ವ್ಯಸನಮುಕ್ತ ಯುವಶಕ್ತಿ ನಿರ್ಮಾಣಕ್ಕೆ ಕ್ರೀಡೆಗಳು ಸಹಕಾರಿ : ಆರ್.ಸುರೇಶ್
ಜಾಲ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ :
ಬ್ಯಾಟರಾಯನಪುರ : ವ್ಯಸನ ಮುಕ್ತ ಯುವಶಕ್ತಿ ನಿರ್ಮಾಣಕ್ಕೆ ಕ್ರೀಡೆಗಳು ಸಹಕಾರಿಯಾಗಬಲ್ಲವು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಕಾರ್ಯದರ್ಶಿ, ಜಾಲ ಪ್ರೀಮಿಯರ್ ಲೀಗ್(ಜೆ.ಪಿ.ಎಲ್.)ನ ಸಂಸ್ಥಾಪಕರಾದ ಆರ್ ಸುರೇಶ್ ಅಭಿಪ್ರಾಯ ಪಟ್ಟರು.
11 ಸ್ಟ್ರೈಕರ್ಸ್ ವತಿಯಿಂದ ಬ್ಯಾಟರಾಯನಪುರ ಕ್ಷೇತ್ರದ ಜಾಲ ಹೋಬಳಿಯ ಸಾತನೂರು ಗ್ರಾಮದ ಈಗಲ್ಟನ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಜಾಲ ಪ್ರೀಮಿಯರ್ ಲೀಗ್ ಸೀಸನ್-4 (ಜೆ.ಪಿ.ಎಲ್. ಸೀಸನ್-4) ಕ್ರಿಕೆಟ್ ಪಂದ್ಯಾವಳಿಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು ‘ ಬಾಲ ಗಂಗಾಧರನಾಥ ಸ್ವಾಮೀಜಿ ಅವರ ಸ್ಮರಣೆಯಲ್ಲಿ ಕಳೆದ 15 ವರ್ಷಗಳಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಾ ಬಂದಿದ್ದು, ಸ್ಥಳೀಯ ಯುವಕರ ಒತ್ತಾಸೆಯ ಮೇರೆಗೆ ಅದನ್ನು ಜಾಲ ಪ್ರೀಮಿಯರ್ ಲೀಗ್ ಎಂದು ಹೆಸರು ಬದಲಾವಣೆ ಮಾಡಿ ಕಳೆದ ನಾಲ್ಕು ವರ್ಷಗಳಿಂದ ಆಯೋಜಿಸಲಾಗುತ್ತಿದೆ. ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ 11 ಸ್ಟ್ರೈಕರ್ಸ್, ರಾಮಧೂತ ಕ್ರಿಕೆಟರ್ಸ್, ಫಿಟ್ ಬಾಕ್ಸ್, ರಾಯಲ್ ಸ್ಪೋರ್ಟ್ಸ್ ಕ್ಲಬ್, ಮೈಟಿ ವೖಕಿಂಗ್ಸ್, ಎಸ್.ಎಮ್. ಸ್ಮ್ಯಾಶರ್ಸ್, ಏಕಲವ್ಯ, ಪಿ.ಪಿ. ಬಾಯ್ಸ್, ಸಾತನೂರ್ ವಿನಾಯಕ ಬಾಯ್ಸ್, ಎನ್.ರಾಯಲ್ ಲಯನ್ಸ್, ಟೀಮ್ ಇಮ್ಮಡಿ ಪುಲಿಕೇಶಿ, ಎಂ.ಎಸ್.ಬಾಯ್ಸ್ ಎಂಬ 12 ತಂಡಗಳಿದ್ದು, ಮೇ 9, 10, ಮೇ 15, 16 ಮತ್ತು17 ಒಟ್ಟು ಐದು ದಿನಗಳ ಕಾಲ ನಡೆಯಲಿದೆ. ಪಂದ್ಯಾವಳಿಯ ಪ್ರಥಮ ವಿಜೇತರಿಗೆ 2,22,222,ರು. ನಗದು ಮತ್ತು ಟ್ರೋಫಿ, ಮೊದಲ ರನ್ನರ್ ಅಪ್ ತಂಡಕ್ಕೆ 1,11,111 ರು. ನಗದು, ಎರಡನೇ ರನ್ನರ್ ಅಪ್ ತಂಡಕ್ಕೆ 5,55,555 ರು. ನಗದು ಬಹುಮಾನ ನೀಡಿ ಗೌರವಿಸಲಾಗುವುದು. ಇದು ಜಲ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ನಾಲ್ಕನೇ ಆವೃತ್ತಿಯ ಕ್ರಿಕೆಟ್ ಪಂದ್ಯಾವಳಿಯಾಗಿದ್ದು ಅತ್ಯಂತ ಯಶಸ್ವಿಯಾಗಿ ಸಾಗುತ್ತಿರುವುದು ಸಂತೋಷ ಉಂಟುಮಾಡುವ ಸಂಗತಿ. ಯುವ ಜನತೆ ವ್ಯಸನ ಮುಕ್ತರಾಗಿ, ಸಬಲರಾಗಿ ಸಮಾಜಕ್ಕೆ ಸತ್ ಪ್ರಜೆಗಳಾಗಿ ಕೊಡುಗೆ ನೀಡುವಂತಾಗಬೇಕು ಎಂಬ ಮಹತ್ವದ ಉದ್ದೇಶವೇ ಈ ಪಂದ್ಯಾವಳಿಯ ಆಯೋಜನೆಗೆ ಮೂಲ ಕಾರಣವಾಗಿದೆ. ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಸದೃಢತೆಗೆ ಸಹಕಾರಿ ಆಗುವುದರ ಜೊತೆಗೆ ವ್ಯಸನ ಮುಕ್ತ ಯುವಶಕ್ತಿ ನಿರ್ಮಾಣದ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತವೆ, ಕ್ರೀಡೆಯಲ್ಲಿ ಗೆಲುವಿಗಿಂತ ಉತ್ಸಾಹದ ಪಾಲ್ಗೊಳ್ಳುವಿಕೆ ಬಹು ಮುಖ್ಯ ಈ ದಿಶೆಯಲ್ಲಿ ಯುವಕರು ಈ ಪಂದ್ಯಾವಳಿಯ ಸದುಪಯೋಗ ಪಡೆದುಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಸುಬ್ರಮಣಿ, ರಾಜಣ್ಣ, ಸುನಿಲ್ ಗೌಡ, ರಾಜೇಶ್(ಸ್ನೇಕ್), ದಿವಾಕರ್, ಶ್ರೀನಿವಾಸ್, ರಮೇಶ್, ಲೋಕೇಶ್, ನಾಸಿಫ್ ಸೇರಿದಂತೆ ವಿವಿಧ ಕ್ರಿಕೆಟ್ ತಂಡಗಳ ಆಟಗಾರರಿದ್ದರು.

Leave a Reply

Your email address will not be published. Required fields are marked *