
ರಾಷ್ಟ್ರಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಂಡ ಸರ್ಕಾರಿ ಶಾಲಾ ಬಾಲಕಿ :
8 ವರ್ಷದ ಪದ್ಮಾವತಿಗೆ ಎಐಟಿಎ ಅಂಡರ್-10 ಟೆನ್ನಿಸ್ ರಾಷ್ಟ್ರೀಯ ಪ್ರಶಸ್ತಿಯ ಗರಿ :
ಯಲಹಂಕ : ಯಲಹಂಕದ ವೆಂಕಟಾಲ ಗ್ರಾಮದ ಸರ್ಕಾರಿ ಶಾಲೆಯ ಬಾಲಕಿ 8 ವರ್ಷದ ಪದ್ಮಾವತಿ ಪ್ರತಿಷ್ಠಿತ ಎ.ಐ.ಟಿ.ಎ.(ಆಲ್ ಇಂಡಿಯಾ ಟೆನ್ನಿಸ್ ಅಸೋಸಿಯೇಷನ್)ನ ಅಂಡರ್-10 ವಿಭಾಗದ ರಾಷ್ಟ್ರೀಯ ಪ್ರಶಸ್ತಿ ಗೆಲ್ಲುವ ಅಪ್ರತಿಮ ಸಾಧನೆಗೆ ಭಾಜನಳಾಗಿದ್ದಾಳೆ.
ಅಮೋಘ ಸ್ಪೋರ್ಟ್ಸ್, ಅಖಿಲ ಭಾರತ ಟೆನ್ನಿಸ್ ಅಸೋಸಿಯೇಷನ್(ಎಐಟಿಎ), ಮತ್ತು ಕರ್ನಾಟಕ ರಾಜ್ಯ ಲಾನ್ ಟೆನ್ನಿಸ್ ಅಸೋಸಿಯೇಷನ್ (ಕೆಎಸ್‌ಎಲ್‌ಟಿಎ) ಸಹಯೋಗ ದಲ್ಲಿ ಬೆಂಗಳೂರಿನ ಫಾರ್ಚೂನ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಮೇ 15 ರಿಂದ 17 ರವರೆಗೆ ನಡೆದ ಪ್ರತಿಷ್ಠಿತ ಎಐಟಿಎ ರಾಷ್ಟ್ರ ಮಟ್ಟದ ಅಂಡರ್-10 ಟೆನ್ನಿಸ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗೆಲ್ಲುವ ಮೂಲಕ ತಾನೋದಿದ ಶಾಲೆ ಮತ್ತು ಪೋಷಕರಿಗೆ ಪದ್ಮಾವತಿ ಕೀರ್ತಿ ತಂದು ಕೊಟ್ಟಿದ್ದಾಳೆ.
ದೇಶದ ವಿವಿಧ ರಾಜ್ಯಗಳ ಪ್ರತಿಭಾನ್ವಿತ ಯುವ ಟೆನ್ನಿಸ್ ಆಟಗಾರರು ಭಾಗವಹಿಸಿದ್ದ ಈ ಪಂದ್ಯಾವಳಿಯಲ್ಲಿ ಪದ್ಮಾವತಿ ಅತ್ಯಂತ ಕಿರಿಯ ಆಟಗಾರ್ತಿ ಯಾಗಿದ್ದು, ಮಾತ್ರವಲ್ಲದೆ ಭಾರತೀಯ ಟೆನ್ನಿಸ್ ಕ್ರೀಡೆಯಲ್ಲಿ ಉದಯೋನ್ಮುಖ ಪ್ರತಿಭೆಯಾಗಿ ಹೊರಹೊಮ್ಮಿದ್ದಾಳೆ.
