

ಆರತಿ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ 300ಕ್ಕೂ ಹೆಚ್ಚು ಸಸಿಗಳನ್ನು ವಿತರಿಸಿ ಮಾದರಿಯಾದ ಬಾಲಮ್ಮ ಲಕ್ಷ್ಮಣ್ ಕುಟುಂಬ
ಬೆಂಗಳೂರು ಯಲಹಂಕ ಸುದ್ದಿ ಸಾಮಾನ್ಯವಾಗಿ ಸಂಭ್ರಮದ ಕಾರ್ಯಕ್ರಮಗಳಲ್ಲಿ ಉಡುಗೊರೆಗಳನ್ನು ನೀಡುವುದು ಇನ್ನಿತರೆ ವಾಡಿಕೆ. ಆದರೆ ಸೋನಪ್ಪನಹಳ್ಳಿಯ ಶ್ರೀಮತಿ ಬಾಲಮ್ಮ ಲಕ್ಷ್ಮಣ್ ಅವರು ತಮ್ಮ ಮೊಮ್ಮಗಳ ಆರತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಪರಿಸರ ಸಂರಕ್ಷಣೆಯ ಹೊಸ ಹಾದಿ ತೋರಿಸಿದ್ದಾರೆ.
ಸೋನಪ್ಪನಹಳ್ಳಿ ಗ್ರಾಮದ ಶ್ರೀಮತಿ ಬಾಲಮ್ಮ ಲಕ್ಷ್ಮಣ್ ಮತ್ತು ರಾಜ್ಯ ದಲಿತ ಸಿಂಹ ಘರ್ಜನೆ ಸಮಿತಿಯ ಸಂಸ್ಥಾಪಕ ರಾಜ್ಯ ಅಧ್ಯಕ್ಷರಾದ ಹಠವಾದಿ ಜಿ. ಲಕ್ಷ್ಮಣ್ ಅವರ ಮಗಳಾದ ನಾಗಮಣಿ ಅವರ ಪುತ್ರಿ ಶೆಹೆರಾನ್ ರೋಜ್ ಅವರ ಆರತಿ ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ಸುಮಾರು 300ಕ್ಕೂ ಹೆಚ್ಚು ಗಿಡಗಳನ್ನು ವಿತರಿಸಲಾಯಿತು.
ಪರಿಸರ ಉಳಿವಿಗೆ ಸಣ್ಣದೊಂದು ಪ್ರಯತ್ನ:
ಬೆಂಗಳೂರು ಉಪ ವಿಭಾಗ ಮಟ್ಟದ ಅಟ್ರಾ ಸಿಟಿ ಕಮಿಟಿ ಸದಸ್ಯರಾದ ಎಸ್.ಎಂ. ಶ್ರೀನಿವಾಸ್ ಹಾಗೂ ಕುಟುಂಬದವರು ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, “ಪರಿಸರ ಇಂದು ನಾಶವಾಗುತ್ತಿದೆ, ಮುಂದಿನ ಪೀಳಿಗೆಗೆ ಶುದ್ಧ ಗಾಳಿ ಮತ್ತು ನೆರಳು ನೀಡಲು ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಪೋಷಿಸಬೇಕು. ಆ ನಿಟ್ಟಿನಲ್ಲಿ ಮನೆಯ ಶುಭ ಸಮಾರಂಭದಲ್ಲಿ ಗಿಡ ಹಂಚುತ್ತಿರುವುದು ಸಂತಸದ ವಿಷಯ,” ಎಂದರು.
ಹಸಿರೇ ಉಸಿರು ಟ್ರಸ್ಟ್ ಸಹಯೋಗ:
ಈ ಕಾರ್ಯಕ್ರಮಕ್ಕೆ ‘ಹಸಿರೇ ಉಸಿರು ಟ್ರಸ್ಟ್’ ಬೆಟ್ಟಹಲಸೂರು ಇವರು ಸಸಿಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಸಹಕರಿಸಿದ್ದಾರೆ. ಪರಿಸರದ ಉಳಿವಿನ ಈ ಮಹತ್ಕಾರ್ಯಕ್ಕೆ ಕೈಜೋಡಿಸಿದ ಲಕ್ಷ್ಮಣ್ ಎಲ್. ಹಾಗೂ ಕುಟುಂಬದವರಿಗೆ ಆಯೋಜಕರು ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.
ವಿಶ್ವ ಕನ್ನಡಿಗ ಹಸಿರೇ ಉಸಿರು ಟ್ರಸ್ಟ್‌ನ ಸಂಸ್ಥಾಪಕ ರಾಜ್ಯ ಅಧ್ಯಕ್ಷರು ಹಾಗೂ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಡಾ. ಶ್ರೀನಿವಾಸ್ ಮೂರ್ತಿ ಅವರ ಮಾರ್ಗದರ್ಶನದಲ್ಲಿ ಈ ಪರಿಸರ ಸ್ನೇಹಿ ಅಭಿಯಾನ ಯಶಸ್ವಿಯಾಗಿ ಜರುಗಿತು.
ಈ ವಿಭಿನ್ನ ಆಲೋಚನೆಗೆ ಗ್ರಾಮಸ್ಥರಿಂದ ಹಾಗೂ ಅತಿಥಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, “ಪರಿಸರದ ಉಳಿವಿಗಾಗಿ ನಮ್ಮ ಪ್ರಯತ್ನ” ಎಂಬ ಸಂದೇಶ ಎಲ್ಲೆಡೆ ಪಸರಿಸಿತು. ಈ ಸಂದರ್ಭದಲ್ಲಿ ಅನೇಕ ಗಣ್ಯರು ಗ್ರಾಮಸ್ಥರು ಭಾಗವಹಿಸಿದ್ದರು.
