಮೆಯ ಮಹತ್ವ ಕುರಿತು ನಿರ್ದೇಶಕ ಸತೀಶ್ ಕಡತನಮಲೆ ಚರ್ಚಿಸಿದರು.
ಇದೇ ಸಂದರ್ಭದಲ್ಲಿ ರಾಜಾನುಕುಂಟೆ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಪ್ರಸನ್ನ ವಿ.ಪಿ., ಪಶು ವೈದ್ಯರಾದ ಡಾ.ಶ್ರೀಲಕ್ಷ್ಮಿ, ಡಾ.ಹರೀಶ್, ವಿಸ್ತರಣಾ ಧಿಕಾರಿಗಳಾದ ನಾಗರಾಜಪ್ಪ, ಪ್ರಭು, ಅಕ್ಷಯ್, ರಮೇಶ್, ಅನಿಲ್, ಹನಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಆಡಳಿತ ಮಂಡಳಿಯ ನಿರ್ದೇಶಕರು, ಅಕ್ಕಪಕ್ಕದ ಗ್ರಾಮಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರು ಸೇರಿದಂತೆ ಗ್ರಾಮಸ್ಥರಿದ್ದರು.
