ಮೌಲ್ಯಗಳನ್ನು ಉಳಿಸಿಕೊಂಡು ಮಾಧ್ಯಮ ಸೇವೆ ಮುನ್ನಡೆಸಿ : ಎಸ್ ಆರ್ ವಿಶ್ವನಾಥ್ ಕಿವಿಮಾತು

ಯಲಹಂಕ : ಟಿ ಆರ್ ಪಿ ಗೋಜಿಗೆ ಬಿದ್ದು ನಕಾರಾತ್ಮಕ ಸುದ್ದಿಗಳನ್ನೇ ಮಾಡುತ್ತಿರುವ ಇತ್ತೀಚಿನ ಮಾಧ್ಯಮಗಳು, ಒಳ್ಳೆಯ ಕೆಲಸಗಳನ್ನು ಮಾಡಿದವರನ್ನು ಬೆನ್ನು ತಟ್ಟಿ ಬೆಂಬಲಿಸುವ ಕೆಲಸವನ್ನು ಸಹ ಮಾಡಬೇಕು, ಬಹು ಮುಖ್ಯವಾಗಿ ಸಂವಿಧಾನದ ನಾಲ್ಕನೇ ಅಂಗ ಎನಿಸಿರುವ ಮಾಧ್ಯಮ ಕ್ಷೇತ್ರ ಮೌಲ್ಯಗಳನ್ನು ಉಳಿಸಿಕೊಂಡು ಮುಂದೆ ಸಾಗುವಂತಾಗಲಿ ಎಂದು ಶಾಸಕ ಸರ್ ವಿಶ್ವನಾಥ್ ಅಭಿಪ್ರಾಯ ಪಟ್ಟರು.

‘ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘ’ದ ವತಿಯಿಂದ ಯಲಹಂಕ ಉಪನಗರದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ‘ಪತ್ರಿಕಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ’ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ‘ಮಾಧ್ಯಮ ಕ್ಷೇತ್ರ ಉದ್ಯಮವಲ್ಲ ಇದೊಂದು ಸೇವಾ ಕ್ಷೇತ್ರ, ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಸಮಾಜವನ್ನು ಮುನ್ನಡೆಸುವ ಗುರುತರ ಜವಾಬ್ದಾರಿ ಹೊಂದಿರುವ ಮಾಧ್ಯಮ ಮಿತ್ರರು ಯಾವುದೇ ಆಮಿಷಗಳಿಗೆ ಬಲಿಯಾಗದೆ ನಿಷ್ಠೆ, ಪ್ರಾಮಾಣಿಕಂತೆಯಿಂದ ಕೆಲಸ ಮಾಡಿದರೆ ಒಳ್ಳೆಯ ಹೆಸರು ಗಳಿಸಬಹುದು, ಮುಂದಿನ ಪೀಳಿಗೆ ಸ್ಮರಿಸುವಂತೆ ಇತಿಹಾಸ ಸೃಷ್ಟಿಸಬಹುದು, ಆಸೆ ಆಮೀಷಗಳು, ಭ್ರಷ್ಟಾಚಾರಕ್ಕೆ ಬಿದ್ದ ಪುತ್ರಕರ್ತರು ಕುಖ್ಯಾತಿ ಗಳಿಸಬಹುದೇ ಹೊರತು ಪ್ರಖ್ಯಾತಿ ಪಡೆಯಲಾಗುವುದಿಲ್ಲ, ಪತ್ರಕರ್ತರು ಪತ್ರಿಕೋದ್ಯಮದ ಹೊರತಾಗಿ ಬದುಕಿನ ನಿರ್ವಹಣೆಗಾಗಿ ಏನಾದರೂ ಒಂದು ಹೆಚ್ಚುವರಿ ಉದ್ಯೋಗ ಅಥವಾ ಉದ್ಯಮವನ್ನು ಕೈಗೊಂಡರೆ ಒಳ್ಳೆಯ ಹೆಸರು ಗಳಿಸಬಹುದು, ಹಣದ ಲಾಲಸೆಗೆ ಬಿದ್ದ ಪತ್ರಕರ್ತರು ಬಹುಬೇಗ ಹೆಸರು ಕೆಡಿಸಿಕೊಂಡು ಮೂಲೆ ಗುಂಪಾಗುತ್ತಾರೆ, ಈ ದಿಸೆಯಲ್ಲಿ ಪತ್ರಿಕೋದ್ಯಮವನ್ನು ವೃತ್ತಿಯಾಗಿ ಸ್ವೀಕರಿಸುವುದಕ್ಕಿಂತ ಹೆಚ್ಚಾಗಿ ಪ್ರವೃತ್ತಿಯಾಗಿ ಸ್ವೀಕರಿಸಿದರು ಒಳ್ಳೆಯದು ಎಂದು ಕಿವಿಮಾತು ಹೇಳಿದರು.

ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ಸಂಸ್ಥಾಪಕ ಅಧ್ಯಕ್ಷ ಕಲಾವಿದ ವಿಷ್ಣು ಅವರು ಮಾತನಾಡಿ ‘ಉಳಿದೆಲ್ಲ ಕ್ಷೇತ್ರಗಳಲ್ಲಿರುವಂತೆ ಮಾಧ್ಯಮ ಕ್ಷೇತ್ರದಲ್ಲೂ ಸಹ ಹಲವಾರು ನಕಾರಾತ್ಮಕವಾದ ನಡೆಗಳಿವೆ ಅವುಗಳನ್ನು ಸರಿಪಡಿಸಲು ಪತ್ರಕರ್ತ ಸಂಘಟನೆಗಳು ಸೂಕ್ತ ತರಬೇತಿ, ಸಂವಹನ, ವಿಚಾರ ಸಂಕೀರ್ಣದಂತಹ ಕಾರ್ಯಕ್ರಮಗಳ ಮೂಲಕ ಪತ್ರಿಕೋದ್ಯಮವನ್ನು ಶುದ್ಧಗೊಳಿಸಲು ಪ್ರಯತ್ನಿಸ ಬೇಕಿದೆ, ಈ ನಿಟ್ಟಿನಲ್ಲಿ ನಮ್ಮ ಸಂಘ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಪ್ರಯತ್ನಿಸುತ್ತಿದೆ. ಸಂಘದ ಬೆಂಗಳೂರು ಉತ್ತರ ಘಟಕ ಇಂತಹದೊಂದು ಅತ್ಯುತ್ತಮ ಕಾರ್ಯಕ್ರಮವನ್ನು ರೂಪಿಸಿ, ಪೌರಕಾರ್ಮಿಕರು, ಮಾಜಿ ಯೋಧರು, ಪತ್ರಕರ್ತರು ಸಮಾಜ ಸೇವಾ ಧುರೀಣರನ್ನು ಸನ್ಮಾನಿಸಿರುವ ಬಗ್ಗೆ ಹೆಮ್ಮೆಯಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

‘ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘ’ದ ಬೆಂಗಳೂರು ಉತ್ತರ ಘಟಕದ ಅಧ್ಯಕ್ಷ ಪ್ರಕಾಶ್ ಬಾಗಲೂರು ಅವರು ಮಾತನಾಡಿ ಕಲಾವಿದ ವಿಷ್ಣು ಅವರಿಂದ ಸಂಸ್ಥಾಪನೆಗೊಂಡು, ಕಳೆದ ಹಲವು ವರ್ಷಗಳಿಂದ ಪತ್ರಕರ್ತರ ಹಿತ ರಕ್ಷಣೆಯ ಸತ್ಕಾರ್ಯವನ್ನು ಕೈಗೊಳ್ಳುತ್ತಾ ಬಂದಿರುವ ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘ ಬೆಂಗಳೂರು ಉತ್ತರ ಘಟಕಕ್ಕೆ ನನ್ನನ್ನು ಆಯ್ಕೆ ಮಾಡಿ, ಸೇವೆ ಸಲ್ಲಿಸಲು ಅವಕಾಶ ನೀಡಿರುವುದು ನನ್ನ ಸೌಭಾಗ್ಯ ಎಂದುಕೊಂಡಿದ್ದೇನೆ, ಸಂಘದ ಸಂಸ್ಥಾಪಕರು ಮತ್ತು ಹಿರಿಯ ಪದಾಧಿಕಾರಿಗಳ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಸಂಘವನ್ನು ಇನ್ನೂ ಹೆಚ್ಚು ಸಕ್ರಿಯಗೊಳಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.

