

ಬಿಜೆಪಿ ಪಕ್ಷದಿಂದ ಸತೀಶ್ ಕಡತನಮಲೆ ಉಚ್ಛಾಟನೆಗೆ ಕಾಂಗ್ರೆಸ್, ಬಿಜೆಪಿ ಮುಖಂಡರ ಒತ್ತಾಯ :
ಪ್ರತ್ಯೇಕ ಪತ್ರಿಕಾಘೋಷ್ಠಿ ಮೂಲಕ ಉಭಯ ಪಕ್ಷಗಳ ಮುಖಂಡರ ಆಗ್ರಹ :
ಯಲಹಂಕ : ಕಡತನಮಲೆ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಿದ ಕಾರಣಕ್ಕಾಗಿ ನಗರದ ಮಲ್ಲೇಶ್ವರಂ ನಲ್ಲಿರುವ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಗೆ ನುಗ್ಗಿ ದಾಂದಲೆ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಬಮೂಲ್ ನಿರ್ದೇಶಕ ಸತೀಶ್ ಕಡತನಮಲೆ ಅವರನ್ನು ಬಿಜೆಪಿ ಪಕ್ಷದಿಂದ ಕೂಡಲೇ ಉಚ್ಛಾಟಿಸಬೇಕು ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಉಭಯ ಪಕ್ಷಗಳ ಮುಖಂಡರು ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿ ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡ ಕೇಶವ ರಾಜಣ್ಣ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿ, ಉದ್ದೇಶಿಸಿ ಬಮುಲ್ ಮಾಜಿ ನಿರ್ದೇಶಕ ಕೇಶವಮೂರ್ತಿ ಮಾತನಾಡಿ ‘ಸಂವಿಧಾನಾತ್ಮಕ ಕಾನೂನಿನ ಅರಿವಿದ್ದು ಕೂಡ ಕಾನೂನನ್ನು ಗಾಳಿಗೆ ತೂರಿ ಸರ್ಕಾರಿ ಕಚೇರಿಗೆ ನುಗ್ಗಿ ಉದ್ಯೋಗಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಯತ್ನ ನಡೆಸಿರುವ ಸತೀಶ್ ಕಡತನಮಲೆ ಅವರ ನಡೆ ಅಕ್ಷಮ್ಯವಾದುದು, ಅವರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಹಾಗೆಯೇ ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ತನ್ನದೇ ಪಕ್ಷದ ಮುಖಂಡನೊಬ್ಬ ಸರ್ಕಾರಿ ಕಚೇರಿಗೆ ನುಗ್ಗಿ ದಾಂದಲೆ ನಡೆಸಿರುವುದು ತಿಳಿದಿದ್ದರೂ ಸಹ ಮೌನ ವಹಿಸಿರುವುದು ಶೋಚನೀಯ ಸಂಗತಿ, ಬಿಜೆಪಿ ಪಕ್ಷಕ್ಕೆ, ಬಿಜೆಪಿ ಮುಖಂಡರಿಗೆ ನಿಜವಾದ ನೈತಿಕತೆಯೇ ಇದ್ದರೆ ಕೂಡಲೇ ಸತೀಶ್ ಕಡತನಮಲೆ ಅವರ ವಿರುದ್ಧ ಶಿಸ್ತುಕ್ರಮ ಕೈಗೊಂಡು ಪಕ್ಷದಿಂದ ಉಚ್ಛಾಟಿಸಬೇಕು ಇಲ್ಲದಿದ್ದರೆ ನೈತಿಕತೆ ಎಂಬುದು ಪ್ರಶ್ನಾರ್ಥಕವಾಗುತ್ತದೆ ಎಂದು ಬಿಜೆಪಿ ಮುಖಂಡರ ನಡೆ ಕುರಿತು ಸಂಶಯ ವ್ಯಕ್ತಪಡಿಸಿದರು.
ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಎಂ.ಜಿ. ರಾಮಮೂರ್ತಿ ಅವರ ನೇತೃತ್ವದಲ್ಲಿ ಯಲಹಂಕದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಹಿರಿಯ ಬಿಜೆಪಿ ಮುಖಂಡ ದಿಬ್ಬೂರು ಜಯಣ್ಣ ಮಾತನಾಡಿ ‘ನಿರ್ದೇಶಕ ಸ್ಥಾನ ರದ್ದು ಆದೇಶದ ಹಿನ್ನೆಲೆಯಲ್ಲಿ ನಗರದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯಲ್ಲಿ ಸತೀಶ್ ಕಡತನಮಲೆ ಅವರು ನಡೆಸಿದ್ದಾರೆ ಎನ್ನಲಾದ ದಾಂದಲೆ, ಅವಾಂತರಗಳಿಗೆ ಸತೀಶ್ ಕಡತನಮಲೆ ಅವರು ನೇರ ಹೊಣೆಗಾರರೆ ಹೊರತು ಪಕ್ಷಕ್ಕೂ, ಸದರಿ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಬಿಜೆಪಿ ಪಕ್ಷ ಶಿಸ್ತಿಗೆ ಹೆಸರಾದ ಪಕ್ಷವಾಗಿದ್ದು, ಯಾವುದೇ ಮುಖಂಡ ಅಥವಾ ಕಾರ್ಯಕರ್ತನ ಈ ರೀತಿಯ ನಡೆಗೆ ಪ್ರೋತ್ಸಾಹಿಸುವುದಿಲ್ಲ. ಇಂತಹ ನಡೆಗಳು ಮತ್ತು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗುವವರ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ಪಕ್ಷದಲ್ಲಿ ಪ್ರತ್ಯೇಕ ಶಿಸ್ತು ಸಮಿತಿ ಇದೆ. ಸತೀಶ್ ಕಡತನಮಲೆಯವರು ಈಗಾಗಲೇ ಬಿಜೆಪಿ ಪಕ್ಷದಿಂದ ಒಂದು ಹೆಜ್ಜೆ ಹೊರಗಿಟ್ಟಿದ್ದು, ತಮ್ಮದೇ ಆದ ಪಟಾಲಂ ಕಟ್ಟಿಕೊಂಡು ಪಕ್ಷ ವಿರೋಧಿ ನಡೆಯಲ್ಲಿ ತೊಡಗಿರುವುದು ಕಂಡು ಬರುತ್ತಿದ್ದು, ಈ ಕುರಿತು ಬಿಜೆಪಿ ಶಿಸ್ತು ಸಮಿತಿಗೆ ಮಾಹಿತಿ ನೀಡಲಾಗಿದ್ದು, ಶೀಘ್ರದಲ್ಲಿ ಸತೀಶ್ ಕಡತನಮಲೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದರ ಜೊತೆಗೆ ಪಕ್ಷದಿಂದ ಉಚ್ಛಾಟಿಸುವ ಕಾರ್ಯವು ಸಹ ಆಗಲಿದೆ. ಆದರೆ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯಲ್ಲಿ ಸತೀಶ್ ಕಡತನಮಲೆ ನಡೆಸಿರುವ ಆವಾಂತರಕ್ಕೆ ಬಿಜೆಪಿ ಪಕ್ಷವನ್ನಾಗಲಿ ಬಿಜೆಪಿ ಮುಖಂಡರನ್ನಾಗಲಿ ಮಧ್ಯ ಎಳೆ ತರುವುದು ಸೂಕ್ತವಲ್ಲ, ಇದು ಸತೀಶ್ ಕಡತನಮಲೆ ಅವರ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದ್ದು, ಇದರಲ್ಲಿ ಪಕ್ಷವನ್ನಾಗಲಿ, ಪಕ್ಷದ ಮುಖಂಡರನ್ನಾಗಲಿ ಹೊಣೆಗಾರರನ್ನಾಗಿ ಮಾಡುವುದು ಸೂಕ್ತವಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಎಂ.ಜಿ.ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿ ವಿಶ್ವನಾಥಪುರ ಮಂಜುನಾಥ್, ಹಿರಿಯ ಬಿಜೆಪಿ ಮುಖಂಡ ಎಸ್. ಎನ್.ರಾಜಣ್ಣ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಚೊಕ್ಕನಹಳ್ಳಿ ವೆಂಕಟೇಶ್, , ವಿ.ಪವನ್ ಕುಮಾರ್, ಅವಲಹಳ್ಳಿ ಕೇಶವಮೂರ್ತಿ, ಕೆ.ಎಮ್.ಮುರಳಿ, ಬಿ.ಶ್ರೀನಿವಾಸಯ್ಯ, ವಸಂತ್ ಅರಕೆರೆ, ಹೆಚ್ಎಸ್ ಕಿರಣ್, ಬೃಂದಾ ವೀರೇಶ್ ಸೇರಿದಂತೆ ಇನ್ನಿತರರಿದ್ದರು.