ಕ್ವಾರ್ಟರ್ ಫೈನಲ್ಸ್ ನಲ್ಲಿ ತಮಿಳುನಾಡಿನ ಅರ್ಚಿತಿ ಹರಿಧ್ರ ಪ್ರಸನ್ನ ಅವರನ್ನು 8-0 ಅಂತರದಲ್ಲಿ ಸೋಲಿಸಿ ಸೆಮಿಫೈನಲ್ಸ್ ಗೆ ಆಯ್ಕೆಯಾದ ಪದ್ಮಾವತಿ ಸೆಮಿಫೈನಲ್ಸ್ ಹಂತದಲ್ಲಿ ಅಮೈರಾ ಜಿ ಆನಂದ್ ಅವರನ್ನು 4-1, 1-4, 12-10 ಅಂತರದಲ್ಲಿ ಸೋಲಿಸಿ ಫೈನಲ್ಸ್ ಗೆ ಆಯ್ಕೆಯಾಗಿ, ಅಂತಿಮ ಸುತ್ತಿನ ಫೈನಲ್ಸ್ ನಲ್ಲಿ ಕಿಮಯಾ ಅವರನ್ನು ಒಂದು ಸೆಟ್ ಅನ್ನು ಸಹ ಕಳೆದುಕೊಳ್ಳದೆ ಸೋಲಿಸುವ ಮೂಲಕ ಟ್ರೋಫಿ ಮುಡಿಗೇರಿಸಿಕೊಂಡರು.
ಪದ್ಮಾವತಿಯ ನಿರ್ಭೀತ ವರ್ತನೆ, ಶಿಸ್ತು, ಶಾಂತತೆ ಮತ್ತು ಅಸಾಧಾರಣ ಹೋರಾಟದ ಮನೋಭಾವ ಪಂದ್ಯಾವಳಿ ಯುದ್ದಕ್ಕೂ ಕ್ರೀಡಾಸಕ್ತ ಪ್ರೇಕ್ಷಕರ ಗಮನ ಸೆಳೆಯಿತು.
ಸರ್ಕಾರಿ ಶಾಲೆಯ ಹಿನ್ನೆಲೆಯಿಂದ ಬಂದಿರುವ ಪದ್ಮಾವತಿಯ ಈ ಅಮೋಘ ಸಾಧನೆ ಹೊಸ ಭರವಸೆ ಮತ್ತು ಸ್ಫೂರ್ತಿಯ ಸಂದೇಶವನ್ನು ಸಾರಿದೆ. ಅವರ ಯಶಸ್ಸು, ಸಮರ್ಪಣೆ, ಶಿಸ್ತು ಮತ್ತು ಸರಿಯಾದ ಮಾರ್ಗದರ್ಶನವು ಯುವ ಪ್ರತಿಭೆಗಳು ಪರಿಮಿತಿಯನ್ನು ಮೀರಿ ರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಿ ಸ್ಪರ್ಧಿಸಲು ಸ್ಪೂರ್ತಿ ನೀಡಿದೆ.
ಪದ್ಮಾವತಿಯವರ ಗೆಲುವು ಸರ್ಕಾರಿ ಶಾಲೆಗಳು ಮತ್ತು ಸ್ಥಳೀಯ ಸಮುದಾಯಗಳಿಗೆ ಸಂದ ಹೆಮ್ಮೆಯ ಗೆಲುವಾಗಿದೆ. ಶೈಕ್ಷಣ ಮತ್ತು ಅಥ್ಲೆಟಿಕ್ಸ್ ಅನ್ನು ಸಮತೋಲನ ರೀತಿಯಲ್ಲಿ ಬದುಕಿನಲ್ಲಿ ಕೊಂಡೊಯ್ಯುತ್ತಿರುವ ಪದ್ಮಾವತಿ ಪ್ರಯಾಣವನ್ನು ಅವರ ಸರ್ಕಾರಿ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಮತ್ತು ಸಿಬ್ಬಂದಿಗಳು ಮುಕ್ತ ಕಂಠದಿಂದ ಶ್ಲಾಘಿಸಿದ್ದು, ಪದ್ಮಾವತಿಯವರ ಈ ಗಮನಾರ್ಹ ಸಾಧನೆಯು ಕೇವಲ ಚಾಂಪಿಯನ್‌ಶಿಪ್ ವಿಜಯಕ್ಕಿಂತ ಹೆಚ್ಚಿನದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪದ್ಮಾವತಿ ಎಟಿಪಿ ಪ್ರಮಾಣೀಕೃತ ತರಬೇತುದಾರ ರೋಹನ್ ತ್ರಿವೇದಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದು, ಶಿಸ್ತು, ಸದೃಢ ಮನಸ್ಥಿತಿ, ಕಠಿಣ ಪರಿಶ್ರಮದ ಫಲಶೃತಿಯಾಗಿ ಇಂದು ರಾಷ್ಟ್ರಮಟ್ಟದಲ್ಲಿ ಅಪ್ರತಿಮ ಟೆನ್ನಿಸ್ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ.
