ಮದ್ಯದಂಗಡಿ ಸ್ಥಳಾಂತರಕ್ಕೆ ಒತ್ತಾಯ : ದಸಂಸ ಸಮತಾವಾದ ಕಾರ್ಯಕರ್ತರಿಂದ ಪ್ರತಿಭಟನೆ

ಯಲಹಂಕ : ಯಲಹಂಕ ಉಪನಗರದ ಕೆಎಚ್‌ಬಿ ‘ಎ’ ಸೆಕ್ಟರ್ ಪ್ರದೇಶದಲ್ಲಿ ಆರಂಭಿಸಿದ್ದ ಮದ್ಯದಂಗಡಿಯನ್ನು ಕೂಡಲೇ ಸ್ಥಳಾಂತರಗೊಳಿಸಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ(ಸಮತಾವಾದ) ಹಾಗೂ ‘ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ವೇದಿಕೆ’ಯ ನೂರಾರು ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ದಲಿತ ಸಂಘರ್ಷ ಸಮಿತಿ(ಸಮತಾವಾದ) ರಾಜ್ಯ ಘಟಕದ ಅಧ್ಯಕ್ಷ ಎಚ್‌.ಮಾರಪ್ಪ ಮಾತನಾಡಿ ‘ಮದ್ಯದಂಗಡಿ ಇರುವ ಸ್ಥಳದ ಸುತ್ತಮುತ್ತ ಜನ ವಸತಿ ಪ್ರದೇಶಗಳಿದ್ದು, ಸಮೀಪದ ಅಂಬೇಡ್ಕರ್ ನಗರದಲ್ಲಿ ಪರಿಶಿಷ್ಟ ಜಾತಿ-ವರ್ಗದ ಸುಮಾರು 400ಕ್ಕೂ ಹೆಚ್ಚು ಕುಟುಂಬಟಗಳು ವಾಸಿಸುತ್ತಿವೆ. ಅಲ್ಲದೆ ಹತ್ತಿರದಲ್ಲೇ ಶಾಲೆ-ಕಾಲೇಜುಗಳು,ದೇವಸ್ಥಾನಗಳು ಹಾಗೂ ಆಸ್ಪತ್ರೆಗಳಿದ್ದರೂ ಸಹ ಅಬಕಾರಿ ಇಲಾಖೆ ಪರಾಮರ್ಶಿಸದೆ, ಮದ್ಯದಂಗಡಿಗೆ ಪರವಾನಗಿ ನೀಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮದ್ಯದಂಗಡಿ ಆರಂಭವಾದ ಬಳಿಕ ಕುಡುಕರು ಅಂಗಡಿ ಸುತ್ತಮುತ್ತ ಹಾಗೂ ರಸ್ತೆಯಲ್ಲೇ ವಾಹನಗಳಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದು, ಇದರಿಂದ ರಾತ್ರಿ ವೇಳೆಯಲ್ಲಿ ವಿದ್ಯಾರ್ಥಿಗಳು ಮತ್ತು ಮಹಿಳೆಯರು ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ ತಿಂಗಳಲ್ಲೇ ಅಬಕಾರಿ ಇಲಾಖೆಯ ಉಪ ಆಯುಕ್ತರಿಗೆ ಮನವಿ ಸಲ್ಲಿಸಿದ್ದರೂ, ಸಮಸ್ಯೆ ಪರಿಹಾರವಾಗಿರಲಿಲ್ಲ.

ಈ ಮಧ್ಯೆ ಅಂಗಡಿ ಮಾಲೀಕರು ನ್ಯಾಯಾಲಯದ ಮೊರೆ ಹೋಗಿ ಮಧ್ಯಂತರ ತಡೆಯಾಜ್ಞೆ ತಂದಿದ್ದರು. ನಂತರ ಸಂಘಟನೆಗಳು ಸಹ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದವು, ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಏಪ್ರಿಲ್‌ 28ರಂದು ಮದ್ಯದಂಗಡಿಯನ್ನು ತಕ್ಷಣವೇ ಸ್ಥಳಾಂತರಗೊಳಿಸಲು ಆದೇಶ ನೀಡಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಕ್ರಮ ಕೈಗೊಂಡು ಮದ್ಯದಂಗಡಿಯನ್ನು ಸೀಜ್‌ ಮಾಡಬೇಕೆಂದು ಒತ್ತಾಯಿಸಿದರು.

ನಂತರ ಸ್ಥಳಕ್ಕೆ ಆಗಮಿಸಿದ ಅಬಕಾರಿ ಇಲಾಖೆಯ ಅಧಿಕಾರಿಗಳು ಸ್ಥಳ ಮಹಜರು ನಡೆಸಿ, ಮದ್ಯದಂಗಡಿಗೆ ಬೀಗ ಮುದ್ರೆ ಹಾಕಿ ಸೀಜ್‌ ಮಾಡಿದರು. ಪ್ರತಿಭಟನೆಯ ಫಲಶೃತಿಯಿಂದ ತೃಪ್ತಗೊಂಡ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ(ಸಮತಾವಾದ) ಪದಾಧಿಕಾರಿಗಳಾದ ವೆಂಕಟಾಚಲಪತಿ, ನಾಗಣ್ಣ, ಜನಾರ್ದನ್‌, ಎಚ್‌.ಭೀಮರಾಜ್‌, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ವೇದಿಕೆಯ ಪ್ರಧಾನ ಕಾರ್ಯದರ್ಶಿ ರಮೇ ಶ್‌ ಆರ್‌., ಪದಾಧಿಕಾರಿಗಳಾದ ಸಂದೀಪ್‌ ಬಿ., ಜಗದೀಶ್‌ಗೌಡ, ನಾರಾಯಣಸ್ವಾಮಿ ಸೇರಿದಂತೆ ಸಂಘಟನೆಯ ನೂರಾರು ಕಾರ್ಯಕರ್ತರಿದ್ದರು.

Leave a Reply

Your email address will not be published. Required fields are marked *