ಸಿಂಧಿ ಪದವಿಪೂರ್ವ ಕಾಲೇಜಿನಲ್ಲಿ ಅದ್ದೂರಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆ

ಚೊಕ್ಕನಹಳ್ಳಿ, ಥಣಿಸಂದ್ರ ಮುಖ್ಯ ರಸ್ತೆಯಲ್ಲಿರುವ ಸಿಂಧಿ ಪದವಿಪೂರ್ವ ಕಾಲೇಜಿನಲ್ಲಿ ಜೂನ್ ತಿಂಗಳ ಐದನೇ ತಾರೀಖಿನಂದು ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪರಿಸರ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳ ವಿಶೇಷ ಸಭೆಯನ್ನು ಕರೆದು ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ನಂದ ಎನ್. ಅವರು ಮಾತನಾಡಿ ಪರಿಸರವು ನಮ್ಮ ಜೀವನಾಡಿ; ಅದನ್ನು ಉಳಿಸಿ ಬೆಳೆಸಬೇಕಾದ ಕೆಲಸ ನಮ್ಮೆಲ್ಲರದ್ದು ಎಂದು ತಿಳಿಸಿದರು. ನಂತರ ವಿದ್ಯಾರ್ಥಿಗಳಿಗೆ ಹಲವಾರು ಪ್ರಶ್ನೆಗಳನ್ನು ಕೇಳುವ ಮೂಲಕ ಪರಿಸರದ ಬಗ್ಗೆ ಕಾಳಜಿ ಮೂಡುವಂತೆ ಪ್ರೇರೇಪಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ನಂದ.ಎನ್. ಅವರು ಪರಿಸರ ಜಾಗೃತಿಗೆ ಸಂಬಂಧಿಸಿದಂತೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಗಿಡಗಳನ್ನು ಹಂಚುವ ಮೂಲಕ ಪರಿಸರ ಸಮೃದ್ಧಗೊಳಿಸುವ ಪಣ ತೊಡಲಾಯಿತು. ವಿದ್ಯಾರ್ಥಿಗಳ ಸಮ್ಮುಖದಲ್ಲಿ ಚಿತ್ರಪಟದಲ್ಲಿ ಹಸಿರು ಬಣ್ಣದಿಂದ ಕೈಗಳ ಮೂಲಕ ಮರದ ಚಿತ್ರ ಮೂಡಿಸಿ ಅರಣ್ಯದ ಮಹತ್ವವನ್ನು ಪ್ರಸ್ತುತಪಡಿಸಲಾಯಿತು.
ನಂತರ ನಡೆದ ಪರಿಸರ ಜಾಗೃತಿ ವಿಶೇಷ ಸಮಾರಂಭದಲ್ಲಿ ಪರಿಸರ ತಜ್ಞರು ಹಾಗೂ ಅಧ್ಯಕ್ಷರು, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಪರಿಸರ ಲಯನ್ ಜೆ. ಮಂಜುನಾಥ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ಮಾನವ ಬದುಕಿ ಉಳಿಯಲು ಅರಣ್ಯ ಅತ್ಯಂತ ಅಗತ್ಯವಾಗಿದೆ. ಇಂದು ನಾವು ಗಮನಿಸಿದಂತೆ ಅರಣ್ಯ ನಾಶ ತೀವ್ರಗತಿಯಲ್ಲಿ ನಡೆಯುತ್ತಿದೆ. ಅದರಿಂದಾಗಿ ಕೇವಲ ನಗರ ಪ್ರದೇಶವಲ್ಲದೆ ಹಳ್ಳಿಗಳಲ್ಲೂ ಕೂಡ ಉಷ್ಣ ಹವೆ ಬೀಸುವ ಸ್ಥಿತಿ ಉಂಟಾಗಿದೆ. ನಾವು ಇನ್ನಾದರೂ ಎಚ್ಚೆತ್ತುಕೊಂಡು ಪರಿಸರವನ್ನು ಉಳಿಸುವ ಪ್ರತಿಜ್ಞೆಯನ್ನು ಮಾಡಬೇಕಾಗಿದೆ. ಜೊತೆಗೆ ಕಾಡುಪ್ರಾಣಿಗಳ ಸಂಖ್ಯೆ ಗಣನೀಯವಾಗಿ ನಶಿಸುತ್ತಿದೆ; ಕಾಡು ಬೆಳೆಸಿ ಅವು ಆರಾಮವಾಗಿ ಓಡಾಡುವ ಪರಿಸರ ನಿರ್ಮಿಸಬೇಕಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿಶೇಷ ಗಮನಹರಿಸಬೇಕೆಂದು ಅವರು ಕರೆ ನೀಡಿದರು. ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ
ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಇದರ ಸದಸ್ಯರು ಹಾಗೂ ಪರಿಸರ ತಜ್ಞರಾದ ಸಾಗರಿಕಾ
ಅವರು ಮಾತನಾಡಿ ಪರಿಸರ ಸ್ವಚ್ಛತೆಯ ಅಗತ್ಯವನ್ನು ಒತ್ತಿ ಹೇಳುತ್ತಾ ಅವರು ವಿದ್ಯಾರ್ಥಿಗಳಾದ ನೀವು ಜಗತ್ತನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಹೊರಬೇಕೆಂದು ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ನಂದ. ಎನ್. ಅವರು ಪರಿಸರ ದಿನಾಚರಣೆ ಆಚರಿಸಬೇಕಾದ ಅಗತ್ಯವನ್ನು ತಿಳಿಸುವ ಜೊತೆಗೆ ಆಗಮಿಸಿದ್ದ ಅತಿಥಿಗಳನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು.
ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಲಾವಣ್ಯ ಅವರು ನಿರೂಪಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸಿಬಿ ಅವರು ವಂದನಾರ್ಪಣೆ ಸಲ್ಲಿಸಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀಮತಿ ಕಾಂಚನ ಅವರು ಹಾಗೂ ಕಾಲೇಜಿನ ಎಲ್ಲ ಉಪನ್ಯಾಸಕ ವರ್ಗದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪ್ಲಾಸ್ಟಿಕ್ ಮುಕ್ತ ಹಾಗೂ ಗಿಡಗಳನ್ನು ಉಳಿಸುವುದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಂದ ಫ್ಲಾಶ್ ಮಾಬ್ ಮಾಡಿಸಲಾಯಿತು.
ಕೊನೆಗೆ ಪರಿಸರ ಉಳಿಸುವ ಬಗ್ಗೆ ಮಕ್ಕಳಿಂದ ಮೆರವಣಿಗೆ ಮಾಡಿಸಿ ಪರಿಸರ ಜಾಗೃತಿಯನ್ನು ಮೂಡಿಸಲಾಯಿತು. ಮೆರವಣಿಗೆಯಲ್ಲಿ ಪರಿಸರದ ಮಹತ್ವದ ಬಗ್ಗೆ ಘೋಷಣೆಗಳ ಚಿತ್ರಫಲಕಗಳನ್ನು ಹಿಡಿದು ಮಕ್ಕಳು ಸುತ್ತಮುತ್ತ ಸುಮಾರು ಐದು ಕಿ.ಮೀ. ವರೆಗೆ ನಡೆದು ಸಕ್ರಿಯವಾಗಿ ಭಾಗವಹಿಸಿದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಎಲ್ಲ ಪದಾಧಿಕಾರಿಗಳು ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದಾರೆ.
ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸುವ ಮೂಲಕ ಯಶಸ್ವಿಯಾಗಿ ಸಂಪನ್ನಗೊಂಡಿತು.

Leave a Reply

Your email address will not be published. Required fields are marked *