




ರಾಜಾನುಕುಂಟೆ ಶಿಬಿರ ಕಚೇರಿ ಆವರಣದಲ್ಲಿ ಬೃಹತ್ ಕಾರ್ಯಕ್ರಮ :
ಯಲಹಂಕ : ಬೆಂಗಳೂರು ಸಹಕಾರ ಹಾಲು ಒಕ್ಕೂಟ, ಬಮೂಲ್ ಕಲ್ಯಾಣ ಟ್ರಸ್ಟ್ ಬೆಂಗಳೂರು ಇವರ ಸಹಯೋಗದಲ್ಲಿ ಯಲಹಂಕ ಕ್ಷೇತ್ರದ ರಾಜನಕುಂಟೆಯಲ್ಲಿರುವ ಬೆಂಗಳೂರು ಉತ್ತರ ಶಿಬಿರ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ಮತಕ್ಷೇತ್ರ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ಮತ್ತು ಸಿಬ್ಬಂದಿಗಳ ಸುಮಾರು 500 ಮಕ್ಕಳಿಗೆ ಬೆಂಗಳೂರು ಸಹಕಾರ ಹಾಲು ಒಕ್ಕೂಟ(ಬಮೂಲ್)ದ ಅಧ್ಯಕ್ಷರಾದ ಡಿ.ಕೆ.ಸುರೇಶ್ ಅವರು ಪ್ರತಿಭಾ ಪುರಸ್ಕಾರದ ಡಿ.ಡಿ.ಗಳನ್ನು ವಿತರಿಸಲಿದ್ದಾರೆ ಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟದ ನಿರ್ದೇಶಕ ಸತೀಶ್ ಕಡತನಮಲೆ ಅವರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿ ಮಾತನಾಡಿದ ನಿರ್ದೇಶಕ ಸತೀಶ್ ಕಡತನಮಲೆ ‘ ಇದೊಂದು ವಿಶೇಷ ಹಾಗೂ ವಿನೂತನ ರೀತಿಯ ಕಾರ್ಯಕ್ರಮವಾಗಿದ್ದು, ಸುಮಾರು ಮೂರು ಸಾವಿರಕ್ಕೂ ಹೆಚ್ಚು ಹಾಲು ಉತ್ಪಾದಕ ರೈತರು ಪಾಲ್ಗೊಳ್ಳುವ ನೀರಿಕ್ಷೆ ಇದೆ. ಕಾರ್ಯಕ್ರಮದಲ್ಲಿ ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡುವ ಹಾಲು ಉತ್ಪಾದಕರ ಮಕ್ಕಳಿಗೆ 1 ಲಕ್ಷ ರು., ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಪಡೆಯುವವರಿಗೆ 50 ಸಾವಿರ ರು., ಕೆಎಎಸ್ ಮತ್ತು ಐಎಎಸ್ ಪ್ರಾಥಮಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವವರಿಗೆ 75 ಸಾವಿರ ರು., ಸ್ನಾತಕೋತ್ತರ ಶಿಕ್ಷಣ ಪಡೆಯುವವರಿಗೆ 30 ಸಾವಿರ ರು., ಪದವಿ ಶಿಕ್ಷಣ ಪಡೆಯುವವರಿಗೆ 20 ಸಾವಿರ ಮತ್ತು 10 ಸಾವಿರ ರು. ಸೇರಿದಂತೆ ವಿವಿಧ ಕೋರ್ಸ್ ಗಳಲ್ಲಿ ಶಿಕ್ಷಣ ಪಡೆಯುವ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರ ಸುಮಾರು 500 ಮಕ್ಕಳಿಗೆ 2 ಸಾವಿರದಿಂದ 1 ಲಕ್ಷ ರು.ವರೆಗೆ ಪ್ರತಿಭಾ ಪುರಸ್ಕಾರದ ಡಿ.ಡಿ. ವಿತರಿಸಲಾಗುವುದು.