ಕರ್ನಾಟಕ ಸಂಪಾದಕರು ಮತ್ತು ವರದಿಗಾರ ಸಂಘದ ರಾಜ್ಯ ಉಪಾಧ್ಯಕ್ಷ ಡಾ.ಜಿ.ವೈ.ಪದ್ಮ ನಾಗರಾಜ್ ಅವರು ಮಾತನಾಡಿ ‘ದೃಶ್ಯ ಮಾಧ್ಯಮಕ್ಕಿಂತ ಮುದ್ರಣ ಮಾಧ್ಯಮ ವಸ್ತು ನಿಷ್ಠ ದಾಖಲೆಯಾಗಿ ಉಳಿಯುವಂತಹ ಮಾಧ್ಯಮದ ಅಂಗವಾಗಿದ್ದು, ವರದಿ ಹೆಕ್ಕಿ ತರುವುದರಿಂದ ಹಿಡಿದು ಮುದ್ರಿಸಿ, ಪ್ರಸರಣ ಮಾಡುವವರೆಗೂ, ಎಲ್ಲೆಡೆಯಲ್ಲಿಯೂ ಹೆಚ್ಚು ಜಾಗೃತಿ ಮತ್ತು ಗಮನವಹಿಸಬೇಕು ಎಂದು ಪತ್ರಿಕೋದ್ಯಮ ಕ್ಷೇತ್ರದ ತಮ್ಮ ಸ್ವಾಅನುಭವವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಯೋಧ ಬಸವರಾಜ್ ಅವರಿಗೆ ವಿಶೇಷ ರೀತಿಯ ಸನ್ಮಾನ ನೀಡಿ ಗೌರವಿಸಲಾಯಿತು. ಇದೇ ವೇಳೆ ಪೌರ ಕಾರ್ಮಿಕರು, ಹಿರಿಯ ಪತ್ರಕರ್ತರು, ಸಮಾಜ ಸೇವಾ ಧುರೀಣರನ್ನು ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬ್ಯಾಟರಾಯನಪುರ ಗ್ರಾಮಾಂತರ ಮಂಡಲ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ಮುನಿಸ್ವಾಮಿ ಒಡೆಯರ್(ಆನಂದ್ ಮಾಸ್ಟರ್), ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ಪದಾಧಿಕಾರಿಗಳಾದ ಪ್ರೊ.ಸಮತಾ ದೇಶಮಾನೆ, ಸುಮಾ ಪುರುಷೋತ್ತಮ್, ಕೆ.ಮುನಿರಾಜು, ಪೊಲೀಸ್ ವಾರ್ತೆ ಸಂಪಾದಕ ಸುಭಾಷ್ ಆರ್.ಶೆಟ್ಟಿ, ಹಸಿರೇ ಉಸಿರು ಟ್ರಸ್ಟ್‌ ನ ಸಂಸ್ಥಾಪಕ‌ ಬೆಟ್ಟಹಲಸೂರು ಶ್ರೀನಿವಾಸಮೂರ್ತಿ, ಬಿಜೆಪಿ ಮುಖಂಡ ಸುಬ್ರಾಮ್ ನಾಯ್ಕ್, ಕ.ಸ.ವ.ಸಂಘದ ಬೆಂಗಳೂರು ಉತ್ತರ ಘಟಕದ ಗೌರವಾಧ್ಯಕ್ಷ ಸಿ.ಮುರಳೀಧರ್, ಪ್ರಧಾನ ಕಾರ್ಯದರ್ಶಿ ಆರ್.ಹನುಮಂತು, ಖಜಾಂಚಿ ಎಚ್.ಜಯಣ್ಣ, ಉಪಾಧ್ಯಕ್ಷೆ ರಮ್ಯ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಸಿ.ಮುನಿರಾಜು ಸೇರಿದಂತೆ ಇನ್ನಿತರ ಗಣ್ಯರಿದ್ದರು.

Leave a Reply

Your email address will not be published. Required fields are marked *