ಅಕಾಲಿಕ ಮರಣ ಹೊಂದಿರುವ ಹಾಲು ಉತ್ಪಾದಕರ ಕುಟುಂಬಗಳಿಗೆ 1 ಲಕ್ಷ ರು.ಗಳ ಸಹಾಯಧನ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾಲು ಉತ್ಪಾದಕರಿಗೆ 25 ಸಾವಿರ ರು. ಗಳ ವೈದ್ಯಕೀಯ ವೆಚ್ಚದ ಸಹಾಯಧನವನ್ನು ಸಹ ವಿತರಿಸಲಾಗುವುದು. ಕಾರ್ಯಕ್ರಮದಲ್ಲಿ ವಿಶೇಷವಾಗಿ 4 ಸಾವಿರ ಹಾಲು ಉತ್ಪಾದಕ ರೈತರಿಗೆ ವಿಶೇಷ ತಳಿಯ ಮೇವಿನ ಜೋಳದ 5 ಕೆ.ಜಿ. ಪ್ಯಾಕೆಟ್ ಗಳನ್ನು ವಿತರಣೆ ಮಾಡಲಾಗುವುದು.
ಕಾರ್ಯಕ್ರಮದಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷರಾದ ಡಿ.ಕೆ.ಸುರೇಶ್, ಸಂಸದರಾದ ಕೆ.ಸುಧಾಕರ್, ಯಲಹಂಕ ಶಾಸಕರಾದ ಎಸ್ ಆರ್ ವಿಶ್ವನಾಥ್ ಅವರು ಸೇರಿದಂತೆ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಉನ್ನತ ಅಧಿಕಾರಿಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಹಾಲು ಉತ್ಪಾದಕರ ರೈತರು ಪಾಲ್ಗೊಳ್ಳಲಿದ್ದು, ಕಾರ್ಯಕ್ರಮದಲ್ಲಿ ಸಹಕಾರ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿರುವ 8 ಜನ ಸಾಧಕರನ್ನು ವಿಶೇಷ ರೀತಿಯಲ್ಲಿ ಸನ್ಮಾನಿಸಿ ಗೌರವಿಸಲಾಗುವುದು, ಇದೊಂದು ರೈತ ಸ್ನೇಹಿ ಹಾಗೂ ಹಾಲು ಉತ್ಪಾದಕರ ಸ್ನೇಹಿ ವಿಶೇಷ ಕಾರ್ಯಕ್ರಮವಾಗಿದೆ ಎಂದು ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ರಾಜನಕುಂಟೆ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕರಾದ ಪ್ರಸನ್ನ ವಿ.ಪಿ., ಸಹಾಯಕ ವ್ಯವಸ್ಥಾಪಕ ಡಾ.ಹರೀಶ್, ಹಿರಿಯ ವಿಸ್ತರಣಾಧಿಕಾರಿಗಳಾದ ಸಚಿನ್ ದಾವಣಗೇರಿ, ಡಾ. ಶ್ರೀಲಕ್ಷ್ಮಿ, ಎಂ.ಆರ್.ನಾಗರಾಜ್, ಎನ್. ನಾಗರಾಜ್, ಪ್ರಭು, ದೇವರಾಜ್, ಅಕ್ಷಯ್ ಪಿಸೆ, ರಮೇಶ್, ವಸಂತ್ ಕುಮಾರ್, ಅನಿಲ್, ಸೌಮ್ಯ, ಹೇಮಂತ್ ರಾಜ್, ಶಿವಕುಮಾರ್, ಉಮೇಶ್, ನಳಿನ ಕುಮಾರಿ, ತಿರುಪತಿ ಲಕ್ಕುಂಡಿ, ಶಶಿಗೌಡ, ಮನೋಜ್ ಚೊಕ್ಕನಹಳ್ಳಿ ಸೇರಿದಂತೆ ಇನ್ನಿತರರಿದ್ದರು.
